Site icon Vistara News

Asia Cup 2023 : ಏಷ್ಯಾಕಪ್ ಭವಿಷ್ಯ ಮುಂದಿನ ವಾರ ನಿರ್ಧಾರ

Asia Cup 2023

ಅಹಮದಾಬಾದ್​: ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಮಂಡಳಿಗಳ ನಡುವಿನ ಏಷ್ಯಾ ಕಪ್​ ಆತಿಥ್ಯ ಗಲಾಟೆ ಇನ್ನೂ ಕೊನೆಗೊಂಡಂತೆ ಕಾಣುತ್ತಿಲ್ಲ . ಆದಾಗ್ಯೂ ಮುಂದಿನ ವಾರದಲ್ಲಿ ಏಷ್ಯಾ ಕಪ್​​ಗೆ ಸಂಬಂಧಿಸಿದಂತೆ ನಿರ್ಣಾಯಕ ನಿರ್ಧಾರವೊಂದು ಪ್ರಕಟಗೊಳ್ಳಬಹುದು ಎಂದು ಹೇಳಲಾಗುತ್ತಿದೆ. ಪಾಕಿಸ್ತಾನವು ಪ್ರಸ್ತುತ ಕಾಂಟಿನೆಂಟಲ್ ಟೂರ್ನಿಯ ಆತಿಥ್ಯ ವಹಿಸಿದೆ. ಭದ್ರತಾ ಕಾರಣಗಳಿಂದಾಗಿ ತಂಡವನ್ನು ಗಡಿಯಾಚೆಗೆ ಕಳುಹಿಸಲು ಬಿಸಿಸಿಐ ಸಿದ್ಧವಿಲ್ಲ. ಇದು ವಿವಾದಕ್ಕೆ ಕಾರಣವಾಗಿದೆ. ತಟಸ್ಥ ತಾಣವೇ ಬಿಸಿಸಿಐ ಬೇಡಿಕೆ. ಆದರೆ, ನಮ್ಮಲ್ಲೇ ನಡೆಯಬೇಕು ಎಂಬುದು ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ಹಠಮಾರಿತನ. ಏನೇ ಆದರೂ ಮುಂದಿನ ವಾರದಲ್ಲಿ ಅದು ನಿರ್ಣಯವಾಗಲೇಬೇಕು.

ಪಾಕಿಸ್ತಾನವು ಈ ಪಂದ್ಯಾವಳಿಯನ್ನು ತಮ್ಮ ನೆಲದಲ್ಲಿ ನಡೆಸಲೇಬೇಕು ಎಂಬ ನಿರ್ಧಾರಕ್ಕೆ ಅಂಟಿಕೊಂಡಿದೆ. ಅದೂ ಆಗದಿದ್ದರೆ ಪಂದ್ಯಾವಳಿಯನ್ನು ಆಯೋಜಿಸಲು ಹೈಬ್ರಿಡ್ ಮಾದರಿಯನ್ನು ಪ್ರಸ್ತಾಪಿಸಿದೆ. ಪಿಸಿಬಿ ಮುಖ್ಯಸ್ಥ ನಜಾಮ್ ಸೇಥಿ ಅವರ ಪ್ರಕಾರ ಒಂದು ಸರಳ ಪರಿಹಾರವೆಂದರೆ ಪಾಕಿಸ್ತಾನವು ತನ್ನ ಏಷ್ಯಾ ಕಪ್ ಪಂದ್ಯಗಳನ್ನು ತವರಿನಲ್ಲಿ ಆಡಲು ಅವಕಾಶ ನೀಡುತ್ತದೆ ಮತ್ತು ಭಾರತವು ತನ್ನ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡುವುದು. ಆದರೆ, ಬಿಸಿಸಿಐ ಈ ಪ್ರಸ್ತಾಪವನ್ನು ಸಾರಾಸಗಟವಾಗಿ ತಳ್ಳಿ ಹಾಕಿದೆ. ಜತೆಗೆ ಜತೆಗೆ ಏಷ್ಯಾ ಕ್ರಿಕೆಟ್ ಕೌನ್ಸಿಲ್​ನ ಇತರ ದೇಶಗಳೂ ಬಿಸಿಸಿಐ ಬೆಂಬಲಕ್ಕೆ ನಿಂತಿವೆ. ಬಾಂಗ್ಲಾದೇಶ ಮತ್ತು ಶ್ರೀಲಂಕಾ ಕೂಡ ಪಂದ್ಯಾವಳಿಯನ್ನು ತಟಸ್ಥ ಸ್ಥಳದಲ್ಲಿ ಆಡಲು ಬಯಸುತ್ತಿವೆ.

ಟೂರ್ನಿ ಆಯೋಜನೆ ಬಗ್ಗೆ ಎಸಿಸಿಯಿಂದ ಇನ್ನೂ ಅಂತಿಮ ನಿರ್ಧಾರ ಪ್ರಕಟವಾಗಿಲ್ಲ. ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಮುಂದಿನ ವಾರದಲ್ಲಿ ಅಂತಿಮ ನಿರ್ಧಾರವೊಂದು ಪ್ರಕಟವಾಗಬಹುದು. ಶ್ರೀಲಂಕಾ ಕ್ರಿಕೆಟ್ (ಎಸ್ಎಲ್ಸಿ) ಅಧ್ಯಕ್ಷರಾಗಿ ಮರು ಆಯ್ಕೆಯಾದ ಶಮ್ಮಿ ಸಿಲ್ವಾ ಮಂಗಳವಾರ (ಮೇ 23) ಪ್ರಾರಂಭವಾಗುವ ಐಪಿಎಲ್ ಪ್ಲೇಆಫ್​ ಪಂದ್ಯದ ವೇಳೆ ಗಣ್ಯರ ಸಾಲಿನಲ್ಲಿ ಇರಲಿದ್ದಾರೆ. ಅವರೊಂದಿಗೆ ಬಿಸಿಸಿಐ ಚರ್ಚೆ ನಡೆಸಲಿದೆ. ಈ ವೇಳೆ ಕೊನೇ ತೀರ್ಮಾನ ಪ್ರಕಟವಾಗಬಹುದು ಎನ್ನಲಾಗಿದೆ.

ಇದನ್ನೂ ಓದಿ : IPL 2023 : ಐಪಿಎಲ್​ 16ನೇ ಆವೃತ್ತಿಯ ಲೀಗ್​ ಹಂತದ ಸಿಂಹಾವಲೋಕನ ಇಲ್ಲಿದೆ

“ಭಾರತದಲ್ಲಿ ಐಪಿಎಲ್ ಪ್ಲೇ ಆಫ್ ಪಂದ್ಯಗಳನ್ನು ವೀಕ್ಷಿಸಲು ನಮ್ಮನ್ನು ಆಹ್ವಾನಿಸಲಾಗಿದೆ ಮತ್ತು ಆ ಪ್ರವಾಸದ ಸಮಯದಲ್ಲಿ ಏಷ್ಯಾ ಕಪ್ 2023 ರ ಬಗ್ಗೆ ಚರ್ಚೆಗಳು ನಡೆಯಲಿವೆ. ಇನ್ನೂ ಯಾವುದನ್ನೂ ನಿರ್ಧರಿಸಲಾಗಿಲ್ಲ. ಆದರೆ ಏಷ್ಯಾಕಪ್ 2023 ರ ಹಣೆಬರಹವನ್ನು ಮುಂದಿನ ವಾರ ಅಥವಾ ಅದರೊಳಗೆ ನಿರ್ಧರಿಸಲಾಗುವುದು ಎಂದು ನಾನು ಭಾವಿಸುತ್ತೇನೆ” ಎಂದು ಸಿಲ್ವಾ ಭಾನುವಾರ ಶ್ರೀಲಂಕಾದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಏಷ್ಯಾಕಪ್ ಬಗ್ಗೆ ಬಿಸಿಸಿಐ ನಿಲುವನ್ನು ಅವಲಂಬಿಸಿ ಪಾಕಿಸ್ತಾನವು 50 ಓವರ್​​ಗಳ ವಿಶ್ವಕಪ್​ಗಾಗಿ ಭಾರತಕ್ಕೆ ಬರುವುದಾಗಿ ಹೇಳಿದೆ. ಹೀಗಾಗಿ ಈ ವಿವಾದ ಹೇಗೆ ಕೊನೆಗೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ. ಏಷ್ಯಾಕಪ್ ಬಳಿಕ ಭಾರತದಲ್ಲಿ ವಿಶ್ವಕಪ್ ನಡೆಯಲಿದೆ.

Exit mobile version