Site icon Vistara News

Asian Games 2023: ನೇಪಾಳ ವಿರುದ್ಧ 23 ರನ್​ ಗೆಲುವು; ಸೆಮಿಗೆ ಲಗ್ಗೆಯಿಟ್ಟ ಟೀಮ್​ ಇಂಡಿಯಾ

India vs Nepal, Quarter Final

ಹ್ಯಾಂಗ್‌ಝೌ: ಉತ್ಕೃಷ್ಟ ಮಟ್ಟದ ಬ್ಯಾಟಿಂಗ್​ ಮತ್ತು ಬೌಲಿಂಗ್​ ಪ್ರದರ್ಶನ ತೋರಿದ ಟೀಮ್​ ಇಂಡಿಯಾ ಏಷ್ಯನ್​ ಗೇಮ್ಸ್​(Asian Games 2023) ಕ್ರಿಕೆಟ್​ನಲ್ಲಿ ಸೆಮಿಫೈನಲ್​ ಪ್ರವೇಶಿಸಿದೆ. ನೇಪಾಳ(India vs Nepal, Quarter Final 1 ) ವಿರುದ್ಧದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ 23 ರನ್​ಗಳಿಂದ ಗೆದ್ದು ಬೀಗಿದೆ. ಯಶಸ್ವಿ ಜೈಸ್ವಾಲ್​(100 ರನ್​), ಅವೇಶ್​ ಖಾನ್​(3 ವಿಕೆಟ್​) ಮತ್ತು ರವಿ ಬಿಷ್ಣೋಯ್​(3 ವಿಕೆಟ್) ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಮಂಗಳವಾರ ಬೆಳಗ್ಗೆ ಇಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಭಾರತ ಜೈಸ್ವಾಲ್​ ಅವರ ಶತಕ ಮತ್ತು ಅಂತಿಮ ಹಂತದಲ್ಲಿ ರಿಂಕು ಸಿಂಗ್​ ಬ್ಯಾಟಿಂಗ್​ ಸಾಹಸದ ನೆರವಿನಿಂದ ಭಾರತ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 202 ರನ್​ ಬಾರಿಸಿತು. ಬೃಹತ್​ ಮೊತ್ತವನ್ನು ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ನೇಪಾಳ ತನ್ನ ಪಾಲಿನ ಆಟದಲ್ಲಿ 9 ವಿಕೆಟ್​ನಷ್ಟಕ್ಕೆ 179ರನ್​ ಗಳಿಸಿ ಕೇವಲ 23 ರನ್​ಗಳಿಂದ ಸೋಲು ಕಂಡಿತು.

ದಿಟ್ಟ ಹೋರಾಟ ನಡೆಸಿದ ನೇಪಾಳ

ಲೀಗ್​ ಹಂತದಲ್ಲಿ ಮಂಗೋಲಿಯಾ ವಿರುದ್ಧದ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸಿ 300 ರನ್​ಗಳ ಗಡಿ ದಾಟಿದ್ದ ನೇಪಾಳ ತಂಡ ಭಾರತ ವಿರುದ್ಧದ ಪಂದ್ಯದಲ್ಲಿಯೂ ತೀವ್ರ ಪೈಪೋಟಿ ನೀಡಿತು. ಒಂದು ಹಂತದಲ್ಲಿ ಭಾರತವನ್ನು ಮಣಿಸಿಸುವ ಸೂಚನೆಯನ್ನೂ ನೀಡಿತ್ತು. ಕುಶಾಲ್ ಭುರ್ಟೆಲ್(28) ಮತ್ತು 9 ಎಸೆತಗಳಲ್ಲಿ ಅರ್ಧ ಶತಕವನ್ನು ಸಿಡಿಸಿದ್ದ ದೀಪೇಂದ್ರ ಸಿಂಗ್(32) ಅವರು ಕ್ರೀಸ್​ ಆಕ್ರಮಿಸಿಕೊಂಡಾಗ ನೇಪಾಳ ಗೆಲ್ಲುವ ವಾತಾವರಣವಿತ್ತು. ಆದರೆ ರವಿ ಬಿಷ್ಣೋಯ್​ ಮತ್ತು ಅವೇಶ್​ ಖಾನ್​ ಅವರ ಅವೇಶದ ಬೌಲಿಂಗ್​ನಿಂದ ಗೆಲುವು ಭಾರತಕ್ಕೆ ದೊರೆಯಿತು. ಉಭಯ ಆಟಗಾರರು ಸೇರಿಕೊಂಡು ತಲಾ ಮೂರು ವಿಕೆಟ್ ಕೆಡವಿದರು.

ಚೊಚ್ಚಲ ಶತಕ ಸಂಭ್ರಮ

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಭಾರತದ ಪರ ಯುವ ಆರಂಭಿಕ ಡ್ಯಾಶಿಂಗ್​ ಓಪನರ್​ ಯಶಸ್ವಿ ಜೈಸ್ವಾಲ್ ಭಾರತಕ್ಕೆ ಅಮೋಘ ಆರಂಭ ಒದಗಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಅವರು ಸಿಕ್ಸರ್​, ಬೌಂಡರಿಯ ಮಳೆಯನ್ನೇ ಸುರಿಸಿದರು. ಅವರ ಬ್ಯಾಟಿಂಗ್​ ಆರ್ಭಟಕ್ಕೆ ನೇಪಾಳ ಬೌಲರ್​ಗಳು ಬಳಲಿ ಬೆಂಡಾದರು. 49 ಎಸೆತಗಳಿಂದ ಶತಕವನ್ನು ಪೂರ್ತಿಗೊಳಿಸಿದರು. ಇದರಲ್ಲಿ 74 ರನ್​ಗಳು ಬೌಂಡರಿ ಮತ್ತು ಸಿಕ್ಸರ್​ ಮೂಲಕವೇ ದಾಖಲಾಯಿತು. ಒಟ್ಟು 8 ಬೌಂಡರಿ ಮತ್ತು 7 ಸಿಕ್ಸರ್​ ಸಿಡಿಯಿತು. ಭರ್ತಿ 100 ರನ್​ಗಳಿಸಿದ ವೇಳೆ ಸಿಕ್ಸರ್​ ಬಾರಿಸುವ ಯತ್ನದಲ್ಲಿ ಕ್ಯಾಚ್​ ನೀಡಿ ಔಟಾದರು.

ಇದನ್ನೂ ಓದಿ Asian Games 2023: ಪಿ.ಟಿ ಉಷಾ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ

ಅಂತಿಮ ಹಂತದಲ್ಲಿ ಸಿಡಿದ ರಿಂಕು

ಈ ಬಾರಿಯ ಐಪಿಎಲ್​ನಲ್ಲಿ ಅಸಾಮಾನ್ಯ 5 ಸಿಕ್ಸರ್ ಬಾರಿಸಿ​ ಸಿಕ್ಸರ್​ ಕಿಂಗ್​ ಎಂದೇ ಖ್ಯಾತಿ ಪಡೆದಿರುವ ರಿಂಕು ಸಿಂಗ್​ ತಮ್ಮ ಎಂದಿನ ಶೈಲಿಯಲ್ಲಿಯೇ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಕ್ರೀಸ್​ಗೆ ಬಂದ ತಕ್ಷಣವೇ ಆಕ್ರಮಣಕಾರಿ ಆಟವಾಡಿದ ಅವರು ಕೇವಲ 15 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್​ ನೆರವಿನಿಂದ ಅಜೇಯ 37 ರನ್​ ಬಾರಿಸಿದರು. ಕಳೆದ ಐರ್ಲೆಂಡ್​ ವಿರುದ್ಧದ ಸರಣಿಯಲ್ಲೂ ರಿಂಕು ಉತ್ತಮ ಬ್ಯಾಟಿಂಗ್​ ನಡೆಸಿದ್ದರು. ರಿಂಕುಗೆ ಮತ್ತೊಂದು ತುದಿಯಲ್ಲಿ ಶಿವಂ ದುಬೆ ಕೂಡ ಉತ್ತಮ ಸಾಥ್​ ನೀಡಿದರು. ದುಬೆ 19 ಎಸೆತಗಳಿಂದ 25 ರನ್​ ಬಾರಿಸಿ ಅಜೇಯರಾಗಿ ಉಳಿದರು. ನೇಪಾಳ ಪರ ದೀಪೇಂದ್ರ ಸಿಂಗ್ ಐರಿ 31 ರನ್​ ನೀಡಿ 2 ವಿಕೆಟ್​ ಪಡೆದರು.

ಐಪಿಎಲ್​ ಹಾಗೂ ವಿಂಡೀಸ್​ ಎದುರಿನ ಟಿ20 ಸರಣಿಯಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದ್ದ ತಿಲಕ್​ ವರ್ಮ ಈ ಪಂದ್ಯದಲ್ಲಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್​ ನಡೆಸುವಲ್ಲಿ ವಿಫಲರಾದರು. ಕೇವಲ 2 ರನ್​ಗೆ ಆಟ ಮುಗಿಸಿದರು. ನಾಯಕ ಗಾಯಕ್ವಾಡ್​ 25 ರನ್​ಗಳ ಕೊಡುಗೆ ನೀಡಿದರು.

Exit mobile version