Site icon Vistara News

Asian Games 2023: ಸ್ಕೇಟಿಂಗ್​ನಲ್ಲಿ ಎರಡು ಪದಕ ಬೇಟೆಯಾಡಿದ ಭಾರತ

Speed Skating

ಹ್ಯಾಂಗ್ಝೌ: ಭಾರತದ ಮಹಿಳಾ ಮತ್ತು ಪುರುಷರ ಸ್ಕೇಟಿಂಗ್ ತಂಡವು ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ(Asian Games 2023) ಕಂಚಿನ ಪದಕ ಗೆದ್ದಿದೆ. ಸಂಜನಾ ಬತುಲಾ, ಕಾರ್ತಿಕಾ ಜಗದೀಶ್ವರನ್, ಹೀರಾಲ್ ಸಾಧು ಮತ್ತು ಆರತಿ ಕಸ್ತೂರಿ ರಾಜ್ ಅವರನ್ನೊಳಗೊಂಡ ಭಾರತದ ಮಹಿಳಾ ರೋಲರ್ ಸ್ಕೇಟಿಂಗ್ ತಂಡವು 3000 ಮೀಟರ್ ಸ್ಪೀಡ್ ಸ್ಕೇಟಿಂಗ್ ರಿಲೇಯಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಸೋಮವಾರ ನಡೆದ ಈ ಸ್ಪರ್ಧೆಯಲ್ಲಿ ಭಾರತ ಮಹಿಳಾ ತಂಡ ಕ್ವಾರ್ಟೆಟ್ 4 ನಿಮಿಷ ಮತ್ತು 34.861 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿತು. 4 ನಿಮಿಷ 19.447 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಚೈನೀಸ್ ತೈಪೆ ಚಿನ್ನದ ಪದಕ ಗೆದ್ದರೆ, ದಕ್ಷಿಣ ಕೊರಿಯಾ 4 ನಿಮಿಷ 21.146 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದುಕೊಂಡಿತು.

ಈ ಸಾಧನೆಯು ಏಷ್ಯನ್ ಗೇಮ್ಸ್‌ನಲ್ಲಿ ರೋಲರ್ ಸ್ಕೇಟಿಂಗ್‌ನಲ್ಲಿ ಭಾರತಕ್ಕೆ ಒಲಿದ 4ನೇ ಪದಕವಾಗಿದೆ. ಈ ಹಿಂದೆ 2010ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ರೋಲರ್ ಸ್ಕೇಟರ್‌ಗಳು ಪುರುಷರ ಮತ್ತು ಮಿಶ್ರ ಸ್ಕೇಟಿಂಗ್ ವಿಭಾಗಗಳಲ್ಲಿ ಎರಡು ಕಂಚಿನ ಪದಕ ಗೆದ್ದ ಸಾಧನೆ ಮಾಡಿತ್ತು. ಈ ಬಾರಿ 2 ಪದಕ ಲಭಿಸಿದೆ.

ಪುರುಷರ ತಂಡಕ್ಕೆ ಕಂಚು

ಪುರುಷರ ಸ್ಪೀಡ್ ಸ್ಕೇಟಿಂಗ್ 3000ಮೀ. ರಿಲೇಯಲ್ಲಿ ಕಂಚಿಗೆ ತೃಪ್ತಿಪಟ್ಟಿದೆ. ಆರ್ಯನ್ ಪಾಲ್, ಆನಂದ್ ಕುಮಾರ್, ಸಿದ್ಧಾಂತ್ ಮತ್ತು ವಿಕ್ರಮ್ ಅವರನ್ನೊಳಗೊಂಡ ತಂಡ 4:10.128 ಸೆಕೆಂಡುಗಳಲ್ಲಿ ಓಟವನ್ನು ಮುಗಿಸಿ ಮೂರನೇ ಸ್ಥಾನಿಯಾಯಿತು. ಸೋಮವಾರ ಭಾರತಕ್ಕೆ ಒಲಿದ ಎರಡನೇ ಪದಕ ಇದಾಗಿದೆ.Asian Games 2023

ಎಂಟನೇ ದಿನವಾದ ಭಾನುವಾರ ಭಾರತ ಮೂರು ಚಿನ್ನ, ಏಳು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳನ್ನು ಗೆದ್ದುಕೊಂಡಿತ್ತು. ಭಾನುವಾರದ ಅಂತ್ಯಕ್ಕೆ 13 ಚಿನ್ನ , 21 ಬೆಳ್ಳಿ ಹಾಗೂ 19 ಕಂಚಿನ ಪದಕಗಳೊಂದಿಗೆ ಒಟ್ಟು 53 ಪದಕಗಳು ಭಾರತದ ಪಾಲಾಗಿದೆ. ಇನ್ನೂ ಒಂದು ವಾರದ ಸ್ಪರ್ಧೆ ಬಾಕಿ ಇರುವಂತೆಯೇ ಟೂರ್ನಿಯಲ್ಲಿ ಪದಕಗಳ ಅರ್ಧ ಶತಕ ಬಾರಿಸಿದ ಸಾಧನೆ ಮಾಡಿತ್ತು.

ಇದನ್ನೂ ಓದಿ Asian Games 2023: ಶೂಟಿಂಗ್​ನಲ್ಲಿ ಮತ್ತೊಂದು ಪದಕ; ಕಂಚಿಗೆ ಗುರಿಯಿಟ್ಟ ಕಿನಾನ್ ಚೆನೈ

ಭಾನುವಾರ ನಡೆದ ಪುರುಷರ 5000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಅವಿನಾಶ್ ಸಾಬ್ಲೆ ಅವರು ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಚಿನ್ನದ ಪದಕವನ್ನು ಗೆದ್ದರು. ಶಾಟ್ ಪುಟ್ ಪಟು ತಜಿಂದರ್​ಪಾಲ್​ ಸಿಂಗ್ ತೂರ್ ಅವರು ಜಕಾರ್ತಾ 2018 ರಲ್ಲಿ ಗೆದ್ದ ಚಿನ್ನವನ್ನು ಯಶಸ್ವಿಯಾಗಿ ಉಳಿಸಿಕೊಂಡು ಚಿನ್ನದ ಸಂಖ್ಯೆಯನ್ನು ಹೆಚ್ಚಿಸಿದರು. ಪುರುಷರ ಟ್ರ್ಯಾಪ್ ಟೀಮ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತ ಚಿನ್ನ ಗೆದ್ದುಕೊಂಡಿತು. ಕಿನಾನ್ ಡೇರಿಯಸ್ ಚೆನೈ, ಜೊರಾವರ್ ಸಿಂಗ್ ಸಂಧು ಮತ್ತು ಪೃಥ್ವಿರಾಜ್ ತೊಂಡೈಮನ್ ಅವರನ್ನೊಳಗೊಂಡ ಭಾರತೀಯ ತಂಡವು 361 ಅಂಕಗಳನ್ನು ಗಳಿಸಲು ಸಹಾಯ ಮಾಡಿತು. ವೈಯಕ್ತಿಕ ಕ್ವಾಲಿಫಿಕೇಷನ್ ನಲ್ಲಿ ಕಿನಾನ್ (ಪ್ರಥಮ) ಮತ್ತು ಜೊರಾವರ್ (4ನೇ ಸ್ಥಾನ) ಫೈನಲ್ ಪ್ರವೇಶಿಸಿದರು. ಜೊರಾವರ್ ಐದನೇ ಸ್ಥಾನ ಪಡೆದರೆ, ಕಿನಾನ್ ಫೈನಲ್ನಲ್ಲಿ ಕಂಚಿನ ಪದಕ ಗೆದ್ದರು.

Exit mobile version