Site icon Vistara News

Asian Games 2023: 41 ವರ್ಷಗಳ ಬಳಿಕ ಕುದುರೆ ಸವಾರಿಯಲ್ಲಿ ಚಿನ್ನ ಗೆದ್ದ ಭಾರತ

India Win 1st Equestrian Gold

ಹ್ಯಾಂಗ್‌ಝೂ: ಏಷ್ಯನ್​ ಗೇಮ್ಸ್​ನ​(Asian Games 2023) ಕುದುರೆ ಸವಾರಿ(Equestrian) ಸ್ಪರ್ಧೆಯಲ್ಲಿ ಭಾರತ ಚಿನ್ನದ ಪದಕ ಜಯಿಸಿದೆ. ಈ ಸಾಧನೆಯೊಂದಿಗೆ 41 ವರ್ಷಗಳ ಬಳಿಕ ಭಾರತ ತಂಡ ಈ ಸ್ಪರ್ಧೆಯಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ. 1982ರಿಂದ ಆರಂಭವಾದ ಈ ಕ್ರೀಡೆಯಲ್ಲಿ ಭಾರತ ಮೊದಲ ಚಿನ್ನದ ಪದಕದ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ.

ಟೀಮ್ ಡ್ರೆಸ್ಸೇಜ್ ಈವೆಂಟ್‌ನಲ್ಲಿ ಭಾರತ ತಂಡವು ಒಟ್ಟು 209.205 ಅಂಕದೊಂದಿಗೆ ಚಿನ್ನದ ಪದಕ ಜಯಿಸಿದರೆ, ಚೀನಾ 204.882 ರೊಂದಿಗೆ ಬೆಳ್ಳಿ, ಹಾಂಗ್​ಕಾಂಗ್ ಚೀನಾ 204.852.28 ಕಂಚಿನ ಪದಕ ಜಯಿಸಿತು. ಸುದೀಪ್ತಿ ಹಜೇಲಾ, ದಿವ್ಯಾಕೃತಿ ಸಿಂಗ್, ಹೃದಯ್ ಛೇಡಾ, ಅನುಷ್ ಅಗರ್ವಾಲ್​​ ಚಿನ್ನಕ್ಕೆ ಕೊರಳೊಡ್ಡಿದ ಭಾರತದ ಕ್ರೀಡಾಪಟುಗಳು. 1982ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್ ವೇಳೆ ಭಾರತವು ಕಂಚಿನ ಪದಕ ಗೆದ್ದಿತ್ತು.

ಈ ಚಿನ್ನದ ಪದಕದೊಂದಿಗೆ ಭಾರತ ಸದ್ಯ ಟೂರ್ನಿಯಲ್ಲಿ ಮೂರು ಚಿನ್ನ ಗೆದ್ದಂತಾಗಿದೆ. ಇದಕ್ಕೂ ಮುನ್ನ ಮಹಿಳಾ ಕ್ರಿಕೆಟ್​ ಮತ್ತು 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ನಲ್ಲಿ ಪುರುಷರ ತಂಡವು ಚಿನ್ನದ ಪದಕ ಜಯಿಸಿತ್ತು. ಸದ್ಯ ಭಾರತ 14 ಪದಕಗೆದ್ದಿದೆ.

ಪ್ರಧಾನಿ ಮೋದಿಯಿಂದ ಮೆಚ್ಚುಗೆ

ಐತಿಹಾಸಿಕ ಸಾಧನೆ ಮಾಡಿದ ಈಕ್ವೆಸ್ಟ್ರಿಯನ್ ಡ್ರೆಸ್ಸೇಜ್ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. “ಹಲವು ದಶಕಗಳ ಬಳಿಕ ನಮ್ಮ ಈಕ್ವೆಸ್ಟ್ರಿಯನ್ ಡ್ರೆಸ್ಸೇಜ್ ತಂಡವು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿರುವುದು ಅತ್ಯಂತ ಹೆಮ್ಮೆಯ ವಿಷಯ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ರಾಷ್ಟ್ರಕ್ಕೆ ಗೌರವ ತಂದ ಸುದೀಪ್ತಿ ಹಜೇಲಾ, ದಿವ್ಯಾಕೃತಿ ಸಿಂಗ್, ಹೃದಯ್ ಛೇಡಾ, ಅನುಷ್ ಅಗರ್ವಾಲ್​ಗೆ ಅಭಿನಂದನೆಗಳು” ಎಂದು ಮೋದಿ ಟ್ವೀಟ್​ ಮಾಡಿದ್ದಾರೆ.

ಸೈಲಿಂಗ್​ನಲ್ಲಿ ಎರಡು ಪದಕ

ಇದಕ್ಕೂ ಮುನ್ನ ಪುರುಷರ ವಿಂಡ್‌ಸರ್ಫರ್ ಆರ್‌ಎಸ್: ಎಕ್ಸ್ ಈವೆಂಟ್‌ನಲ್ಲಿ ಇಬಾದ್​ ಅಲಿ(Eabad Ali) ಕಂಚಿನ ಪದಕ ಜಯಿಸಿದರೆ, ಮಹಿಳೆಯರ ಸಿಂಗ್ಸಲ್ಸ್​ ವಿಭಾಗದ ಸೈಲಿಂಗ್(ದೋಣಿ ಸ್ಪರ್ಧೆ) ಸ್ಪರ್ಧೆಯ ILCA4 ರೇಸ್ 11ನಲ್ಲಿ ನೇಹಾ ಠಾಕೂರ್(Neha Thakur) ಬೆಳ್ಳಿ ಪದಕ ಜಯಿಸಿದ್ದರು. ಒಟ್ಟಾರೆ ಮಂಗಳವಾರ ಭಾರತ ಮೂರು ಪದಕ ಜಯಿಸಿದಂತಾಗಿದೆ.

ಇದನ್ನೂ ಓದಿ ​Asian Games 2023: ಸೈಲಿಂಗ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ; ಕಂಚಿಗೆ ತೃಪ್ತಿಪಟ್ಟ ಇಬಾದ್​ ಅಲಿ

ಮಂಗಳವಾರ ನಡೆದ ಫೈನಲ್​ ಸುತ್ತಿನ ವಿಂಡ್‌ಸರ್ಫರ್ ಆರ್‌ಎಸ್: ಎಕ್ಸ್ ಈವೆಂಟ್‌ನಲ್ಲಿ ಇಬಾದ್​ ಅಲಿ 52 ಅಂಕದೊಂದಿಗೆ ಕಂಚಿನ ಪದಕ್ಕೆ ಕೊರಳೊಡ್ಡಿದರು. ಬಾಲಕಿಯರ ಡಿಂಗಿ ಐಎಲ್ ಸಿಎ4 ಸ್ಪರ್ಧೆಯಲ್ಲಿ ನೇಹಾ ಠಾಕೂರ್ 11 ರೇಸ್​ಗಳಲ್ಲಿ ಒಟ್ಟು 27 ಅಂಕಗಳಿಸಿ ಬೆಳ್ಳಿ ಗೆದ್ದು ಈ ಸ್ಪರ್ಧೆಯಲ್ಲಿ ಭಾರತಕ್ಕೆ ಐತಿಹಾಸಿಕ ಪದಕದ ಖಾತೆ ತೆರೆದಿದ್ದರು. ಥಾಯ್ಲೆಂಡ್‌ನ ನೊಪಸೋರ್ನ್ ಖುನ್ಬೂಂಜಾನ್ 16 ಅಂಕಗಳೊಂದಿಗೆ ಚಿನ್ನ ಪದಕ, ಸಿಂಗಾಪುರದ ಕೀರಾ ಮೇರಿ ಕಾರ್ಲೈಲ್ 28 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದರು.

ಹಾಕಿಯಲ್ಲಿ ಭರ್ಜರಿ ಗೆಲುವು

ಪುರುಷರ ಹಾಕಿ ತಂಡ ಭರ್ಜರಿ ಗೆಲುವು ಸಾಧಿಸಿದೆ. ಸಿಂಗಪುರ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡ 16-1 ಗೋಲುಗಳ ಅಂತರದ ಅಧಿಕಾರಯುತ ಗೆಲುವು ಸಾಧಿಸಿದೆ. ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಮಂದೀಪ್ ಸಿಂಗ್ ಅವರ ಹ್ಯಾಟ್ರಿಕ್ ಗೋಲು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಇದು ಭಾರತಕ್ಕೆ ಒಲಿದ ಸತತ ಎರಡನೇ ಗೆಲುವಾಗಿದೆ. ಭಾರತ ಮುಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜಪಾನ್ ಸವಾಲು ಎದುರಿಸಲಿದೆ. ಈ ಪಂದ್ಯ ಗುರುವಾರ ನಡೆಯಲಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡ ಉಜ್ಬೇಕಿಸ್ತಾನ ವಿರುದ್ಧ 16-0 ಅಂತರದ ಜಯ ಸಾಧಿಸಿತ್ತು.

ಭಾರತ ಪರ ಹರ್ಮನ್‌ಪ್ರೀತ್ (24, 39, 40, 42ನೇ ನಿಮಿಷ) ಮತ್ತು ಮಂದೀಪ್ (12, 30, 51ನೇ ನಿಮಿಷ), ಅಭಿಷೇಕ್ (51, 52ನೇ ನಿಮಿಷ), ವರುಣ್ ಕುಮಾರ್ (55, 55ನೇ ನಿಮಿಷ), ಲಲಿತ್ ಕುಮಾರ್ ಉಪಾಧ್ಯಾಯ (16ನೇ ನಿಮಿಷ), ಗುರ್ಜಂತ್ ಸಿಂಗ್ (22ನೇ ನಿಮಿಷ), ವಿವೇಕ್ ಸಾಗರ್ ಪ್ರಸಾದ್(23ನೇ ನಿಮಿಷ), ಮನ್ ಪ್ರೀತ್ ಸಿಂಗ್ (37ನೇ ನಿಮಿಷ), ಶಂಶೇರ್ ಸಿಂಗ್ (38ನೇ ನಿಮಿಷ) ಗೋಲು ಬಾರಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು.

Exit mobile version