Site icon Vistara News

Asian Games 2023: 10 ಮೀ. ಏರ್​ ಪಿಸ್ತೂಲ್​ ಮಿಶ್ರ ತಂಡಕ್ಕೆ ಒಲಿದ ಬೆಳ್ಳಿ ಪದಕ

Indian shooters Sarabjot Singh and Divya TS won the silver medal

ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್‌ ಶೂಟಿಂಗ್‌ನಲ್ಲಿ ಭಾರತದ ಶೂಟರ್​ಗಳ ಅಭೂತಪೂರ್ವ ಪ್ರದರ್ಶನ ಮತ್ತೆ ಮುಂದುವರಿದಿದೆ. ಶನಿವಾರ ನಡೆದ 10 ಮೀ. ಏರ್​ ಪಿಸ್ತೂಲ್​ ಮಿಶ್ರ ತಂಡ ಸ್ಪರ್ಧೆಯಲ್ಲಿ ಕರ್ನಾಟಕದ ದಿವ್ಯಾ ಟಿ.ಎಸ್.(Divya TS ) ಮತ್ತು ಅವರ ಜತೆಗಾರ ಸರಬ್​ಜೋತ್​ ಸಿಂಗ್(Sarabjot Singh)​ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಶುಕ್ರವಾರ ಶೂಟಿಂಗ್​ನಲ್ಲಿ 2 ಚಿನ್ನ ಹಾಗೂ 3 ಬೆಳ್ಳಿ ಪದಕ ಒಲಿದಿತ್ತು.

ದಾಖಲೆಯ ಪದಕ ಗೆದ್ದ ಭಾರತ

ಫೈನಲ್​ನಲ್ಲಿ ಚೀನಾ ವಿರುದ್ಧ ಉತ್ತಮ ಪ್ರದಶನ ತೋರಿದ ಭಾರತೀಯ ಜೋಡಿ ಕೇವಲ ನಾಲ್ಕು ಅಂಕಗಳ ಅಂತರದಿಂದ ಚಿನ್ನದ ಪದಕ ತಪ್ಪಿಸಿಕೊಂಡರು. 14-16ರಲ್ಲಿ ಸೋಲು ಕಂಡರು. ಶೂಟಿಂಗ್‌ನಲ್ಲಿ ಈ ಬಾರಿ ಭಾರತ 6 ಚಿನ್ನ, 8 ಬೆಳ್ಳಿ ಹಾಗೂ 5 ಕಂಚು ಸೇರಿ 19 ಪದಕ ಗೆದ್ದಿದೆ. ಇದು ಈ ಕೂಟದ ಇತಿಹಾಸದಲ್ಲೇ ಭಾರತದ ಶ್ರೇಷ್ಠ ಸಾಧನೆಯಾಗಿದೆ. 2006ರ ದೋಹಾ ಆವೃತ್ತಿಯಲ್ಲಿ ಭಾರತ 14 ಪದಕ ಗೆದ್ದಿದ್ದು, ಭಾರತದ ಈವರೆಗಿನ ಶ್ರೇಷ್ಠ ಪ್ರದರ್ಶನವಾಗಿತ್ತು. ಆದರೆ ಈ ಬಾರಿ ಇದನ್ನು ಮೀರಿ ನಿಂತಿದೆ. ಅಲ್ಲದೆ ಮುಂದಿನ ವರ್ಷ ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಪದಕ ಬರವಸೆಯನ್ನು ಮೂಡಿಸಿದೆ.

ಇದನ್ನೂ ಓದಿ Asian Games 2023 : ಸ್ಕ್ವಾಷ್​ನಲ್ಲಿ ಭಾರತಕ್ಕೆ ಕಂಚಿನ ಪದಕ

ನಿನ್ನೆ ನಡೆದ ಮಹಿಳೆಯರ 10 ಮೀ. ಏರ್ ಪಿಸ್ತೂಲ್‌ನಲ್ಲಿ ಇಶಾ, ಪಾಲಕ್ ಹಾಗೂ ದಿವ್ಯಾ ಟಿ.ಎಸ್. ಅವರಿದ್ದ ತಂಡ ಬೆಳ್ಳಿ ಪದಕ ಜಯಿಸಿತ್ತು. ಇದೀಗ ಶನಿವಾರವೂ ದಿವ್ಯಾ ಟಿ.ಎಸ್ ಮಿಶ್ರ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ತೋರಿದ್ದಾರೆ.

ಐತಿಹಾಸಿಕ ಕಂಚು ಗೆದ್ದ ಕಿರಣ್‌ ಬಲಿಯಾನ್‌

ಶುಕ್ರವಾರ ನಡೆದ ಮಹಿಳೆಯರ ಶಾಟ್‌ಪುಟ್‌ನಲ್ಲಿ ಕಿರಣ್‌ ಬಲಿಯಾನ್‌ ತಮ್ಮ 3ನೇ ಪ್ರಯತ್ನದಲ್ಲಿ 17.36 ಮೀ. ದೂರಕ್ಕೆ ಶಾಟ್​ಪುಟ್​ ಎಸೆದು ಕಂಚಿನ ಪದಕ ಪಡೆದ ಸಾಧನೆ ಮಾಡಿದ್ದರು. ಇದರೊಂದಿಗೆ ಏಷ್ಯನ್​ ಗೇಮ್ಸ್​ ಇತಿಹಾಸದಲ್ಲೇ ಮಹಿಳಾ ಶಾಟ್‌ಪುಟ್‌ನಲ್ಲಿ ದೇಶಕ್ಕೆ 2ನೇ ಪದಕ ಗದ್ದ ಹಿರಿಮೆಗೆ ಪಾತ್ರರಾಗಿದ್ದರು.

ಒಲಿಂಪಿಕ್ಸ್​ ಅರ್ಹತೆ ಪಡೆದ ನಿಖತ್​ ಜರೀನ್​

ಎರಡು ಬಾರಿಯ ವಿಶ್ವ ಚಾಂಪಿಯನ್‌ ಭಾರತದ ಸ್ಟಾರ್​ ಮಹಿಳಾ ಬಾಕ್ಸರ್​ ನಿಖತ್‌ ಜರೀನ್‌ ಅವರು ಶುಕ್ರವಾರ 50 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಗೆದ್ದು ಸೆಮಿಫೈನಲ್​ ಪ್ರವೇಶ ಪಡೆಯುವ ಜತೆಗೆ ಒಲಿಂಪಿಕ್ಸ್​ ಅರ್ಹತೆಯನ್ನು ಪಡೆದಿದ್ದರು. ಜತೆಗೆ 2024ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಬಾಕ್ಸರ್‌ ಎನ್ನುವ ಹಿರಿಮೆಗೂ ಪಾತ್ರರಾಗಿದ್ದರು. ಕ್ವಾರ್ಟರ್​ ಫೈನಲ್​ನಲ್ಲಿ ಜರೀನ್​ ಅವರು ಬಲಿಷ್ಠ ಪಂತ್​ಗಳ ಮೂಲಕ ಜೊರ್ಡನ್‌ನ ನಸ್ಸರ್‌ ಹನನ್‌ ವಿರುದ್ಧ ಕೇವಲ 2 ನಿಮಿಷಗಳಲ್ಲಿ ಗೆಲುವು ಸಾಧಿಸಿದ್ದರು.

Exit mobile version