Site icon Vistara News

Asian Games 2023: ಚಿನ್ನದ ನಿರೀಕ್ಷೆಯಲ್ಲಿ ಚೀನಾಕ್ಕೆ ತೆರಳಿದ ಭಾರತ ಪುರುಷರ ಕ್ರಿಕೆಟ್ ತಂಡ

Team India have taken off from Mumbai airport,

ಮುಂಬಯಿ: ಏಷ್ಯನ್​ ಗೇಮ್ಸ್​ನಲ್ಲಿ(Asian Games 2023) ಭಾರತದ ಮಹಿಳಾ ಕ್ರಿಕೆಟ್​ ತಂಡ ಐತಿಹಾಸಿಕ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ ಬೆನ್ನಲ್ಲೇ ಇದೀಗ ಪುರುಷರ ಕ್ರಿಕೆಟ್​ ತಂಡವೂ(Team India) ಚಿನ್ನದ ನಿರೀಕ್ಷೆಯಲ್ಲಿ ಚೀನಾಗೆ ತೆರಳಿದೆ. ಗುರುವಾರ ಬೆಳಗ್ಗೆ ಮುಂಬಯಿ ವಿಮಾನ ನಿಲ್ದಾಣದಿಂದ ಭಾರತೀಯ ಆಟಗಾರರು ಚೀನಾಗೆ ಪ್ರಯಾಣ ಬೆಳೆಸಿದರು. ತಂಡವನ್ನು ಋತುರಾಜ್​ ಗಾಯಕ್ವಾಡ್​ ಮುನ್ನಡೆಸಿದರೆ, ಎನ್​ಸಿಎ ಮುಖ್ಯಸ್ಥ ವಿವಿಎಸ್​ ಲಕ್ಷ್ಮಣ್​ ಅವರು ಕೋಚ್​ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್​ 3ರಂದು ಆಡಲಿದೆ. ಇದು ಕ್ವಾರ್ಟರ್​ ಫೈನಲ್​ ಪಂದ್ಯವಾಗಿದೆ.

ಚೊಚ್ಚಲ ಬಾರಿ ಭಾರತ ತಂಡ ಸ್ಪರ್ಧೆ

ಏಷ್ಯನ್​ ಗೇಮ್ಸ್​ ಕ್ರೀಡಾಕೂಟದಲ್ಲಿ ಕ್ರಿಕೆಟ್‌, ಪದಕ ಸ್ಪರ್ಧೆಯಾಗಿ ನಡೆದಿರುವುದು ಕೇವಲ ಎರಡು ಸಲ ಮಾತ್ರ. ಆದರೆ ಭಾರತ ಇದುವರೆಗೆ ಆಡಿಲ್ಲ. ಈ ಬಾರಿ ಪುರುಷರ ತಂಡ ಮತ್ತು ಮಹಿಳೆಯರ ತಂಡ ಕಣಕ್ಕಿಳಿಯುತ್ತಿದೆ. ಮಹಿಳಾ ತಂಡ ತನ್ನ ಮೊದಲ ಪ್ರಯತ್ನದಲ್ಲೇ ಚಿನ್ನ ಗೆದ್ದ ಸಾಧನೆ ಮಾಡಿದೆ. ಇದೀಗ ಪುರುಷರ ಸರದಿಯಾಗಿದೆ. 2010 (ಗ್ವಾಂಗ್‌ಝೂ) ಮತ್ತು 2014 (ಇಂಚಿಯಾನ್‌)ರ ಗೇಮ್ಸ್‌ನಲ್ಲಿ ಕ್ರಿಕೆಟ್‌ ಸ್ಪರ್ಧೆ ನಡೆದಿದ್ದು ಇಲ್ಲಿ ಕ್ರಮವಾಗಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಚಿನ್ನದ ಪದಕ ಗೆದ್ದಿತ್ತು. ಮಹಿಳೆಯರ ವಿಭಾಗದಲ್ಲಿ ಪಾಕಿಸ್ತಾನ ಎರಡೂ ಆವೃತ್ತಿಯಲ್ಲಿ ಚಿನ್ನ ಗೆದ್ದು ಮೆರೆದಾಡಿತ್ತು.

ಐಪಿಎಲ್​ ಸ್ಟಾರ್​ಗಳು

ಭಾರತ ತಂಡದಲ್ಲಿ ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಅಮೋಘ ಆಟ ಪ್ರದರ್ಶಿಸಿದ ಆಟಗಾರರೇ ಕಾಣಿಸಿಕೊಂಡಿದ್ದಾರೆ. ವಿಂಡೀಸ್​ ವಿರುದ್ಧದ ಟೆಸ್ಟ್​ ಮತ್ತು ಟಿ20 ಕ್ರಿಕೆಟ್​ ಸರಣಿಯಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸಿದ ಯಶಸ್ವಿ ಜೈಸ್ವಾಲ್, ಐಪಿಎಲ್​ ಸಿಕ್ಸರ್​ ಕಿಂಗ್​ ರಿಂಕು ಸಿಂಗ್​, ತಿಲಕ್​ ವರ್ಮ, ಗೂಗ್ಲಿ ಸ್ಟಾರ್​ ರವಿ ಬಿಷ್ಣೋಯ್, ಯಾರ್ಕರ್​ ಸ್ಟಾರ್ ಅರ್ಷದೀಪ್ ಸಿಂಗ್​ ತಂಡದಲ್ಲಿರುವ ಪ್ರಮುಖ ಆಟಗಾರರು. ಇವರನ್ನೊಳಗೊಂಡ ತಂಡವನ್ನು ನೋಡುವಾಗ ಭಾರತವೇ ಚಿನ್ನ ಗೆಲ್ಲುವ ನೆಚ್ಚಿನ ತಂಡವಾಗಿ ಗೋಚರಿಸಿದೆ.

ಇದನ್ನೂ ಓದಿ Asian Games 2023: ಶೂಟಿಂಗ್​ನಲ್ಲಿ ಚಿನ್ನ, ವುಶು ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದ ಭಾರತ

ಭಾರತ ತಂಡ

ಋತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿ.ಕೀ), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಆಕಾಶ್​ ದೀಪ್​, ಶಿವಂ ದುಬೆ, ಪ್ರಭಸಿಮ್ರಾನ್ ಸಿಂಗ್ (ವಿ.ಕೀ)

ಸ್ಟ್ಯಾಂಡ್‌ಬೈ ಆಟಗಾರರು: ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಸಾಯಿ ಸುದರ್ಶನ್.

ಮಹಿಳಾ ತಂಡದ ಚಿನ್ನದ ಸಾಧನೆ

ಸೋಮವಾರ ನಡೆದಿದ್ದ ಫೈನಲ್​ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್​ ತಂಡ ಮೊದಲ ಪ್ರಯತ್ನದಲ್ಲೇ ಐತಿಹಾಸಿಕ ಚಿನ್ನದ ಪದಕ ಜಯಿಸಿ ಮರೆದಾಡಿತ್ತು. ಅಲ್ಪ ಮೊತ್ತವನ್ನು ಸಂಘಟಿತ ಬೌಲಿಂಗ್​ ದಾಳಿಯ ಮೂಲಕ ನಿಯಂತ್ರಿಸಿ ಶ್ರೀಲಂಕಾ ವಿರುದ್ಧ ರೋಚಕ 19 ರನ್​ಗಳ ಗೆಲುವು ಸಾಧಿಸಿತ್ತು.

Exit mobile version