Site icon Vistara News

ಸೈಲಿಂಗ್​ನಲ್ಲಿ ಮೊದಲ ಪದಕ ಗೆದ್ದ ಭಾರತ; ಬೆಳ್ಳಿಯೊಂದಿಗೆ ಮಿನುಗಿದ ನೇಹಾ ಠಾಕೂರ್

Neha Thakur wins Silver in Girl’s Dinghy ILCA4 event

ಹ್ಯಾಂಗ್‌ಝೂ: ಏಷ್ಯನ್​ ಗೇಮ್ಸ್​(Asian Games 2023) ಕ್ರೀಡಾಕೂಟದ ಮೂರನೇ ದಿನ ಭಾರತಕ್ಕೆ ಮಿಶ್ರ ಫಲಿತಾಂಶ ದಾಖಲಾಗಿದೆ. ಮಹಿಳೆಯರ ಸಿಂಗ್ಸಲ್ಸ್​ ವಿಭಾಗದ ಸೈಲಿಂಗ್(ದೋಣಿ ಸ್ಪರ್ಧೆ) ಸ್ಪರ್ಧೆಯ ILCA4 ರೇಸ್ 11ನಲ್ಲಿ ನೇಹಾ ಠಾಕೂರ್(Neha Thakur) ಬೆಳ್ಳಿ ಪದಕ ಜಯಿಸಿದ್ದಾರೆ. ಇದು ಭಾರತಕ್ಕೆ ಈ ಸ್ಪರ್ಧೆಯಲ್ಲಿ ಒಲಿದ ಮೊತ್ತ ಮೊದಲ ಪದಕವಾಗಿದೆ. ಉಳಿದಂತೆ ಇಂದು ನಡೆದ ಶೂಟಿಂಗ್​ ಮತ್ತು ಫೆನ್ಸಿಂಗ್‌ನಲ್ಲಿ ಭಾರತ ಪದಕ ಗೆಲ್ಲುವಲ್ಲಿ ವಿಫಲವಾಗಿದೆ. ಸೋಮವಾರ 6 ಪದಕ ಗೆದ್ದಿದ್ದ ಭಾರತ ಮಂಗಳವಾರ ಕೇವಲ ಒಂದು ಪದಕವನ್ನಷ್ಟೇ ಜಯಿಸಿದೆ.

ಮಂಗಳವಾರ ನಡೆದ ಮಹಿಳೆಯರ ಸಿಂಗ್ಸಲ್ಸ್​ ವಿಭಾಗದ ಸೈಲಿಂಗ್ ಸ್ಪರ್ಧೆಯ ILCA4 ರೇಸ್ 11ನಲ್ಲಿ 17 ವರ್ಷದ ನೇಹಾ ಠಾಕೂರ್ ಅಮೋಘ ಪ್ರದರ್ಶನ ತೋರುವ ಮೂಲಕ ಭಾರತಕ್ಕೆ ಐತಿಹಾಸಿಕ ಬೆಳ್ಳಿ ಪದಕವನ್ನು ತಂದುಕೊಟ್ಟರು. ಸ್ಟೇಜ್​ ಹಂತದಲ್ಲಿ ಮುಂದಿದ್ದ ಅವರು ಅಂತಿಮ ಸುತ್ತಿನಲ್ಲಿ ಆಯಾಸಗೊಂಡ ಕಾರಣ ಒಟ್ಟು 27 ಅಂಕ ಗಳಿಸಿ ಬೆಳ್ಳಿ ಗೆದ್ದರು. ಥಾಯ್ಲೆಂಡ್‌ನ ನೊಪಸೋರ್ನ್ ಖುನ್ಬೂಂಜಾನ್ 16 ಅಂಕಗಳೊಂದಿಗೆ ಚಿನ್ನ, ಸಿಂಗಾಪುರದ ಕೀರಾ ಮೇರಿ ಕಾರ್ಲೈಲ್ 28 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದರು.

ಭವಾನಿಗೆ ಸೋಲು

ಪದಕ ಬರವಸೆಯ ಆಟಗಾರ್ತಿಯಾಗಿದ್ದ ಭಾರತದ ಫೆನ್ಸರ್ ಭವಾನಿ ದೇವಿ ಅವರು 8ನೇ ಸುತ್ತಿನಲ್ಲಿ ಸೋಲು ಕಂಡು ಪದಕ ರೇಸ್‌ನಿಂದ ಹೊರಬಿದ್ದಿದ್ದಾರೆ. ಗುಂಪು ಹಂತದಲ್ಲಿ ಅಜೇಯ ದಾಖಲೆ ಮುಂದುವರಿಸಿ ನಾಕೌಟ್ ಹಂತಕ್ಕೆ ಅಗ್ರ ಶ್ರೇಯಾಂಕಿತೆಯಾಗಿ ಕಾಲಿಟ್ಟಿದ್ದ ಅವರು 8ನೇ ಸುತ್ತಿನಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಸೋಲು ಕಂಡರು.

ಹಾಕಿಯಲ್ಲಿ ಭರ್ಜರಿ ಗೆಲುವು

ಪುರುಷರ ಹಾಕಿ ತಂಡ ಭರ್ಜರಿ ಗೆಲುವು ಸಾಧಿಸಿದೆ. ಸಿಂಗಪುರ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡ 16-1 ಗೋಲುಗಳ ಅಂತರದ ಅಧಿಕಾರಯುತ ಗೆಲುವು ಸಾಧಿಸಿದೆ. ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಮಂದೀಪ್ ಸಿಂಗ್ ಅವರ ಹ್ಯಾಟ್ರಿಕ್ ಗೋಲು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಇದು ಭಾರತಕ್ಕೆ ಒಲಿದ ಸತತ ಎರಡನೇ ಗೆಲುವಾಗಿದೆ. ಭಾರತ ಮುಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜಪಾನ್ ಸವಾಲು ಎದುರಿಸಲಿದೆ. ಈ ಪಂದ್ಯ ಗುರುವಾರ ನಡೆಯಲಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡ ಉಜ್ಬೇಕಿಸ್ತಾನ ವಿರುದ್ಧ 16-0 ಅಂತರದ ಜಯ ಸಾಧಿಸಿತ್ತು.

ಇದನ್ನೂ ಓದಿ Asian Games 2023: ಐತಿಹಾಸಿಕ ಚಿನ್ನ ಗೆದ್ದ ಭಾರತ ಮಹಿಳಾ ಕ್ರಿಕೆಟ್​ ತಂಡ; ಲಂಕಾ ವಿರುದ್ಧ ರೋಚಕ ಜಯ

ಭಾರತ ಪರ ಹರ್ಮನ್‌ಪ್ರೀತ್ (24, 39, 40, 42ನೇ ನಿಮಿಷ) ಮತ್ತು ಮಂದೀಪ್ (12, 30, 51ನೇ ನಿಮಿಷ), ಅಭಿಷೇಕ್ (51, 52ನೇ ನಿಮಿಷ), ವರುಣ್ ಕುಮಾರ್ (55, 55ನೇ ನಿಮಿಷ), ಲಲಿತ್ ಕುಮಾರ್ ಉಪಾಧ್ಯಾಯ (16ನೇ ನಿಮಿಷ), ಗುರ್ಜಂತ್ ಸಿಂಗ್ (22ನೇ ನಿಮಿಷ), ವಿವೇಕ್ ಸಾಗರ್ ಪ್ರಸಾದ್(23ನೇ ನಿಮಿಷ), ಮನ್ ಪ್ರೀತ್ ಸಿಂಗ್ (37ನೇ ನಿಮಿಷ), ಶಂಶೇರ್ ಸಿಂಗ್ (38ನೇ ನಿಮಿಷ) ಗೋಲು ಬಾರಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು.

Exit mobile version