ಹ್ಯಾಂಗ್‌ಝೌ: ಭಾರತದ ಮಹಿಳಾ ಬಾಕ್ಸರ್ ಪ್ರೀತಿ ಪವಾರ್(Preeti Pawar) ಇಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್ನಲ್ಲಿ(Asian Games 2023) ಕಂಚಿನ ಪದಕ್ಕೆ ಪಂಚ್ ನೀಡಿದ್ದಾರೆ. 54 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಪ್ರೀತಿ ಸೆಮಿಫೈನಲ್ನಲ್ಲಿ ಸೋಲು ಕಂಡು ಕಂಚಿಗೆ ತೃಪ್ತಿಪಟ್ಟರು. ಇದು ಮಂಗಳವಾರ ಭಾರತಕ್ಕೆ ಒಲಿದ ಎರಡನೇ ಕಂಚಿನ ಪದಕವಾಗಿದೆ.
ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪ್ರೀತಿ ಚೀನಾದ ಯುವಾನ್ ಚಾಂಗ್ ವಿರುದ್ಧ ಮೊದಲ ಸುತ್ತಿನಲ್ಲಿ 4-1 ಅಂತರದಿಂದ ಸೋಲು ಕಂಡರು. ಆದರೆ ದ್ವಿತೀಯ ಸುತ್ತಿನಲ್ಲಿ ತಮ್ಮ ಪವರ್ ಪಂಚ್ಗಳ ಮೂಲಕ ಗೆದ್ದು ಪಂದ್ಯದಲ್ಲಿ ಹಿಡಿತ ಸಾಧಿಸಿದರು. ಆ ಬಳಿಕದ ಸುತ್ತಿನಲ್ಲಿ ಇದೇ ಲಯವನ್ನು ಮುಂದುವರಿಸಲು ಸಾಧ್ಯವಾಗದೆ ಅಂತಿಮವಾಗಿ ವಿರುದ್ಧ 5-0 ಅಂಕದಿಂದ ಸೋಲು ಕಂಡರು. ಬಾಕ್ಸಿಂಗ್ ವಿಭಾಗದಲ್ಲಿ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಮೇಲೆ ಚಿನ್ನದ ಪದಕವೊಂದನ್ನು ನಿರೀಕ್ಷೆ ಮಾಡಲಾಗಿದೆ. ಅರ್ಚರಿ ವಿಭಾಗದಲ್ಲಿಯೂ 2 ಪದಕ ಲಭಿಸುವ ಸಾಧ್ಯತೆ ಇದೆ. ಸದ್ಯ ಭಾರತ 62 ಪದಕ ಗೆದ್ದು ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ.
BRONZE FOR PREETI🥉
— SAI Media (@Media_SAI) October 3, 2023
🇮🇳's Preeti clinches the Bronze🥉 after going down in a hard-fought semifinal bout at the #AsianGames2022 in 54kg Weight Category 💥🥊
With this medal, the Bronze 🥉 count of India stands at 2️⃣5️⃣ currently
Well done, champ✅#Cheer4India#JeetegaBharat… pic.twitter.com/W4vVR72X09
ಪುರುಷರ ಕ್ಯಾನೋ ತಂಡಕ್ಕೆ ಕಂಚು
ಇಂದು ಬೆಳಗ್ಗೆ ನಡೆದ ಪುರುಷರ ಕ್ಯಾನೋ ಡಬಲ್ 1000 ಮೀ ಫೈನಲ್‌ನಲ್ಲಿ ಭಾರತದ ಅರ್ಜುನ್ ಸಿಂಗ್(Arjun Singh) ಮತ್ತು ಸುನಿಲ್ ಸಿಂಗ್(Sunil Singh) ಅವರು ಕಂಚಿನ ಪದಕ ಗೆದ್ದಿದ್ದರು. ಭಾರತದ ಜೋಡಿಯು 3:53.329 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಈ ಸ್ಪರ್ಧೆಯಲ್ಲಿ ಭಾರತಕ್ಕೆ ಇಲಿದ 2ನೇ ಪದಕವಾಗಿದೆ. ಇದಕ್ಕೂ ಮುನ್ನ 1994 ರಲ್ಲಿ ಹಿರೋಷಿಮಾದಲ್ಲಿ ನಡೆದಿದ್ದ ಕೂಟದಲ್ಲಿ ಭಾರತದ ಜಾನಿ ರೋಮೆಲ್ ಮತ್ತು ಸಿಜಿ ಕುಮಾರ್ ಸದಾನಂದನ್ ಕಂಚು ಗೆದ್ದಿದ್ದರು. ಉಜ್ಬೇಕಿಸ್ತಾನದ ಖೋಲ್ಮುರಾಡೋವ್ ಮತ್ತು ನುರಿಸ್ಲೋಮ್ ತುಖ್ತಾಸಿನ್ ಉಗ್ಲಿ (3:43.796 ಸೆಕೆಂಡು) ಚಿನ್ನ ಗೆದ್ದರೆ, ಕಜಕಿಸ್ತಾನದ ಟಿಮೊಫಿ ಯೆಮೆಲಿಯಾನೊವ್ ಮತ್ತು ಸೆರ್ಗೆ ಯೆಮೆಲಿಯಾನೊವ್ (3:49.991 ಸೆಕೆಂಡ್) ಬೆಳ್ಳಿ ಗೆದ್ದರು.
ಸೋಮವಾರ ಅಥ್ಲೀಟ್ಗಳ ಭರ್ಜರಿ ಪದಕ ಬೇಟೆ
ಸೋಮವಾರ ನಡೆದಿದ್ದ ಮಹಿಳೆಯರ 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಪಾರುಲ್ ಚೌಧರಿ ಬೆಳ್ಳಿ ಹಾಗೂ ಪ್ರೀತಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. ಇನ್ನು ಮಹಿಳೆಯರ ಲಾಂಗ್ ಜಂಪ್‌ನಲ್ಲಿ 22 ವರ್ಷದ ಆ್ಯನ್ಸಿ ಸೋಜನ್‌ಗೆ ಬೆಳ್ಳಿ ಪದಕ ಲಭಿಸಿತ್ತು. ತಮ್ಮ 5ನೇ ಪ್ರಯತ್ನದಲ್ಲಿ 6.63 ದೂರಕ್ಕೆ ಜಿಗಿದ ಆ್ಯನ್ಸಿ 2ನೇ ಸ್ಥಾನಿಯಾದರು.
4x 400 ಮೀಟರ್ ಮಿಶ್ರ ರಿಲೇ ತಂಡ ವಿಭಾಗದಲ್ಲಿ ಭಾರತ ಬೆಳ್ಳಿ ಪದಕ ಗೆದ್ದಿತ್ತು. 3 ನಿಮಿಷ 14.25 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ ಶ್ರೀಲಂಕಾ 2ನೇ ಸ್ಥಾನ ಪಡೆದಿತ್ತು. ಆದರೆ ಲಂಕಾದ ಸ್ಪರ್ಧಿ ಟ್ರ್ಯಾಕ್‌ನ ಲೇನ್ ಮೀರಿ ಓಡಿದ್ದರಿಂದ ತಂಡವನ್ನು ಅನರ್ಹಗೊಳಿಸಿ ಭಾರತಕ್ಕೆ ಬೆಳ್ಳಿ ನೀಡಲಾಗಿತ್ತು. ಭಾರತದ ತಂಡದಲ್ಲಿ ಮುಹಮ್ಮದ್ ಅಜ್ಮಲ್, ವಿದ್ಯಾ ರಾಮ್‌ರಾಜ್, ರಾಜೇಶ್ ರಮೇಶ್, ಶುಭಾ ವೆಂಕಟೇಶನ್ 3 ನಿಮಿಷ 14.34 ಸೆಕೆಂಡ್‌ಗಳಲ್ಲಿ ಕ್ರಮಿಸಿ ಮೂರನೇ ಸ್ಥಾನ ಪಡೆದಿದ್ದರು.