Site icon Vistara News

Asian Games 2023: ಮಿಕ್ಸೆಡ್‌ ಡಬಲ್ಸ್​ನಲ್ಲಿ ಚಿನ್ನ ಗೆದ್ದ ಬೋಪಣ್ಣ-ರುತುಜಾ ಜೋಡಿ

Rohan Bopanna and Rutuja

ಹ್ಯಾಂಗ್‌ಝೌ: ಏಷ್ಯನ್​ ಗೇಮ್ಸ್​ನಲ್ಲಿ(Asian Games 2023) ರೋಹನ್‌ ಬೋಪಣ್ಣ(Rohan Bopanna) ಮತ್ತು ರುತುಜಾ ಭೋಸಲೆ(Rutuja Bhosale) ಮಿಕ್ಸೆಡ್‌ ಡಬಲ್ಸ್ ಟೆನಿಸ್​​ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಇದು ಶನಿವಾರ ಭಾರತಕ್ಕೆ ಒಲಿದ ದ್ವಿತೀಯ ಪದಕವಾಗಿದೆ. ಇದಕ್ಕೂ ಮುನ್ನ ನಡೆದಿದ್ದ 10 ಮೀ. ಏರ್​ ಪಿಸ್ತೂಲ್​ ಮಿಶ್ರ ತಂಡ ಬೆಳ್ಳಿ ಪದಕ ಜಯಿಸಿತ್ತು.

ಶನಿವಾರ ನಡೆದ ಫೈನಲ್​ನಲ್ಲಿ ತೈವಾನ್​ನ ಒಂಬತ್ತನೇ ಶ್ರೇಯಾಂಕದ ತ್ಸುಂಗ್-ಹಾವೊ ಹುವಾಂಗ್ ಮತ್ತು ಎನ್-ಶುವೊ ಲಿಯಾಂಗ್ ವಿರುದ್ಧ 2-6, 6-3, 10-4 ಅಂತರದಿಂದ ಗೆದ್ದು ಚಿನ್ನದ ಪದಕ ಗೆದ್ದು ಮೆರೆದಾಡಿದರು. ಸೆಮಿಫೈನಲ್​ನಲ್ಲಿ ಬೋಪಣ್ಣ ಮತ್ತು ರುತುಜಾ ಜೋಡಿ ಚೈನಿಸ್​ ತೈಪೆಯ ಚಾನ್​ ಚಿಂಗ್​-ಯು ಸ್ಯು ವಿರುದ್ಧ 6-1, 3-6,(10-4) ಅಂತರದಲ್ಲಿ ಗೆದ್ದು ಫೈನಲ್​ ಪ್ರವೇಶ ಪಡೆದಿತ್ತು.

ಮೊದಲ ಸುತ್ತಿನಲ್ಲಿ ಸೋಲು

ಮೊದಲ ಸೆಟ್ ನಲ್ಲಿ 2-6 ರಲ್ಲಿ ಸೋಲು ಕಂಡ ಭಾರತೀಯ ಜೋಡಿ ಎರಡನೇ ಸೆಟ್​ನಲ್ಲಿ ಆಕ್ರಮಣ ಆಟಕ್ಕೆ ಒತ್ತು ನೀಡಿ ಪಂದ್ಯದಲ್ಲಿ ಹಿಡಿತ ಸಾಧಿಸಿತು. ನಿರ್ಣಾಯಕ ಸೆಟ್​ನಲ್ಲಿ ಟೈ-ಬ್ರೇಕರ್‌ಗೆ ಸಾಗಿದ ಪಂದ್ಯವನ್ನು 10-4 ಅಂತರದಲ್ಲಿ ಗೆಲ್ಲುವಲ್ಲಿ ಭಾರತೀಯ ಜೋಡಿ ಯಶಸ್ವಿಯಾಯಿತು. ಈ ಪಂದ್ಯ 1 ಗಂಟೆ 14 ನಿಮಿಷಗಳಲ್ಲಿ ಅಂತ್ಯ ಕಂಡಿತು. ಈ ಪದಕ ಗೆಲ್ಲುವ ಮೂಲಕ ಕಳೆದ 6 ಏಷ್ಯಡ್​ ಟೂರ್ನಿಯಲ್ಲಿ ಟೆನಿಸ್​ನಲ್ಲಿ ಭಾರತ ಕನಿಷ್ಠ ಒಂದು ಚಿನ್ನವನ್ನು ಗೆಲ್ಲುತ್ತಿದ್ದ ದಾಖಲೆಯನ್ನು ಮುಂದುವರಿಸಿತು.

43 ವರ್ಷದ ಕೊಡಗಿನವರಾದ ರೋಹನ್ ಬೋಪಣ್ಣ ಅವರು ಕಳೆದ ತಿಂಗಳು ನಡೆದಿದ್ದ ಯುಎಸ್ ಓಪನ್‌ 2023ರ(US Open 2023) ಪುರುಷರ ಡಬಲ್ಸ್ ವಿಭಾಗದಲ್ಲಿ ರನ್ನರ್​ಅಪ್​ ಸ್ಥಾನ ಪಡೆದಿದ್ದರು. ಇದೇ ವರ್ಷ ದೋಹಾ ಮತ್ತು ಇಂಡಿಯನ್ ವೆಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು.  

ಶೂಟಿಂಗ್​ನಲ್ಲಿ ಬೆಳ್ಳಿ

ಶನಿವಾರ ಬೆಳಗ್ಗೆ ನಡೆದ 10 ಮೀ. ಏರ್​ ಪಿಸ್ತೂಲ್​ ಮಿಶ್ರ ತಂಡ ಸ್ಪರ್ಧೆಯಲ್ಲಿ ಕರ್ನಾಟಕದ ದಿವ್ಯಾ ಟಿ.ಎಸ್.(Divya TS ) ಮತ್ತು ಅವರ ಜತೆಗಾರ ಸರಬ್​ಜೋತ್​ ಸಿಂಗ್(Sarabjot Singh)​ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು. ಶುಕ್ರವಾರ ಶೂಟಿಂಗ್​ನಲ್ಲಿ 2 ಚಿನ್ನ ಹಾಗೂ 3 ಬೆಳ್ಳಿ ಪದಕ ಒಲಿದಿತ್ತು.

ಇದನ್ನೂ ಓದಿ Asian Games 2023: 10 ಮೀ. ಏರ್​ ಪಿಸ್ತೂಲ್​ ಮಿಶ್ರ ತಂಡಕ್ಕೆ ಒಲಿದ ಬೆಳ್ಳಿ ಪದಕ

ಫೈನಲ್​ನಲ್ಲಿ ಚೀನಾ ವಿರುದ್ಧ ಉತ್ತಮ ಪ್ರದಶನ ತೋರಿದ ಭಾರತೀಯ ಜೋಡಿ ಕೇವಲ ನಾಲ್ಕು ಅಂಕಗಳ ಅಂತರದಿಂದ ಚಿನ್ನದ ಪದಕ ತಪ್ಪಿಸಿಕೊಂಡರು. 14-16ರಲ್ಲಿ ಸೋಲು ಕಂಡರು. ಶೂಟಿಂಗ್‌ನಲ್ಲಿ ಈ ಬಾರಿ ಭಾರತ 6 ಚಿನ್ನ, 8 ಬೆಳ್ಳಿ ಹಾಗೂ 5 ಕಂಚು ಸೇರಿ 19 ಪದಕ ಗೆದ್ದಿದೆ. ಇದು ಈ ಕೂಟದ ಇತಿಹಾಸದಲ್ಲೇ ಭಾರತದ ಶ್ರೇಷ್ಠ ಸಾಧನೆಯಾಗಿದೆ. 2006ರ ದೋಹಾ ಆವೃತ್ತಿಯಲ್ಲಿ ಭಾರತ 14 ಪದಕ ಗೆದ್ದಿದ್ದು, ಭಾರತದ ಈವರೆಗಿನ ಶ್ರೇಷ್ಠ ಪ್ರದರ್ಶನವಾಗಿತ್ತು. ಆದರೆ ಈ ಬಾರಿ ಇದನ್ನು ಮೀರಿ ನಿಂತಿದೆ. ಅಲ್ಲದೆ ಮುಂದಿನ ವರ್ಷ ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಪದಕ ಬರವಸೆಯನ್ನು ಮೂಡಿಸಿದೆ.

ಒಲಿಂಪಿಕ್ಸ್​ ಅರ್ಹತೆ ಪಡೆದ ನಿಖತ್​ ಜರೀನ್​

ಎರಡು ಬಾರಿಯ ವಿಶ್ವ ಚಾಂಪಿಯನ್‌ ಭಾರತದ ಸ್ಟಾರ್​ ಮಹಿಳಾ ಬಾಕ್ಸರ್​ ನಿಖತ್‌ ಜರೀನ್‌ ಅವರು ಶುಕ್ರವಾರ 50 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಗೆದ್ದು ಸೆಮಿಫೈನಲ್​ ಪ್ರವೇಶ ಪಡೆಯುವ ಜತೆಗೆ ಒಲಿಂಪಿಕ್ಸ್​ ಅರ್ಹತೆಯನ್ನು ಪಡೆದಿದ್ದರು. ಜತೆಗೆ 2024ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಬಾಕ್ಸರ್‌ ಎನ್ನುವ ಹಿರಿಮೆಗೂ ಪಾತ್ರರಾಗಿದ್ದರು. ಕ್ವಾರ್ಟರ್​ ಫೈನಲ್​ನಲ್ಲಿ ಜರೀನ್​ ಅವರು ಬಲಿಷ್ಠ ಪಂತ್​ಗಳ ಮೂಲಕ ಜೊರ್ಡನ್‌ನ ನಸ್ಸರ್‌ ಹನನ್‌ ವಿರುದ್ಧ ಕೇವಲ 2 ನಿಮಿಷಗಳಲ್ಲಿ ಗೆಲುವು ಸಾಧಿಸಿದ್ದರು.

Exit mobile version