Site icon Vistara News

Asian Games 2023: ಕೇವಲ ಒಂದು ಅಂಕದ ಅಂತರದಲ್ಲಿ ವಿಷ್ಣು​ಗೆ ಕೈತಪ್ಪಿದ ಬೆಳ್ಳಿ ಪದಕ

Vishnu Saravanan (Sailor)

ಹ್ಯಾಂಗ್‌ಝೂ: ಬುಧವಾರ ಇಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ಪುರುಷರ ಡಿಂಗಿ ಐಎಲ್‌ಸಿಎ-7(ಸೈಲಿಂಗ್​) ಸ್ಪರ್ಧೆಯಲ್ಲಿ ಭಾರತದ ನಾವಿಕ ವಿಷ್ಣು ಸರವಣನ್(Vishnu Saravanan) ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಫೈನಲ್​ನಲ್ಲಿ 11-ರೇಸ್‌ಗಳ ತೀವ್ರ ಸ್ಪರ್ಧೆಯಲ್ಲಿ 34 ಅಂಕಗಳಿಸಿದ ಸರವಣನ್ ಕೇವಲ ಒಂದು ಅಂಕದ ಅಂತರದಿಂದ ಬೆಳ್ಳಿ ಪದದಿಂದ ವಂಚಿತರಾದರು. ದಕ್ಷಿಣ ಕೊರಿಯಾದ ಜೀಮಿನ್ 33 ಅಂಕಗಳೊಂದಿಗೆ ಬೆಳ್ಳಿ ಗೆದ್ದರು. ಸಿಂಗಾಪುರದ ಜುನ್ ಹಾನ್ ರಿಯಾನ್ ಲೊ 26 ಅಂಕಗಳಿಸಿ ಚಿನ್ನಕ್ಕೆ ಕೊರಳೊಡ್ಡಿದರು. ಸದ್ಯ ಭಾರತ 22 ಪದಕ ಗೆದ್ದು 7ನೇ ಸ್ಥಾನ ಪಡೆದಿದೆ. 5, ಚಿನ್ನ, 7 ಬೆಳ್ಳಿ ಮತ್ತು 10 ಕಂಚು ಒಳಗೊಂಡಿದೆ.

ಗಾಳಿ ಕೊರತೆಯಿಂದ ಪದಕ ವಂಚಿತರಾದ ನೇತ್ರಾ

ಗಾಳಿಯ ಕೊರತೆಯಿಂದಾಗಿ ಮಹಿಳೆಯರ ಸಿಂಗಲ್ ಡಿಂಗಿ ILCA-6 ಸ್ಪರ್ಧೆಯಲ್ಲಿ ಭಾರತದ ನೇತ್ರಾ ಕುಮನನ್(Nethra Kumanan) ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅಂತಿಮ 12ನೇ ಸುತ್ತು ರದ್ದುಗೊಂಡ ಕಾರಣ ನೇತ್ರಾಗೆ ಹಿನ್ನಡೆಯಾಗಿತು. ಸೈಲಿಂಗ್​ನಲ್ಲಿ ಭಾರತದ ಸ್ಪರ್ಧೆ ಕೊನೆಗೊಂಡಿದೆ. ಮಂಗಳವಾರ ನೇಹಾ ಠಾಕೂರ್ ಬೆಳ್ಳಿ ಹಾಗೂ ಇಬಾದ್ ಅಲಿ ಕಂಚು ಜಯಿಸಿದ್ದರು. 2018ರಲ್ಲಿಯೂ ಭಾರತದ ಸೈಲಿಂಗ್​ ಪಟುಗಳು ಒಂದು ಬೆಳ್ಳಿ ಮತ್ತು ಎರಡು ಕಂಚು ಗೆದ್ದಿದ್ದರು. ಈ ಬಾರಿಯೂ ಇದೇ ಸಾಧನೆಯನ್ನು ಮಾಡಿದ್ದಾರೆ.

ಒಲಿಂಪಿಕ್ಸ್​ ಕಡೆ ಗಮನ

2017ರಿಂದ ರಾಷ್ಟ್ರೀಯ ಚಾಂಪಿಯನ್ ಆಗಿರುವ ವಿಷ್ಣು ಅವರು ಟೋಕಿಯೊ ಒಲಿಂಪಿಕ್ ಕೂಟದಲ್ಲಿ ಏಷ್ಯಾ ಮಟ್ಟದಲ್ಲಿ ಎರಡನೇ ಶ್ರೇಷ್ಠ ಸೈಲರ್​ ಆಗಿದ್ದರು. 2019ರಲ್ಲಿ ಕ್ರೊವೇಷ್ಯಾದಲ್ಲಿ ನಡೆದ 21 ವರ್ಷದೊಳಗಿನವರ ವಿಭಾಗದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಪ್ಯಾರಿಸ್​ನಲ್ಲಿ ಮುಂದಿನ ವರ್ಷ ನಡೆಯುವ ಒಲಿಂಪಿಕ್ಸ್​ನಲ್ಲಿ ಉತ್ತಮ ಸಾಧನೆ ತೋರಿ ಪದಕ ಗೆಲ್ಲುವುದು ಅವರ ಮುಂದಿನ ಯೋಜನೆಯಾಗಿದೆ.

ಶೂಟಿಂಗ್​ನಲ್ಲಿ ಶ್ರೇಷ್ಠ ಸಾಧನೆ

ಬುಧವಾರ ಭಾರತ ಶೂಟಿಂಗ್​ನಲ್ಲಿ ಶ್ರೇಷ್ಠ ಸಾಧನೆ ಮಾಡಿದೆ. ಒಂದೇ ದಿನ ಏಳು ಪದಕ ಗೆದ್ದ ಸಾಧನೆ ಮಾಡಿದೆ. ಪುರುಷರ ಶೂಟಿಂಗ್​ ಸ್ಕೀಟ್​ ಈವೆಂಟ್​ನಲ್ಲಿ(skeet event) ಅನಂತ್​ಜೀತ್ ಸಿಂಗ್ ನರುಕಾ(Anant Singh Naruka) ಭಾರತಕ್ಕೆ ಐತಿಹಾಸಿಕ ಬೆಳ್ಳಿ ಪದಕ ಗೆದ್ದರೆ, ಮಹಿಳೆಯರ 50 ಮೀಟರ್ 3 ರೈಫಲ್ ಪೊಸಿಷನ್​ ವಿಭಾಗದ ಫೈನಲ್​ನಲ್ಲಿ 469.6 ಅಂಕಗಳನ್ನು ಗಳಿಸುವ ಮೂಲಕ ಭಾರತದ ಶೂಟರ್ ಸಿಫ್ಟ್ ಕೌರ್ ಸಮ್ರಾ ಚಿನ್ನ, ಮಹಿಳೆಯರ 25 ಮೀಟರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಮನು ಭಾಕರ್, ಇಶಾ ಸಿಂಗ್ ಮತ್ತು ರಿದಮ್ ಸಾಂಗ್ವಾನ್ ಚಿನ್ನ ಗೆದ್ದ ಸಾಧನೆ ಮಾಡಿದರು.  50 ಮೀಟರ್ ರೈಫಲ್ 3 ಪಿ ಸ್ಪರ್ಧೆಯಲ್ಲಿ  ಮಹಿಳಾ ಶೂಟಿಂಗ್ ತ್ರಿವಳಿಗಳಾದ ಸಿಫ್ಟ್ ಕೌರ್ ಸಾಮ್ರಾ, ಆಶಿ ಚೌಕ್ಸೆ ಮತ್ತು ಮಾನಿನಿ ಕೌಶಿಕ್ ಬೆಳ್ಳಿ ಪದಕಕ್ಕೆ ಕೊರಳೊಡಿದ್ದಾರೆ.

ಇದನ್ನೂ ಓದಿ Asian Games 2023: ಅಥ್ಲೀಟ್‌ಗಳನ್ನು ಅಭಿನಂದಿಸುವ ಭರದಲ್ಲಿ ಆಶಾ ಭೋಂಸ್ಲೆ,ಗಂಭೀರ್, ಲಕ್ಷ್ಮಣ್ ಭಾರಿ ಎಡವಟ್ಟು

ಉಳಿದ ಸ್ಪರ್ಧೆಗಳ ಫಲಿತಾಂಶ ವಿವರ

ವುಶು: ಪುರುಷರ ದಾವೋಶು ಫೈನಲ್​​ನಲ್ಲಿ ರೋಹಿತ್ ಜಾಧವ್ 8ನೇ ಸ್ಥಾನ.

ಈಜು: ಮಹಿಳೆಯರ 100 ಮೀಟರ್ ಬಟರ್ ಫ್ಲೈ ಹೀಟ್ಸ್ ನಲ್ಲಿ ನೀನಾ ವೆಂಕಟೇಶ್ 1:03:89 ಸಮಯದೊಂದಿಗೆ ಫೈನಲ್ ಗೆ ಅರ್ಹತೆ ಪಡೆಯಲು ವಿಫಲರಾದರು.

ಮಹಿಳೆಯರ 100 ಮೀಟರ್ ಬ್ಯಾಕ್​ಸ್ಟ್ರೋಕ್​ ಹೀಟ್ಸ್​​ನಲ್ಲಿ ಮಾನಾ ಪಟೇಲ್ 13ನೇ ಸ್ಥಾನ ಪಡೆದರು.

ಫೆನ್ಸಿಂಗ್: 16ನೇ ಸುತ್ತಿನಲ್ಲಿ ಸಿಂಗಾಪುರ ವಿರುದ್ಧ 30-45 ಅಂತರದಲ್ಲಿ ಸೋತ ಭಾರತ ಪುರುಷರ ತಂಡ.

ಸೈಕ್ಲಿಂಗ್: ರೊನಾಲ್ಡೊ ಸಿಂಗ್ 16ನೇ ಸುತ್ತಿನಲ್ಲಿ ಜಪಾನ್​​ನ ಶಿಂಜಿ ನಕಾನೊ ವಿರುದ್ಧ ಸೋತರು.

ಸ್ಕ್ವಾಷ್: ಕುವೈತ್ ವಿರುದ್ಧ ಭಾರತಕ್ಕೆ 3-0 ಅಂತರದ ಗೆಲುವು.

ವುಶು: ಸ್ಟಾರ್​ ಮಹಿಳಾ ವುಶು ಆಟಗಾರ್ತಿ ರೋಶಿಬಿನಾ ದೇವಿ ಅವರು 60 ಕೆಜಿ ವಿಭಾಗದ ಸಿಮಿಫೈನಲ್​ನಲ್ಲಿ ಗೆದ್ದು ಫೈನಲ್​ ಪ್ರವೇಶಿಸಿದ್ದಾರೆ. ಪದಕದ ಹೋರಾಟ ಗುರುವಾರ ನಡೆಯಲಿದೆ.

Exit mobile version