ನವದೆಹಲಿ: ಏಷ್ಯನ್ ಗೇಮ್ಸ್ 2023 ರ (Asian Games) ಫೈನಲ್ನಲ್ಲಿ ಚೀನಾ ವಿರುದ್ಧ 2-3 ಅಂತರದಿಂದ ವೀರೋಚಿt ಸೋಲನ್ನು ಅನುಭವಿಸಿದ ನಂತರ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ ಬೆಳ್ಳಿ ಪದಕ ಗೆದ್ದಿದೆ. ಕಾಂಟಿನೆಂಟಲ್ ಈವೆಂಟ್ ನಲ್ಲಿ ಭಾರತ ಬೆಳ್ಳಿ ಗೆದ್ದಿರುವುದು ಇದೇ ಮೊದಲು. ಹೀಗಾಗಿ ಭಾರತದ ಪಾಲಿಗೆ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ವಿನೂತನ ಸಾಧನೆಯಾಗಿದೆ. ಭಾರತ 2-0 ಮುನ್ನಡೆ ಸಾಧಿಸುವುದರೊಂದಿಗೆ ಫೈನಲ್ ಪಂದ್ಯ ಪ್ರಾರಂಭವಾಯಿತು. ಆದರೆ, ಪುಟಿದೆದ್ದ ಚೀನಾ ಚಿನ್ನದ ಪದಕ ತನ್ನದಾಗಿಸಿಕೊಂಡಿತು.
ಮೊದಲ ಪಂದ್ಯದಲ್ಲಿ ಲಕ್ಷ್ಯ ಸೇನ್ 22-20, 14-21 ಮತ್ತು 21-18 ಅಂತರದಲ್ಲಿ ಶಿ ಯುಕಿ ವಿರುದ್ಧ ಜಯ ಸಾಧಿಸಿದರು. ನಂತರ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಭಾರತದ ಮುನ್ನಡೆಯನ್ನು ವಿಸ್ತರಿಸಿದರು. ಭಾರತದ ಜೋಡಿ ಚೀನಾದ ಲಿಯಾಂಗ್ ವೀಕೆಂಗ್-ವಾಂಗ್ ಚಾಂಗ್ ಜೋಡಿಯನ್ನು 21-15, 21-18 ನೇರ ಗೇಮ್ ಗಳಿಂದ ಸೋಲಿಸಿದರು.
ಇದನ್ನೂ ಓದಿ : Asian Games 2023: ಶೂಟಿಂಗ್ನಲ್ಲಿ ಮತ್ತೊಂದು ಪದಕ; ಕಂಚಿಗೆ ಗುರಿಯಿಟ್ಟ ಕಿನಾನ್ ಚೆನೈ
ಬಳಿಕ ನಡೆದ ಸಿಂಗಲ್ಸ್ನಲ್ಲಿ ಕಿಡಂಬಿ ಶ್ರೀಕಾಂತ್ 22-24, 9-21 ಅಂತರದಲ್ಲಿ ಲಿ ಶಿ ಫೆಂಗ್ ವಿರುದ್ಧ ಸೋತರು. ಎರಡನೇ ಡಬಲ್ಸ್ ಪಂದ್ಯದಲ್ಲಿ ಸಾಯಿ ಪ್ರತೀಕ್-ಧ್ರುವ್ ಕಪಿಲಾ ಜೋಡಿ 6-21, 15-21 ಅಂತರದಲ್ಲಿ ಸೋಲನುಭವಿಸಿದರು.
ಮಿಥುನ್ ಮಂಜುನಾಥ್ ಅಂತಿಯ ಸಿಂಗಲ್ಸ್ ಹಣಾಹಣಿಯಲ್ಲಿ ವೆನ್ ಹಾಂಗ್ ಯಾನ್ ಅವರನ್ನು ಎದುರಿಸಿದರು ಆದರೆ ಚೀನಿ ಆಟಗಾರ ಸಂಪೂರ್ಣವಾಗಿ ಪಾರಮ್ಯ ಮರೆದರು. ವೆನ್ ಹಾಂಗ್ ಯಾನ್ 21-12, 21-4 ಅಂತರದಲ್ಲಿ ಭಾರತದ ವಿರುದ್ಧ ಜಯ ಸಾಧಿಸಿದದರು. ಸೆಮಿಫೈನಲ್ನಲ್ಲಿ ದಕ್ಷಿಣ ಕೊರಿಯಾವನ್ನು 3-2 ಗೋಲುಗಳಿಂದ ಸೋಲಿಸಿದ ನಂತರ ಭಾರತ ಫೈನಲ್ಗೆ ಪ್ರವೇಶಿಸಿತ್ತು. ಎಲ್ಲಾ ಮೂರು ಗೆಲುವುಗಳು ಸಿಂಗಲ್ಸ್ ಪಂದ್ಯಗಳಿಂದ ಬಂದಿದ್ದವು, ಮತ್ತೊಂದೆಡೆ, ಚೀನಾ ಜಪಾನ್ ಅನ್ನು 3-1 ಅಂತರದಿಂದ ಸೋಲಿಸಿ ಫೈನಲ್ಗೆ ಪ್ರವೇಶಿಸಿತ್ತು.
ಸ್ಟೀಪಲ್ ಚೇಸ್ನಲ್ಲಿ ಚಿನ್ನದ ಪದಕ
19ನೇ ಆವೃತ್ತಿಯ ಏಷ್ಯನ್ ಗೇಮ್ಸ್ ನಲ್ಲಿ (Asian Games) ಭಾನುವಾರ ನಡೆದ ವಿಶ್ವ ಚಾಂಪಿಯನ್ ಶಿಪ್ ನ 3000 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಓಟಗಾರ ಅವಿನಾಶ್ ಸಾಬ್ಲೆ ಐತಿಹಾಸಿಕ ಚಿನ್ನ ಗೆದ್ದಿದ್ದಾರೆ. ಏಷ್ಯಾಡ್ನಲ್ಲಿ ತನ್ನ ಅಥ್ಲೆಟಿಕ್ಸ್ ಅಭಿಯಾನವನ್ನು ಪ್ರಾರಂಭಿಸಿದ ಭಾರತವು ಟ್ರ್ಯಾಕ್ ಮತ್ತು ಫೀಲ್ಡ್ನಲ್ಲಿ ಸಾಬ್ಲೆ ಮೂಲಕ ತನ್ನ ಮೊದಲ ಚಿನ್ನದ ಪದಕವನ್ನು ಗಳಿಸಿಕೊಂಡಿತು. ಅವರು 3000 ಮೀಟರ್ ಓಟವನ್ನು 8: 19.50 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ ಮೊದಲ ಸ್ಥಾನ ಪಡೆದರು.
ಏಷ್ಯನ್ ಗೇಮ್ಸ್ನಲ್ಲಿ 3000 ಮೀಟರ್ ಸ್ಟೀಪಲ್ಚೇಸ್ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಪುರುಷರ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಸಾಬ್ಲೆ ಪಾತ್ರರಾಗಿದ್ದಾರೆ. ಹ್ಯಾಂಗ್ಝೌ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ನಲ್ಲಿ ಭಾರತದ ಖಾತೆಯನ್ನು ತೆರೆದಿರುವ 29 ವರ್ಷದ ಸಾಬ್ಲೆ , ಸುಧಾ ಸಿಂಗ್ ಅವರೊಂದಿಗೆ ವಿಶೇಷ ಪಟ್ಟಿಯಲ್ಲಿ ಸೇರಿದ್ದಾರೆ. ಗುವಾಂಗ್ನಲ್ಲಿ 2010 ರ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ 3000 ಮೀಟರ್ ಸ್ಟೀಪಲ್ಚೇಸ್ನಲ್ಲಿ ಸುಧಾ ಚಿನ್ನ ಗೆದ್ದಿದ್ದರು.
ಇದನ್ನೂ ಓದಿ : Asian Games 2023: ಟ್ರ್ಯಾಪ್ ಶೂಟಿಂಗ್ನಲ್ಲಿ ಚಿನ್ನ,ಬೆಳ್ಳಿ ಗೆದ್ದ ಭಾರತ
ಏಷ್ಯನ್ ಗೇಮ್ಸ್ ನ 3000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಸಾಬ್ಲೆ ಐತಿಹಾಸಿಕ ಚಿನ್ನ ಗೆದ್ದ ನಂತರ, ಶಾಟ್ಪಟ್ ಪಟು ತಜಿಂದರ್ ಪಾಲ್ ಸಿಂಗ್ ತೂರ್ ತಮ್ಮ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಳ್ಳುವ ಮೂಲಕ ಭಾರತದ ಪದಕಗಳ ಪಟ್ಟಿಯನ್ನು ಹಿಗ್ಗಿಸಿದರು.ಪುರುಷರ ಫೈನಲ್ನಲ್ಲಿ ತೂರ್ ತಮ್ಮ ಸೌದಿ ಅರೇಬಿಯಾದ ಪ್ರತಿಸ್ಪರ್ಧಿಯನ್ನು ಸೋಲಿಸಿದರು. 2018 ರ ಜಕಾರ್ತಾ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರಾಗಿರವು ತೂರ್ ತಮ್ಮ ಆರನೇ ಮತ್ತು ಕೊನೆಯ ಪ್ರಯತ್ನದಲ್ಲಿ 20.36 ಮೀಟರ್ ಎಸೆಯುವ ಮೂಲಕ ಮೊಹಮ್ಮದ್ ದಾವುಡಾ ಟೊಲೊ ಅವರನ್ನು ಸೋಲಿಸಿದರು.