Site icon Vistara News

Asian Games: ಐತಿಹಾಸಿಕ ಚಿನ್ನ ಗೆದ್ದ ಚಿರಾಗ್‌-ಸಾತ್ವಿಕ್‌ ಜೋಡಿ; ಶತಕದ ಗಡಿ ದಾಟಿದ ಪದಕ ಸಂಖ್ಯೆ

Satwik-Chirag

ಹ್ಯಾಂಗ್ಝೌ: ಭಾರತದ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಜೋಡಿ(Satwik-Chirag) ಏಷ್ಯನ್​ ಗೇಮ್ಸ್​ನಲ್ಲಿ ಐತಿಹಾಸಿಕ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಶನಿವಾರ ನಡೆದ ಡಬಲ್ಸ್​ ಬ್ಯಾಡ್ಮಿಂಟನ್​ ಫೈನಲ್‌ನಲ್ಲಿ ದ.ಕೊರಿಯಾದ ಚೊಯಿ ಸೊಲ್ಯು-ಕಿಮ್‌ ವೊನ್ಹೊ ಜೋಡಿಯನ್ನು 21-18, 21-16 ಗೇಮ್​ಗಳಿಂದ ಮಣಿಸಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.

ಮೊದಲ ಚಿನ್ನ

ಈ ಸಾಧನೆ ಮಾಡಿದ ಭಾರತದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಚಿರಾಗ್‌-ಸಾತ್ವಿಕ್‌(Satwiksairaj Rankireddy-Chirag Shetty) ಪಾತ್ರರಾಗಿದ್ದಾರೆ. 1982ರಲ್ಲಿ ಲೆರೋಯ್‌ ಫ್ರಾನ್ಸಿಸ್‌-ಪ್ರದೀಪ್‌ ಗಾಂಧಿ ಕಂಚು ಗೆದ್ದಿದ್ದು ಭಾರತಕ್ಕೆ ಈವರೆಗೆ ಪುರುಷರ ಡಬಲ್ಸ್‌ನಲ್ಲಿ ಸಿಕ್ಕ ಏಕೈಕ ಪದಕವಾಗಿತ್ತು. ಇದೀಗ ಚಿರಾಗ್‌-ಸಾತ್ವಿಕ್‌ ಚಿನ್ನ ಗೆಲ್ಲುವ ಮೂಲಕ ಐತಿಹಾಸಿಕ ಚಿನ್ನ ಗೆದ್ದು ಈ ದಾಖಲೆಯನ್ನು ಮುರಿದಿದ್ದಾರೆ.

ಪಂದ್ಯದ ಆರಂಭದಿಂದಲೇ ಹಿಡಿತ ಸಾಧಿಸಿದ ಭಾರತೀಯ ಜೋಡಿ ಯಾವುದೇ ಹಂತದಲ್ಲಿಯೂ ಎದುರಾಳಿಗಳಿಗೆ ಮುನ್ನಡೆ ಸಾಧಿಸಲು ಅವಕಾಶ ನೀಡಲಿಲ್ಲ. ನೇರ ಗೇಮ್​ಗಳಿಂದ ಗೆದ್ದು ಐತಿಹಾಸಿಕ ಚಿನ್ನ ತಮ್ಮದಾಗಿಸಿಕೊಂಡರು. 56 ನಿಮಿಷಕ್ಕೆ ಪಂದ್ಯ ಅಂತ್ಯ ಕಂಡಿತು.

ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತದ ಜೋಡಿಯು ಮಾಜಿ ವಿಶ್ವ ಚಾಂಪಿಯನ್‌,ಟೋಕಿಯೊ ಒಲಿಂಪಿಕ್‌ ಪದಕ ವಿಜೇತ ಮಲೇಷ್ಯಾದ ಆ್ಯರೊನ್‌ ಚಿಯಾ-ಸೊಹ್‌ ವೂಯಿ ವಿರುದ್ಧ 21-17, 21-12ರಲ್ಲಿ ಸುಲಭ ಗೆಲುವು ಸಾಧಿಸಿತ್ತು. ಈ ಗೆಲುವು ಕಾಣುವಾಗಲೇ ಭಾರತದ ಜೋಡಿಯ ಮೇಲೆ ಚಿನ್ನದ ನಿರೀಕ್ಷೆ ಇರಿಸಲಾಗಿತ್ತು. ಇದನ್ನು ಹುಸಿಯಾಗದಂತೆ ನೋಡಿಕೊಳ್ಳುವಲ್ಲಿ ಚಿರಾಗ್‌-ಸಾತ್ವಿಕ್‌ ಯಶಸ್ವಿಯಾದರು.

ಇದನ್ನೂ ಓದಿ Asian Games; ಪದಕದ ಶತಕ ಬಾರಿಸಿದ ಭಾರತ; ಒಂದೇ ಗಂಟೆ ಅಂತರದಲ್ಲಿ 3 ಚಿನ್ನ ಬೇಟೆ

ಚಾರಿತ್ರಿಕ ಸಾಧನೆ ಮಾಡಿದ ಭಾರತ

ಏಷ್ಯನ್​ ಗೇಮ್ಸ್​ನಲ್ಲಿ ಭಾರತ ಚಾರಿತ್ರಿಕ ಸಾಧನೆ ಮಾಡಿದೆ. ಕ್ರೀಡಾಕೂಟದಲ್ಲಿ ಟಾರ್ಗೆಟ್​ 100 ಕನಸಿನೊಂದಿಗೆ ಅಭಿಯಾನ ಆರಂಭಿಸಿದ್ದ ಭಾರತ, ಇದನ್ನು ಸಾಧಿಸಿಯೇ ಬಿಟ್ಟಿದೆ. ಶನಿವಾರ ಬೆಳಗ್ಗೆ ಭಾರತದ ಮಹಿಳಾ ಕಬಡ್ಡಿ ತಂಡ ಚಿನ್ನ ಗೆಲ್ಲುವ ಮೂಲಕ ಭಾರತ ಪದಕದ ಶತಕನ್ನು ಪೂರ್ಣಗೊಳಿಸಿತು. 72 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತಕ್ಕೆ ಒಲಿದ ಅತ್ಯಧಿಕ ಪದಕ ಇದಾಗಿದೆ. ಈ ಬಾರಿಯ ಕೂಟದಲ್ಲಿ 100 ಪದಕಗಳ ಗಡಿ ದಾಟಿದ ನಾಲ್ಕನೇ ದೇಶವಾಗಿ ಭಾರತ ಹೊರಮೊಮ್ಮಿದೆ. ಉಳಿದ ಮೂರು ದೇಶಗಳೆಂದರೆ ಆತಿಥೇಯ ಚೀನಾ, ಜಪಾನ್​ ಮತ್ತು ದಕ್ಷಿಣ ಕೊರಿಯಾ.

ಪದಕ ಸ್ಪರ್ಧೆಯ 13ನೇ ದಿನವಾದ ಶುಕ್ರವಾರ ಭಾರತ 1 ಚಿನ್ನ, 2 ಬೆಳ್ಳಿ, 6 ಕಂಚಿನ ಪದಕ ಒಲಿಸಿಕೊಂಡು ಒಟ್ಟು 95 ಪದಕಕ್ಕೆ ಬಂದು ನಿಂತಿತ್ತು. ಶನಿವಾರ ಬೆಳಗ್ಗೆಯೇ 5 ಪದಕ ಗೆದ್ದು 100 ಪದಕವನ್ನು ಪೂರ್ತಿಗೊಳಿಸಿತು. ಭಾರತಕ್ಕೆ ನೂರನೇ ಪದಕ ಬಂದಿದ್ದು ಮಹಿಳೆಯರ ಕಬಡ್ಡಿಯಿಂದ. ಫೈನಲ್​ನಲ್ಲಿ ಭಾರತ 26-25 ಅಂಕಗಳಿಂದ ಚೈನೀಸ್ ತೈಪೆಯನ್ನು ಸೋಲಿಸಿ ಚಿನ್ನವನ್ನು ಗೆಲ್ಲುವ ಜತೆಗೆ ಭಾರತಕ್ಕೆ ಪದಕದ ಶತಕವನ್ನು ಪೂರ್ತಿಗೊಳಿಸಿದರು. ಇದೀಗ ಬ್ಯಾಡ್ಮಿಂಟನ್​ನಲ್ಲಿ ಮತ್ತೊಂದು ಪದಕ ಲಭಿಸಿ 100ರ ಗಡಿ ದಾಟಿದೆ.

ಆರ್ಚರಿಯಲ್ಲಿ ಚಿನ್ನ

ಬೆಳಗ್ಗೆ ನಡೆದ ಪುರುಷರ ಕಾಂಪೌಂಡ್ ಆರ್ಚರಿ ಸ್ಪರ್ಧೆಯಲ್ಲಿ ಓಜಸ್ ಪ್ರವೀಣ್ ಅವರು ತಮ್ಮದೇ ದೇಶದ ಅಭಿಷೇಕ್ ವರ್ಮಾ ಅವರನ್ನು ಸೋಲಿಸಿ ಚಿನ್ನ ಗೆದ್ದರು. ಸೋಲು ಕಂಡ ಅಭಿಷೇಕ್​ ಬೆಳ್ಳಿಗೆ ತೃಪ್ತಿಪಟ್ಟರು. ಇದಕ್ಕೂ ಮುನ್ನ ನಡೆದ ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಸ್ಪರ್ಧೆಯಲ್ಲಿ ಜ್ಯೋತಿ ಸುರೇಖಾ ಚಿನ್ನ, ಅದಿತಿ ಸ್ವಾಮಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. 

ರೋಚಕ ಗೆಲುವು ಸಾಧಿಸಿದ ಮಹಿಳಾ ಕಬಡ್ಡಿ ತಂಡ

ಅತ್ಯಂತ ರೋಚಕವಾಗಿ ನಡೆದ ಮಹಿಳಾ ಕಬಡ್ಡಿ ಫೈನಲ್​ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿತು. ಕೊನೆಯ ಕ್ಷಣದ ವರೆಗೂ ಈ ಪಂದ್ಯ ರೋಚಕತೆ ಸೃಷ್ಟಿಸಿತು. ಆದರೆ ಅದೃಷ್ಟ ಭಾರತಕ್ಕೆ ಒಲಿಯಿತು. ಕೇವಲ ಒಂದು ಅಂಕದ ಅಂತರದಲ್ಲಿ ಭಾರತ ವನಿತೆಯರು ಗೆದ್ದು ಬೀಗಿದರು. ಗೆಲುವಿನ ಅಂತರ 26-25. ಈ ಪದಕ ಒಲಿದ ತಕ್ಷಣ ಭಾರತ ಪದಕದ ಶತಕವನ್ನು ಬಾರಿಸಿತು.

Exit mobile version