ನವದೆಹಲಿ: ಪ್ರತಿಷ್ಠಿತ ಏಷ್ಯನ್ ಗೇಮ್ಸ್(Asian Games) ಕ್ರೀಡಾಕೂಡದಲ್ಲಿ ಪಾಲ್ಗೊಳ್ಳಲು ಭಾರತೀಯ ಅಥ್ಲೀಟ್‌ಗಳ ಜೆರ್ಸಿ, ಕಿಟ್ ಬಿಡುಗಡೆ ಹಾಗೂ ಅಥ್ಲೀಟ್‌ಗಳಿಗೆ ಬೀಳ್ಕೊಡುಗೆ ಸಮಾರಂಭ ಮಂಗಳವಾರ ನವದೆಹಲಿಯಲ್ಲಿ ನಡೆದಿದೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಭಾರತೀಯ ಒಲಿಂಪಿಕ್ಸ್ ಸಮಿತಿ ಅಧ್ಯಕ್ಷೆ ಪಿ.ಟಿ.ಉಷಾ ಅಥ್ಲೀಟ್‌ಗಳಿಗೆ ಶುಭ ಹಾರೈಸಿದ್ದಾರೆ. ಈಗಾಗಲೇ ಬಾಕ್ಸಿಂಗ್ ತಂಡ ಚೀನಾದ ಹಾಂಗ್‌ಝೌ ತಲುಪಿದ್ದಾರೆ. ಟೂರ್ನಿ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರ ವರೆಗೆ ನಡೆಯಲಿದೆ.
ಭಾರತದಿಂದ ದಾಖಲೆಯ ಕ್ರೀಡಾಪಟುಗಳು
ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ದಾಖಲೆಯ ಕ್ರೀಡಾಪಟುಗಳನ್ನು ಕಳುಹಿಸಿಕೊಟ್ಟಿದೆ. ಅತ್ಯಧಿಕ 634 ಕ್ರೀಡಾಪಟುಗಳನ್ನು ಕಳುಹಿಸಲಿದೆ. 2018ರ ಜಕಾರ್ತಾ ಗೇಮ್ಸ್‌ಗೆ 572 ಅಥ್ಲೀಟ್‌ಗಳನ್ನು ರವಾನಿಸಿದ್ದು ಈವರೆಗಿನ ದಾಖಲೆ ಆಗಿತ್ತು.
38 ವಿಭಾಗಗಳಲ್ಲಿ ಸ್ಪರ್ಧೆ
ಭಾರತ ಒಟ್ಟು 38 ವಿಭಾಗಗಳಲ್ಲಿ ಸ್ಪರ್ಧೆಗೆ ಇಳಿಯಲಿದೆ. ಈ 634 ಕ್ರೀಡಾಪಟುಗಳ(634 athletes) ಯಾದಿಯಲ್ಲಿ ಟ್ರ್ಯಾಕ್ ಆ್ಯಂಡ್ ಫೀಲ್ಡ್‌ನ ಗರಿಷ್ಠ 65 ಆ್ಯತ್ಲೀಟ್‌ಗಳಿದ್ದಾರೆ. ಇವರಲ್ಲಿ 34 ಪುರುಷರು ಹಾಗೂ 31 ವನಿತೆಯರು. ಅನಂತರದ ಸ್ಥಾನ ಫುಟ್‌ಬಾಲ್ ಮತ್ತು ಹಾಕಿ ತಂಡಗಳಿಗೆ ಸಲ್ಲುತ್ತದೆ. ಎರಡೂ ಫುಟ್‌ಬಾಲ್ ತಂಡಗಳು ಸ್ಪರ್ಧಿಸಲಿದ್ದು, ಇಲ್ಲಿನ ಆಟಗಾರರ ಸಂಖ್ಯೆ 44. ಹಾಕಿಪಟುಗಳ ಒಟ್ಟು ಸಂಖ್ಯೆ 36. ಪುರುಷರ ಹಾಗೂ ವನಿತೆಯರ ಕ್ರಿಕೆಟ್ ತಂಡಗಳೂ ಪದಕ ಸ್ಪರ್ಧೆಗೆ ಇಳಿಯಲಿವೆ. ಒಂದೊಂದು ತಂಡದಲ್ಲಿ 15 ಸದಸ್ಯರಿದ್ದಾರೆ. ಸೈಲಿಂ ಗ್‌ನಲ್ಲಿ 33, ಶೂಟಿಂಗ್‌ನಲ್ಲಿ 30 ಸ್ಪರ್ಧಿಗಳಿದ್ದಾರೆ.
ಇದನ್ನೂ ಓದಿ Asian Games 2023 : ವಿವಾದದ ಬಳಿಕ ಏಷ್ಯನ್ ಗೇಮ್ಸ್ನಿಂದ ಹಿಂದೆ ಸರಿದ ವಿನೇಶ್ ಫೋಗಾಟ್
ಮೊದಲ ಬಾರಿ ಕ್ರಿಕೆಟ್
ಈ ಬಾರಿಯ ಗೇಮ್ಸ್‌ನಲ್ಲಿ ಭಾರತದ ಕ್ರಿಕೆಟ್ ತಂಡ ಮೊದಲ ಬಾರಿ ಆಡುತ್ತಿದೆ. ಟೂರ್ನಿ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರ ವರೆಗೆ ನಡೆಯಲಿದೆ. ಈಗಾಗಕಲೇ ಭಾರತ ತಂಡ ಕೂಡ ಪ್ರಕಟಗೊಂಡಿದೆ. ಭಾರತ ಪುರುಷರ ತಂಡವನ್ನು ಋತುರಾಜ್ ಗಾಯಕ್ವಾಡ್ ಮುನ್ನಡೆಸಲಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಇಷ್ಟರವರೆಗೆ ಕೇವಲ ಎರಡು ಬಾರಿ ಕ್ರಿಕೆಟ್ ಸ್ಪರ್ಧೆ ನಡೆದಿದೆ. 2010 (ಗ್ವಾಂಗ್‌ಝೂ) ಮತ್ತು 2014 (ಇಂಚಿಯಾನ್)ರ ಗೇಮ್ಸ್‌ನಲ್ಲಿ ಕ್ರಿಕೆಟ್ ಸ್ಪರ್ಧೆ ನಡೆದಿದ್ದು ಇಲ್ಲಿ ಕ್ರಮವಾಗಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಚಿನ್ನದ ಪದಕ ಗೆದ್ದಿತ್ತು. ಮಹಿಳೆಯರ ವಿಭಾಗದಲ್ಲಿ ಪಾಕಿಸ್ತಾನ ಎರಡೂ ಆವೃತ್ತಿಯಲ್ಲಿ ಚಿನ್ನ ಗೆದ್ದು ಮೆರೆದಾಡಿತ್ತು.
ಚೀನಾ ತಲುಪಿದ ಬಾಕ್ಸಿಂಗ್ ತಂಡ
ಭಾರತದ ಬಾಕ್ಸಿಂಗ್ ತಂಡ(Indian boxing team) ಈಗಾಗಲೇ ಚೀನಾ ತಲುಪಿದೆ. 2 ಬಾರಿ ವಿಶ್ವ ಚಾಂಪಿಯನ್ ನಿಖತ್ ಜರೀನ್(Nikhat Zareen) ಅವರು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇವರ ಜತೆಗೆ ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತೆ ಲವ್ಲೀನಾ ಬೊರ್ಗಹೈನ್(Lovlina Borgohain) ಕೂಡ ಕಣಕ್ಕಿಳಿಯಲಿದ್ದಾರೆ. ಉಭಯ ಆಟಗಾರ್ತಿಯ ಮೇಲೆ ಪದಕ ಬರವಸೆಯನ್ನು ಇಡಲಾಗಿದೆ.
ಮಹಿಳೆಯರ ವಿಭಾಗದಲ್ಲಿ ಜಾಸ್ಮೀನ್, ಅರುಂಧತಿ ಚೌಧರಿ, ಪ್ರೀತಿ ಪವಾರ್, ಪರ್ವೀನ್ ಹೂಡಾ ಕೂಡಾ ಕಣಕ್ಕಿಳಿಯಲಿದ್ದಾರೆ. ಅಚ್ಚರಿ ಎಂದರೆ ಏಷ್ಯನ್ ಗೇಮ್ಸ್ ಚಾಂಪಿಯನ್ ಅಮಿತ್ ಪಂಘಲ್, ವಿಶ್ವ ಚಾಂಪಿಯನ್ ನೀತು ಗಂಗಾಸ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಪುರುಷರ ವಿಭಾಗದಲ್ಲಿ ದೀಪಕ್ ಭೋರಿಯ ತಂಡ ಮುನ್ನಡೆಸಲಿದ್ದು, ಸಚಿನ್, ಶಿವ ಥಾಪ, ನಿಶಾಂತ್ ದೇವ್, ಲಕ್ಷ್ಯ ಚಹರ್, ಸಂಜೀತ್ ಹಾಗೂ ನರೇಂದರ್ ಬರ್ವಾಲ್ ಸಹ ಆಡಲಿದ್ದಾರೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಮೊದಲ ಅರ್ಹತಾ ಕೂಟವಾಗಿರುವ ಕಾರಣ ಏಷ್ಯಾದ ಬಾಕ್ಸರ್‌ಗಳಿಗೆ ಇದು ಮಹತ್ವದ ಟೂರ್ನಿಯಾಗಿದೆ.