Site icon Vistara News

Asian Games: ಪಂದ್ಯ ರದ್ದಾದರೂ ಐತಿಹಾಸಿಕ ಚಿನ್ನ ಗೆದ್ದ ಭಾರತ ಪುರುಷರ ಕ್ರಿಕೆಟ್​ ತಂಡ

Asian Games

ಹ್ಯಾಂಗ್ಝೌ: ಇದೇ ಮೊದಲ ಬಾರಿಗೆ ಏಷ್ಯನ್​ ಗೇಮ್ಸ್​(Asian Games) ಕ್ರೀಡಾಕೂಡದ ಕ್ರಿಕೆಟ್​ನಲ್ಲಿ ಸ್ಪರ್ಧಿಸಿದ ಭಾರತ ಪುರುಷರ ತಂಡ ಚೊಚ್ಚಲ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. ಇದಕ್ಕೂ ಮುನ್ನ ಮಹಿಳಾ ತಂಡವೂ ಚಿನ್ನ ಗೆದ್ದ ಸಾಧನೆ ಮಾಡಿತ್ತು. ಶನಿವಾರ ಅಘಫಾನಿಸ್ತಾನ ವಿರುದ್ಧದ ನಡೆದ ಫೈನಲ್ ಪಂದ್ಯ ಮಳೆಯಿಂದ ರದ್ದುಗೊಂಡರೂ ಶ್ರೇಯಾಂಕದಲ್ಲಿ ಮುಂದಿದ್ದ ಭಾರತವನ್ನು ವಿಜಯೀ ಎಂದು ಘೋಷಿಸಲಾಯಿತು. ಪಂದ್ಯ ಆಡದೇ ಭಾರತಕ್ಕೆ ಚಿನ್ನ ಒಲಿಯಿತು.

ಮಳೆಯಿಂದಾಗಿ ಟಾಸ್​ ಕೂಡ ವಿಳಂಬಾಗಿತ್ತು. ಆದರೆ ಮಳೆ ಬಿಟ್ಟ ಬಳಿಕ ಬ್ಯಾಟಿಂಗ್​ ಆಹ್ವಾನ ಪಡೆದ ಅಫಘಾನಿಸ್ತಾ 18.2 ಓವರ್​ಗಲ್ಲಿ 5 ವಿಕೆಟ್​ಗೆ 112 ರನ್​ ಗಳಿಸಿದ ವೇಳೆ ಮತ್ತೆ ಮಳೆ ಜೋರಾಗಿ ಸುರಿಯಿತು. ಸುಮಾರು ಎರಡು ಗಂಟೆಗಳ ಕಾಲ ಕಾದರೂ ಮಳೆ ಬಿಡುವ ಯಾವುದೇ ಸೂಚನೆ ಸಿಗಲಿಲ್ಲ. ಹೀಗಾಗಿ ಅಂತಿಮವಾಗಿ ಶ್ರೇಯಾಂಕ ಆಧಾರದಲ್ಲಿ ಫಲಿತಾಂಶವನ್ನು ಪ್ರಕಟಿಸಲಾಯಿತು. ಈ ಅದೃಷ್ಟ ಭಾರತಕ್ಕೆ ಒಲಿಯಿತು. ಎದುರಾಳಿ ಅಫಘಾನಿಸ್ತಾನಕ್ಕಿಂತ ಮುಂದಿದ್ದ ಋತುರಾಜ್​ ಗಾಯಕ್ವಾಡ್​ ಸಾರಥ್ಯದ ಭಾರತ ಐತಿಹಾಸಿಕ ಚಿನ್ನಕ್ಕೆ ಕೊರಳೊಡ್ಡಿತು.

ಕಂಚಿನ ಪದಕ ಸ್ಪರ್ಧೆಗೂ ಮಳೆ ಅಡ್ಡಿ ಪಡಿಸಿತು. ಡಕ್​ವರ್ತ್​ ಲೂಯಿಸ್​ ನಿಯಮದ ಪ್ರಕಾರ ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ 6 ವಿಕೆಟ್​ ಗೆಲುವು ಸಾಧಿಸಿ ಕಂಚಿಗೆ ತೃಪ್ತಿಪಟ್ಟಿತು. 2010 (ಗ್ವಾಂಗ್‌ಝೂ)ರಲ್ಲಿ ನಡೆದ ಚೊಚ್ಚಲ ಆವೃತ್ತಿಯಲ್ಲೇ ಬಾಂಗ್ಲಾದೇಶ ಕಪ್​ ಎತ್ತಿತ್ತು.

ಇದನ್ನೂ ಓದಿ Asian Games: ಐತಿಹಾಸಿಕ ಚಿನ್ನ ಗೆದ್ದ ಚಿರಾಗ್‌-ಸಾತ್ವಿಕ್‌ ಜೋಡಿ; ಶತಕದ ಗಡಿ ದಾಟಿದ ಪದಕ ಸಂಖ್ಯೆ

ಚಿನ್ನಗೆದ್ದ ಪುರುಷರ ಕಬಡ್ಡಿ ತಂಡ

ಇರಾನ್​ ವಿರುದ್ಧದ ವಿವಾದಾತ್ಮಕ ಕಬಡ್ಡಿ ಫೈನಲ್​ ಪಂದ್ಯದಲ್ಲಿ ಭಾರತ ತಂಡ ಚಿನ್ನ ಗೆದ್ದ ಸಾಧನೆ ಮಾಡಿದೆ. 28-28 ಅಂಕ ಗಳಿಸಿದ ವೇಳೆ ಪವರ್​ ಸೆಹ್ರಾವತ್​ ಮಾಡಿದ ಡು ಓರ್​ ಡೈ ರೇಡ್​ನಲ್ಲಿ ಅಂಕಕ್ಕಾಗಿ ಉಭಯ ತಂಡಗಳ ಆಟಗಾರರು ರೆಫ್ರಿಯೊಂದಿಗೆ ವಾಗ್ವಾದ ನಡೆಸಿದ ಕಾರಣ ಕೆಲ ಕಾಲ ಪಂದ್ಯ ಸ್ಥಗಿತಗೊಂಡಿತು. ಇತ್ತಂಡಗಳು ಕೂಡ ರೆಫ್ರಿ ನೀಡಿದ ಅಂಕವನ್ನು ನಿರಾಕರಿಸಿ ಮ್ಯಾಚ್​ ಮೇಲೆಯೇ ಕುಳಿತರು. ಬಳಿಕ ಸಂಘಟಕರು ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಿದರು. ಅಂತಿಮವಾಗಿ ಭಾರತ 33-29 ಅಂತರದಿಂದ ಗೆದ್ದು ಚಿನ್ನ ತನ್ನದಾಸಿಕೊಂಡಿತು.

ಐತಿಹಾಸಿಕ ಚಿನ್ನ ಗೆದ್ದ ಬ್ಯಾಡ್ಮಿಂಟನ್​ ತಂಡ

ಭಾರತದ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಜೋಡಿ(Satwik-Chirag) ಏಷ್ಯನ್​ ಗೇಮ್ಸ್​ನಲ್ಲಿ ಐತಿಹಾಸಿಕ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಶನಿವಾರ ನಡೆದ ಡಬಲ್ಸ್​ ಬ್ಯಾಡ್ಮಿಂಟನ್​ ಫೈನಲ್‌ನಲ್ಲಿ ದ.ಕೊರಿಯಾದ ಚೊಯಿ ಸೊಲ್ಯು-ಕಿಮ್‌ ವೊನ್ಹೊ ಜೋಡಿಯನ್ನು 21-18, 21-16 ಗೇಮ್​ಗಳಿಂದ ಮಣಿಸಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.

ಮೊದಲ ಚಿನ್ನ

ಈ ಸಾಧನೆ ಮಾಡಿದ ಭಾರತದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಚಿರಾಗ್‌-ಸಾತ್ವಿಕ್‌(Satwiksairaj Rankireddy-Chirag Shetty) ಪಾತ್ರರಾಗಿದ್ದಾರೆ. 1982ರಲ್ಲಿ ಲೆರೋಯ್‌ ಫ್ರಾನ್ಸಿಸ್‌-ಪ್ರದೀಪ್‌ ಗಾಂಧಿ ಕಂಚು ಗೆದ್ದಿದ್ದು ಭಾರತಕ್ಕೆ ಈವರೆಗೆ ಪುರುಷರ ಡಬಲ್ಸ್‌ನಲ್ಲಿ ಸಿಕ್ಕ ಏಕೈಕ ಪದಕವಾಗಿತ್ತು. ಇದೀಗ ಚಿರಾಗ್‌-ಸಾತ್ವಿಕ್‌ ಚಿನ್ನ ಗೆಲ್ಲುವ ಮೂಲಕ ಐತಿಹಾಸಿಕ ಚಿನ್ನ ಗೆದ್ದು ಈ ದಾಖಲೆಯನ್ನು ಮುರಿದಿದ್ದಾರೆ.

ಚಾರಿತ್ರಿಕ ಸಾಧನೆ ಮಾಡಿದ ಭಾರತ

ಏಷ್ಯನ್​ ಗೇಮ್ಸ್​ನಲ್ಲಿ ಭಾರತ ಚಾರಿತ್ರಿಕ ಸಾಧನೆ ಮಾಡಿದೆ. ಕ್ರೀಡಾಕೂಟದಲ್ಲಿ ಟಾರ್ಗೆಟ್​ 100 ಕನಸಿನೊಂದಿಗೆ ಅಭಿಯಾನ ಆರಂಭಿಸಿದ್ದ ಭಾರತ, ಇದನ್ನು ಸಾಧಿಸಿಯೇ ಬಿಟ್ಟಿದೆ. ಶನಿವಾರ ಬೆಳಗ್ಗೆ ಭಾರತದ ಮಹಿಳಾ ಕಬಡ್ಡಿ ತಂಡ ಚಿನ್ನ ಗೆಲ್ಲುವ ಮೂಲಕ ಭಾರತ ಪದಕದ ಶತಕನ್ನು ಪೂರ್ಣಗೊಳಿಸಿತು. 72 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತಕ್ಕೆ ಒಲಿದ ಅತ್ಯಧಿಕ ಪದಕ ಇದಾಗಿದೆ. ಈ ಬಾರಿಯ ಕೂಟದಲ್ಲಿ 100 ಪದಕಗಳ ಗಡಿ ದಾಟಿದ ನಾಲ್ಕನೇ ದೇಶವಾಗಿ ಭಾರತ ಹೊರಮೊಮ್ಮಿದೆ. ಉಳಿದ ಮೂರು ದೇಶಗಳೆಂದರೆ ಆತಿಥೇಯ ಚೀನಾ, ಜಪಾನ್​ ಮತ್ತು ದಕ್ಷಿಣ ಕೊರಿಯಾ. ಸದ್ಯ ಭಾರತ 23 ಚಿನ್ನ , 35 ಬೆಳ್ಳಿ ಮತ್ತು 40 ಕಂಚು ಗೆದ್ದು ಒಟ್ಟು 103 ಪದಕ ತನ್ನದಾಗಿಸಿಕೊಂಡಿದೆ.

Exit mobile version