Site icon Vistara News

Asian Games: ಪುರುಷರ ಹಾಕಿ; 9 ವರ್ಷಗಳ ಬಳಿಕ ಚಿನ್ನ ಗೆದ್ದ ಭಾರತ; ಕಂಚು ಗೆಲ್ಲಲೂ ವಿಫಲವಾದ ಬಜರಂಗ್

india hockey men's team

ಹ್ಯಾಂಗ್ಝೌ: ಇಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ ಕ್ರೀಡಾಕೂಟದ ಪುರುಷರ ಹಾಕಿ ಫೈನಲ್​ ಪಂದ್ಯದಲ್ಲಿ ಭಾರತ ತಂಡ(India vs Japan hockey) ಹಾಲಿ ಚಾಂಪಿಯನ್​ ಜಪಾನ್​ ವಿರುದ್ಧ 5-1 ಗೋಲ್​ಗಳ ಅಂತರದಿಂದ ಗೆದ್ದು ಚಿನ್ನದ ಪದಕ ಗೆದ್ದಿದೆ. ಈ ಮೂಲಕ 9 ವರ್ಷಗಳ ಬಳಿಕ ಈ ಕೂಟದಲ್ಲಿ ಮತ್ತೆ ಚಿನ್ನ ಗೆದ್ದ ಸಾಧನೆ ಮಾಡಿದೆ. ಅಲ್ಲದೆ ಮುಂದಿನ ವರ್ಷದ ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿದೆ.

ಭಾರತದ ಪುರುಷರ ಹಾಕಿ ತಂಡ 2014 ರಲ್ಲಿ ದಕ್ಷಿಣ ಕೊರಿಯಾದ ಇಂಚಿಯಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಕೊನೆಯ ಬಾರಿ ಚಿನ್ನ ಸಾಧನೆ ಮಾಡಿತ್ತು. ಒಟ್ಟಾರೆ ಇದು ಹಾಕಿಯಲ್ಲಿ ಭಾರತಕ್ಕೆ ಒಲಿದ ನಾಲ್ಕನೇ ಚಿನ್ನವಾಗಿದೆ. 1966, 1998 ಮತ್ತು 2014 ಪ್ರಶಸ್ತಿ ಗೆದ್ದಿತ್ತು.

ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ಭಾರತ ಗೋಲ್​ಗಳನ್ನು ಬಾರಿಸುತ್ತಲೇ ಎದುರಾಳಿಗಳಿಗೆ ಒತ್ತಡ ಹೇರಿತು. ಭಾರತೀಯರ ಆಟದ ಮುಂದೆ ಹಾಲಿ ಚಾಂಪಿಯನ್​​ ಆಟ ನಡೆಯಲ್ಲೇ ಇಲ್ಲ. ತನ್ನ ಖ್ಯಾತಿಗೆ ಕನಿಷ್ಠ ಒಂದು ಗೋಲ್​ ಬಾರಿಸಲಷ್ಟೇ ಸಾಧ್ಯವಾಯಿತು. ಈ ಗೋಲ್​ ಅಂತಿಮ ಕ್ವಾರ್ಟರ್​ನಲ್ಲಿ ದಾಖಲಾಯಿತು. ಟೋಕಿಯೊ ಒಲಿಂಪಿಕ್ಸ್​ನಲ್ಲಿ ಕಂಚು ಗೆದಿದ್ದ ಭಾರತಕ್ಕೆ ಈ ಗೆಲುವು ಮುಂದಿನ ವರ್ಷ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆಲ್ಲುವ ಆತ್ಮವಿಶ್ವಾಸ ಮೂಡಿಸಿದೆ.

ಮೊದಲ ಕ್ವಾರ್ಟರ್​ನಲ್ಲಿ ಇತ್ತಂಡಗಳು ರಕ್ಷಣಾತ್ಮ ಆಟಕ್ಕೆ ಒತ್ತು ನೀಡಿದ ಕಾರಣ ಗೋಲು ದಾಖಲಾಗಲಿಲ್ಲ. ಆದರೆ ಆ ಬಳಿಕದ ಮೂರು ಕ್ವಾರ್ಟರ್​ನಲ್ಲಿಯೂ ಭಾರತ ಬ್ಯಾಕ್​ಟು ಬ್ಯಾಕ್​ ಗೋಲು ಬಾರಿಸಿ ಸಂಪೂರ್ಣ ಹಿಡಿತ ಸಾಧಿಸಿತು. ಭಾರತ ಪರ ಮನ್‌ಪ್ರೀತ್, ಹರ್ಮನ್‌ಪ್ರೀತ್, ಅಮಿತ್, ಅಭಿಷೇಕ್ ಗೋಲು ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

100 ಪದಕ ಖಚಿತ

ಏಷ್ಯನ್ ಗೇಮ್ಸ್‌ನಲ್ಲಿ ಭಾರತವು 100 ಪದಕಗಳ ಗಡಿ ದಾಟುವುದು ಖಚಿತವಾಗಿದೆ. ಭಾರತ ಈಗಾಗಲೇ 95 ಪದಕಗಳನ್ನು ಗೆದ್ದಿದ್ದು, ಉಳಿದ ಐದು ಪದಕಗಳು ಖಚಿತವಾಗಿವೆ. ಶನಿವಾರ 5 ಪದಕ ಗೆದ್ದರೆ ಭಾರತ ಸಾರ್ವಕಾಲಿ ದಾಖಲೆಯನ್ನು ಬರೆಯಲಿದೆ.

ಇದನ್ನೂ ಓದಿ Asian Games : ಪಾಕಿಸ್ತಾನ ತಂಡವನ್ನು ಹೊರಗಟ್ಟಿದ ಅಫಘಾನಿಸ್ತಾನ; ನೆಟ್ಟಿಗರಿಂದ ಫುಲ್ ಟ್ರೋಲ್​!

ಬಜರಂಗ್ ಪೂನಿಯಾಗೆ ಸೋಲು

ಬ್ರಿಜ್​ ಭೂಷಣ್​ ಸಿಂಗ್​ ವಿರುದ್ಧ ಅತ್ಯಾಚಾರ ಆರೋಪ ಮಾಡಿ ಪ್ರತಿಭಟನೆ ನಡೆಸಿದ್ದ ಕುಸ್ತಿಪಟುಗಳಲ್ಲಿ ಒಬ್ಬರಾದ ಬಜರಂಗ್ ಪೂನಿಯಾ ಪುರುಷರ ಫ್ರೀಸ್ಟೈಲ್ 65 ಕೆಜಿ ವಿಭಾಗದ ಕಂಚಿನ ಪದಕ ಹೋರಾಟದಲ್ಲಿಯೂ ಸೋಲು ಕಂಡು ಪದಕ ವಂಚಿತರಾಗಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಇರಾನ್‌ನ ರೆಹಮಾನ್ ವಿರುದ್ಧ 8-1 ಅಂತರದಿಂದ ಸೋಲು ಕಂಡಿದ್ದ ಬಜರಂಗ್ ಕಂಚಿನ ಪದಕದ ಹೋರಾಟದಲ್ಲಿ ತಾಂತ್ರಿಕ ಶ್ರೇಷ್ಠತೆಯ (10-0) ಮೂಲಕ ಜಪಾನ್‌ನ ಕೈಕಿ ಯಮಗುಚಿ ವಿರುದ್ಧ ಸೋಲು ಕಂಡರು.

ಆರ್ಚರಿಯಲ್ಲಿ ಬೆಳ್ಳಿ ಗೆದ್ದ ಭಾರತ

ಆರ್ಚರಿಯಲ್ಲಿ ಭಾರತದ ರಿಕರ್ವ್ ಪುರುಷರ ತಂಡ ಬೆಳ್ಳಿ ಪದಕ ಗೆದ್ದಿದೆ. ಶುಕ್ರವಾರ ನಡೆದ ಫೈನಲ್​ನಲ್ಲಿ ಭಾರತೀಯ ತಂಡ ದಕ್ಷಿಣ ಕೊರಿಯಾ ವಿರುದ್ಧ 5-1 ಅಂತರದಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು.

ಮೊದಲ ಸೆಟ್‌ನ ಅಂತ್ಯದಲ್ಲಿ ಸ್ಕೋರ್‌ಕಾರ್ಡ್ 60-55 ರೀಡಿಂಗ್‌ನೊಂದಿಗೆ ಕೊರಿಯಾ 2-0 ಮುನ್ನಡೆ ಸಾಧಿಸಿದ್ದರಿಂದ ಭಾರತ ಅದ್ಭುತ ಪ್ರದರ್ಶನ ನೀಡಲಿಲ್ಲ. ಆದರೆ, ಆ ಬಳಿಕ ಅತನು ದಾಸ್, ಧೀರಜ್ ಬೊಮ್ಮದೇವರ ಮತ್ತು ಪ್ರಭಾಕರ ತುಷಾರ್ ಶೆಲ್ಕೆ ದ್ವಿತೀಯ ಸೆಟ್​ನಲ್ಲಿ ಗ್ರೇಟ್​ ಕಮ್​ಬ್ಯಾಕ್​ ಮಾಡಿ 57-57 ಅಂದೊಂದಿಗೆ 3-1 ರಲ್ಲಿ ಮುಗಿಸಿದರು. ಆದಾಗ್ಯೂ, ಡಿಯೋಕ್ ಜೆ ಕಿಮ್, ಜಿನ್ಹೈಕ್ ಓಹ್ ಮತ್ತು ವೂಸೋಕ್ ಲೀ ಅವರನ್ನೊಳಗೊಂಡ ಕೊರಿಯಾ ಅಂತಿಮ ಸೆಟ್​ನಲ್ಲಿ 56-55 ರಿಂದ ಗೆದ್ದು 5-1 ರಿಂದ ಪಂದ್ಯವನ್ನು ಗೆದ್ದರು.

41 ವರ್ಷಗಳ ಬಳಿಕ ಭಾರತಕ್ಕೆ ಪದಕ ಗೆದ್ದ ಪ್ರಣಯ್​

ಶುಕ್ರವಾರ ನಡೆದ ಬ್ಯಾಡ್ಮಿಂಟನ್​ ಸೆಮಿಫೈನಲ್​​ನಲ್ಲಿ ಹಾಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಚೀನಾದ ಲಿ ಶಿ ಫೆಂಗ್ ವಿರುದ್ಧ ನೇರ ಗೇಮ್​ಗಳಿಂದ ಸೋತ ಎಚ್.ಎಸ್.ಪ್ರಣಯ್ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಅವರು 41 ವರ್ಷಗಳ ನಂತರ ಏಷ್ಯನ್ ಗೇಮ್ಸ್​ನ (Asian Games) ಪುರುಷರ ಸಿಂಗಲ್ಸ್​​ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ. ಬೆನ್ನುನೋವಿನಿಂದ ಬಳಲುತ್ತಿರುವ ವಿಶ್ವದ 7ನೇ ಶ್ರೇಯಾಂಕಿತ ಆಟಗಾರ 51 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ತವರಿನ ಫೇವರಿಟ್ ಹಾಗೂ ವಿಶ್ವದ 8ನೇ ಶ್ರೇಯಾಂಕಿತ ಲಿ ವಿರುದ್ಧ 16-21, 9-21 ಅಂತರದ ಸೋಲನುಭವಿಸಿದರು. 1982ರಲ್ಲಿ ನವದೆಹಲಿಯಲ್ಲಿ ನಡೆದ ಕೂಟದಲ್ಲಿ ಸೈಯದ್ ಮೋದಿ ಅವರು ಕಂಚಿನ ಪದಕ ಗೆದ್ದ ಬಳಿಕ ಪುರುಷರ ಸಿಂಗಲ್ಸ್ ನಲ್ಲಿ ಭಾರತಕ್ಕೆ ಲಭಿಸಿದ ಎರಡನೇ ಪದಕ ಇದಾಗಿದೆ. ಪ್ರಣಯ್ ಕಳೆದ ವಾರ ಬೆಳ್ಳಿ ಪದಕ ಗೆದ್ದ ಭಾರತೀಯ ಪುರುಷರ ತಂಡದ ಭಾಗವಾಗಿದ್ದರು. 

ಕಬಡ್ಡಿಯಲ್ಲಿ ಫೈನಲ್​ ಪ್ರವೇಶಿಸಿದ ಭಾರತದ ಪುರುಷರ ಮತ್ತು ಮಹಿಳಾ ತಂಡ

ಭಾರತದ ಮಹಿಳಾ ಕಬಡ್ಡಿ ತಂಡ ನೇಪಾಳ ವಿರುದ್ಧ ಸೆಮಿಫೈನಲ್​ನಲ್ಲಿ 61-17 ಅಂತರದಿಂದ ಗೆದ್ದು ಫೈನಲ್​ ಪ್ರವೇಶ ಪಡೆದಿದೆ. ಅತ್ತ ಪುರುಷರ ಕಬಡ್ಡಿ ತಂಡ ಸೆಮಿಫೈನಲ್​ನಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ 60-13 ಅಂಕದಿಂದ ಗೆದ್ದು ಫೈನಲ್​ಗೆ ಲಗ್ಗೆಯಿಟ್ಟಿದೆ.

Exit mobile version