ಕರಾಚಿ: ಏಷ್ಯನ್ ಗೇಮ್ಸ್‌ನಲ್ಲಿ(Asian Games) ಮೂರನೇ ಚಿನ್ನದ ಪದಕ ಗೆಲ್ಲುವ ಯೋಜನೆಯಲ್ಲಿದ್ದ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡಕ್ಕೆ ಆಘಾತವೊಂದು ಎದುರಾಗಿದೆ. ತಂಡದ ಸ್ಟಾರ್ ಆಟಗಾರ್ತಿ ಹಾಗೂ ಮಾಜಿ ನಾಯಕಿ ಬಿಸ್ಮಾ ಮರೂಫ್(Bismah Maroof) ಅವರು ಈ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಕ್ರೀಡಾಗ್ರಾಮದಲ್ಲಿ ಅಥ್ಲೀಟ್ಗಳು ತಮ್ಮ ಮಕ್ಕಳನ್ನು ಕರೆದುಕೊಂದು ಹೋಗಲು ಅವಕಾಶವಿಲ್ಲದ ಕಾರಣ ಅವರು ಏಷ್ಯಾಡ್‌ನಿಂದ ಹಿಂದೆ ಸರಿದಿದ್ದಾರೆ. ಅವರ ಅನುಪಸ್ಥಿತಿಯನ್ನು ಪಾಕ್ ಕ್ರಿಕೆಟ್ ಮಂಡಳಿ ಅಧಿಕೃತಗೊಳಿಸಿದೆ.
ಏಷ್ಯಾಡ್ ನಿಯಮದ ಅನುಸಾರ ಯಾವುದೇ ಅಥ್ಲೀಟ್ ತನ್ನ ಮಕ್ಕಳನ್ನು ಕರೆದುಕೊಂಡು ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವಂತಿಲ್ಲ. ಮಕ್ಕಳು ಏಷ್ಯನ್ ಗೇಮ್ಸ್‌ನ ಕ್ರೀಡಾಗ್ರಾಮದಲ್ಲಿ ಇರುವಂತಿಲ್ಲ. ಸಣ್ಣ ಪ್ರಾಯದ ಮಗುವನ್ನು ಹೊಂದಿರುವ ಬಿಸ್ಮಾ ಮರೂಫ್ ಅಂತಿಮವಾಗಿ ಮಗುವಿನ ಹಿತದೃಷ್ಟಿಯಿಂದ ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದರು.
‘ಪ್ರತಿಷ್ಠಿತ ಏಷ್ಯಾಡ್ಗೆ ನಾವು ಬಿಸ್ಮಾ ಮಾರೂಫ್ ಅವರ ಸೇವೆಯನ್ನು ಕಳೆದುಕೊಳ್ಳುತ್ತಿರುವುದು ದುರಾದೃಷ್ಟಕರ. ಏಷ್ಯನ್ ಗೇಮ್ಸ್ ನಿಯಮದ ಕಾರಣದಿಂದಾಗಿ ಅವರು ಈ ಟೂರ್ನಿಯಿಂದ ಹೊರಗುಳಿಯುಂತಾಗಿದೆ’ ಎಂದು ಪಾಕ್ ಮಹಿಳಾ ಕ್ರಿಕೆಟ್ ಮುಖ್ಯಸ್ಥೆ ತಾನಿಯಾ ಮಲ್ಲಿಕ್ ಹೇಳಿದ್ದಾರೆ. ಈ ಬಾರಿಯ ಏಷ್ಯನ್ ಗೇಮ್ಸ್ ಚೀನಾದ ಹ್ಯಾಂಗ್ಚೂ ನಲ್ಲಿ ನಡೆಯಲಿದೆ. ಸೆಪ್ಟೆಂಬರ್ 28ರಿಂದ ಅಕ್ಟೋಬರ್ 8ರವರೆಗೆ ನಡೆಯಲಿದೆ. ಟಿ20 ಮಾದರಿಯಲ್ಲಿ ಈ ಕೂಟ ನಡೆಯಲಿದೆ.
ಇದನ್ನೂ ಓದಿ Asian Games 2023 : ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ವೇಳಾಪಟ್ಟಿಯ ಬಗ್ಗೆ ಇಲ್ಲಿದೆ ಮಾಹಿತಿ
ಏಷ್ಯನ್ ಗೇಮ್ಸ್‌ನಲ್ಲಿ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡ ಉತ್ತಮ ದಾಖಲೆ ಹೊಂದಿದೆ. ಹಿಂದಿನ ಎರಡೂ ಆವೃತ್ತಿಯಲ್ಲಿಯೂ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದೆ. 2010ರಲ್ಲಿ ಚೀನಾದಲ್ಲಿ ನಡೆದ ಗುವಾಂಗ್‌ಝೌ ಹಾಗೂ 2014ರಲ್ಲಿ ದಕ್ಷಿಣ ಕೊರಿಯಾದ ಇಂಚೋನ್‌ನಲ್ಲಿ ನಡೆದ ಟೂರ್ನಿಯಲ್ಲಿ ಪಾಕ್ ಮಹಿಳಾ ತಂಡ ಸ್ವರ್ಣಕ್ಕೆ ಕೊರಳೊಡ್ಡಿತ್ತು. ಈ ಬಾರಿಯೂ ಗೆದ್ದು ಹ್ಯಾಟ್ರಿಕ್ ಚಿನ್ನ ಗೆಲ್ಲುವ ವಿಶ್ವಾದಲ್ಲಿದ್ದ ತಂಡಕ್ಕೆ ಬಿಸ್ಮಾ ಮಾರೂಫ್ ಅಲಭ್ಯತೆ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆ ಇದೆ.