Site icon Vistara News

ಭಾರತ ವಿಶ್ವಕಪ್‌ ಗೆದ್ದರೆ 100 ಕೋಟಿ ರೂ. ಬಹುಮಾನ; ಆಸ್ಟ್ರೋಟಾಕ್‌ ಸಿಇಒ ಭರ್ಜರಿ ಆಫರ್

Astrotalk CEO Puneet Gupta

Astrotalk CEO promises ₹100 crore reward to users if India wins World Cup final against Australia

ಅಹಮದಾಬಾದ್:‌ ಏಕದಿನ ವಿಶ್ವಕಪ್‌ ಕ್ರಿಕೆಟ್‌ನ (ICC World Cup 2023) ಫೈನಲ್‌ ಪಂದ್ಯದ ಆರಂಭಕ್ಕೆ ಕೆಲವೇ ನಿಮಿಷಗಳು ಬಾಕಿ ಇವೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಅಹಮದಾಬಾದ್‌ ಸ್ಟೇಡಿಯಂ ತಲುಪಿವೆ. ಭಾರತವೇ ವಿಶ್ವಕಪ್‌ ಗೆಲ್ಲಲಿ ಶತಕೋಟಿ ಭಾರತೀಯರು ಪ್ರಾರ್ಥನೆ, ಪೂಜೆ ಸಲ್ಲಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಜ್ಯೋತಿಷ ಸಂಸ್ಥೆಯಾದ ‘ಆಸ್ಟ್ರೋಟಾಕ್‌’ ಸಿಇಒ ಪುನೀತ್‌ ಗುಪ್ತಾ (Astrotalk CEO Puneet Gupta) ಅವರು 100 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ. “ಭಾರತ ಕ್ರಿಕೆಟ್‌ ತಂಡವು ವಿಶ್ವಕಪ್‌ ಗೆದ್ದರೆ ಆಸ್ಟ್ರೋಟಾಕ್‌ ಬಳಕೆದಾರರಿಗೆ 100 ಕೋಟಿ ರೂ. ಹಂಚುವುದಾಗಿ” ಘೋಷಣೆ ಮಾಡಿದ್ದಾರೆ.

“ಭಾರತವು ವಿಶ್ವಕಪ್‌ ಗೆದ್ದರೆ ಆಸ್ಟ್ರೋಟಾಕ್‌ ಗ್ರಾಹಕರಿಗೆ 100 ಕೋಟಿ ರೂ. ಬಹುಮಾನ ನೀಡಲಾಗುವುದು. ಆಸ್ಟ್ರೋಟಾಕ್‌ ವ್ಯಾಲೆಟ್‌ ಮೂಲಕ ಎಲ್ಲ ಬಳಕೆದಾರರಿಗೆ ಸಮನಾಗಿ 100 ಕೋಟಿ ರೂಪಾಯಿಯನ್ನು ಹಂಚಿಕೆ ಮಾಡಲಾಗುವುದು. ಭಾರತ ತಂಡಕ್ಕೆ ಬೆಂಬಲ ನೀಡೋಣ. ಇಂಡಿಯಾ… ಇಂಡಿಯಾ…” ಎಂದು ಪುನೀತ್‌ ಗುಪ್ತಾ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆಸ್ಟ್ರೋಟಾಕ್‌ ಸಂಸ್ಥೆಯು ಜ್ಯೋತಿಷ ಕಂಪನಿಯಾಗಿದ್ದು, ಆನ್‌ಲೈನ್‌ ಮೂಲಕವೇ ಜನರ ಗೊಂದಲಗಳಿಗೆ ಪರಿಹಾರ ನೀಡಲಾಗುತ್ತದೆ.

ಪುನೀತ್‌ ಗುಪ್ತಾ ಟ್ವೀಟ್‌

2011ರ ವಿಶ್ವಕಪ್‌ ನೆನೆದ ಪುನೀತ್‌ ಗುಪ್ತಾ

ಪುನೀತ್‌ ಗುಪ್ತಾ ಅವರು 2011ರ ವಿಶ್ವಕಪ್‌ ದಿನಗಳನ್ನು ಕೂಡ ಲಿಂಕ್ಡ್‌ಇನ್‌ನಲ್ಲಿ ಸ್ಮರಿಸಿದ್ದಾರೆ. “2011ರಲ್ಲಿ ಭಾರತ ತಂಡವು ವಿಶ್ವಕಪ್‌ ಗೆದ್ದಾಗ ನಾನು ಕಾಲೇಜಿನಲ್ಲಿ ಓದುತ್ತಿದ್ದ. ಭಾರತ ಕಪ್‌ ಗೆದ್ದ ದಿನವು ನನ್ನ ಜೀವನದ ಸುಮಧುರ ದಿನಗಳಲ್ಲೇ ಪ್ರಮುಖವಾಗಿತ್ತು. ಚಂಡೀಗಢ ಕಾಲೇಜಿನ ಬಳಿಯ ಆಡಿಟೋರಿಯಂನಲ್ಲಿ ನಾನು ಹಾಗೂ ನನ್ನ ಗೆಳೆಯರು ಫೈನಲ್‌ ಪಂದ್ಯವನ್ನು ವೀಕ್ಷಿಸಿದ್ದೆವು. ಫೈನಲ್‌ ಪಂದ್ಯದ ಹಿಂದಿನ ರಾತ್ರಿ ನಮಗೆ ನಿದ್ದೆಯೇ ಬಂದಿರಲಿಲ್ಲ. ಇಡೀ ರಾತ್ರಿ ಪಂದ್ಯದ ಬಗ್ಗೆಯೇ ಚರ್ಚಿಸಿದ್ದೆವು. ಪಂದ್ಯದ ದಿನವಂತೂ ನಮ್ಮ ಟೆನ್ಶನ್‌ ದುಪ್ಪಟ್ಟಾಗಿತ್ತು” ಎಂದು ಪುನೀತ್‌ ಗುಪ್ತಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ICC World Cup 2023: ಇಂದು ವಿಶ್ವಕಪ್‌ ಫೈನಲ್‌; ಎಲ್ಲೆಡೆ ‘ಗೆದ್ದು ಬೀಗು ಇಂಡಿಯಾ’ ಪ್ರಾರ್ಥನೆ

ಮೋದಿ ಸ್ಟೇಡಿಯಂನಲ್ಲಿ ಜನಸಾಗರ

ಭಾರತ-ಆಸ್ಟ್ರೇಲಿಯಾ ಹೈವೋಲ್ಟೇಜ್‌ ಪಂದ್ಯದ ಹಿನ್ನೆಲೆಯಲ್ಲಿ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜನಸಾಗರವೇ ಕಂಡುಬರುತ್ತಿದೆ. ಮೈದಾನದ ಸುತ್ತಲೂ ಜನ ತುಂಬಿ ತುಳುಕುತ್ತಿದ್ದು, ಶನಿವಾರ (ನವೆಂಬರ್‌ 18) ರಾತ್ರಿಯಿಂದಲೇ ಸಾವಿರಾರು ಜನ ಮೈದಾನದ ಸುತ್ತ ನೆರೆದಿದ್ದರು. ಭಾನುವಾರ (ನವೆಂಬರ್‌ 19) ಬೆಳಗ್ಗೆಯಿಂದಲೂ ಲಕ್ಷಾಂತರ ಜನ ಸೇರಿದ್ದಾರೆ. ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಗಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇನ್ನು ಭಾರತ ತಂಡವೇ ವಿಶ್ವಕಪ್‌ ಗೆಲ್ಲಲಿ ಎಂದು ದೇಶಾದ್ಯಂತ ದೇವಾಲಯಗಳಲ್ಲಿ ಪೂಜೆ, ಅರ್ಚನೆ ಮಾಡಲಾಗುತ್ತಿದೆ.

ಸಂಭಾವ್ಯ ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ , ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್.

ಆಸ್ಟ್ರೇಲಿಯಾ : ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲಾಬುಶೇನ್/ ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್ವೆಲ್, ಜೋಶ್ ಇಂಗ್ಲಿಸ್ (ವಿಕೆಟ್​ ಕೀಪರ್​), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಆಡಮ್ ಝಂಪಾ, ಜೋಶ್ ಹೇಜಲ್​ವುಡ್​​.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version