ಪ್ಯಾರಿಸ್: ಯುವ ಟೆನಿಸಿಗ ಕಾರ್ಲೋಸ್ ಅಲ್ಕರಾಜ್ ಅವರು ಎಟಿಪಿ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೂಲಕ ಸರ್ಬಿಯಾದ ಸ್ಟಾರ್ ಆಟಗಾರ ನೊವಾಕ್ ಜೊಕೊವಿಕ್ ಅವರನ್ನು ಹಿಂದಿಕ್ಕಿದ್ದಾರೆ. ಇದರೊಂದಿಗೆ ಫ್ರೆಂಚ್ ಓಪನ್‌ನಲ್ಲಿ ಅಗ್ರ ಶ್ರೇಯಾಂಕದ ಮೂಲಕ ಕಣಕ್ಕಿಳಿಯಲಿದ್ದಾರೆ. ಕಳೆದ ವರ್ಷವೂ ಅಲ್ಕರಾಜ್ ಅಗ್ರಸ್ಥಾನ ಪಡೆದಿದ್ದರು. ಆ ಬಳಿಕ ಗಾಯದಿಂದಾಗಿ ಕೆಲ ಟೂರ್ನಿಯಿಂದ ಹೊರಗುಳಿದ ಕಾರಣದಿಂದ ಅವರ ಶ್ರೇಯಾಂಕ ಕುಸಿದಿತ್ತು. ಇದೀಗ ಮತ್ತೆ ನಂ.1 ಸ್ಥಾನ ಪಡೆದಿದ್ದಾರೆ.
ಇಟಲಿ ಓಪನ್ ಪ್ರಶಸ್ತಿ ಗೆದ್ದ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ 2ನೇ ಸ್ಥಾನಕ್ಕೇರಿದ್ದು, 22 ಗ್ರ್ಯಾನ್‌ಸ್ಲಾಮ್ ಒಡೆಯ ಜೊಕೊವಿಕ್ ಸದ್ಯ 3ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬರುವ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದರೆ ಅವರು ಮತ್ತೆ ಅಗ್ರಸ್ಥಾನಕ್ಕೇರಬಹುದು. ಮಹಿಳಾ ಸಿಂಗಲ್ಸ್‌ನ ಶ್ರೇಯಾಂಕದಲ್ಲಿ ಪೋಲೆಂಡ್‌ನ ಐಗಾ ಸ್ವಿಯಾಟೆಕ್ ನಂ.1 ಸ್ಥಾನ ಕಾಯ್ದುಕೊಂಡಿದ್ದು, ಆಸ್ಪ್ರೇಲಿಯನ್ ಓಪನ್ ಚಾಂಪಿಯನ್ ಬೆಲಾರುಸ್‌ನ ಅರೈನಾ ಸಬಲೆಂಕಾ 2ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ ATP Rankings: ಶ್ರೇಯಾಂಕದಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದ ರೋಹನ್ ಬೋಪಣ್ಣ
ರೋಹನ್ ಬೋಪಣ್ಣ ಶ್ರೇಷ್ಠ ಸಾಧನೆ
43 ವರ್ಷದ ನೂತನ ಟೆನಿಸ್ ಶ್ರೇಯಾಂಕದಲ್ಲಿ 7 ವರ್ಷಗಳ ಬಳಿಕ ಮತ್ತೆ ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ. ಪುರುಷರ ಡಬಲ್ಸ್‌ನ ವಿಶ್ವ ಶ್ರೇಯಾಂಕದಲ್ಲಿ 9ನೇ ಸ್ಥಾನ ಪಡೆದಿರುವ ಅವರು ಈ ಸಾಧನೆ ಮಾಡಿದ ಭಾರತದ ಅತಿ ಹಿರಿಯ ಟೆನಿಸಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸದ್ಯ ಮುಂದಿನ ವಾರ ಆರಂಭಗೊಳ್ಳಲಿರುವ ವರ್ಷದ ದ್ವಿತೀಯ ಗ್ರ್ಯಾನ್‌ಸ್ಲಾಮ್ ಫ್ರೆಂಚ್ ಓಪನ್‌ನಲ್ಲಿ ಕಣಕ್ಕಿಳಿಯಲು ಬೋಪಣ್ಣ ಸಜ್ಜಾಗುತ್ತಿದ್ದಾರೆ. 2013ರ ಟೂರ್ನಿಯಲ್ಲಿ ಬೋಪಣ್ಣ 3ನೇ ಸ್ಥಾನ ಪಡೆದಿದ್ದರು. ಇದು ಅವರ ಈ ವರೆಗಿನ ಶ್ರೇಷ್ಠ ಸಾಧನೆಯಾಗಿದೆ.