ಕಿಂಗ್‌ಸ್ಟೌನ್ (ಸೇಂಟ್ ವಿನ್ಸೆಂಟ್): ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶವೊಂದು ದಾಖಲಾಗಿದೆ. ಭಾನುವಾರ ನಡೆದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾಕ್ಕೆ ಅಫಘಾನಿಸ್ತಾನ 21 ರನ್ ಅಂತರದ ಸೋಲಿನ ಆಘಾತವಿಕ್ಕಿದೆ. ಈ ಗೆಲುವಿನೊಂದಿಗೆ ರಶೀದ್ ಖಾನ್ ಪಡೆಯ ಸೆಮಿ ಆಸೆ ಕೂಡ ಜೀವಂತವಾಗಿದೆ. ಇದು ಆಸೀಸ್ ವಿರುದ್ಧ ಅಫಘಾನಿಸ್ತಾನಕ್ಕೆ ಒಲಿದ ಮೊದಲ ಗೆಲುವು.
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಅಫಘಾನಿಸ್ತಾನ ತಂಡ ಕಮಿನ್ಸ್ ಅವರ ಬೌಲಿಂಗ್ ದಾಳಿಯ ಮಧ್ಯೆಯೂ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 148 ರನ್ ಬಾರಿಸಿತು. ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಗ್ಲೆನ್ ಮ್ಯಾಕ್ಸ್ವೆಲ್ ಅವರ ಅರ್ಧಶತಕದ ಹೊರತಾಗಿಯೂ 127 ರನ್ಗೆ ಸರ್ವಪತನ ಕಂಡು ಸೋಲಿಗೆ ತುತ್ತಾಯಿತು. ಈ ಗೆಲುವಿನೊಂದಿಗೆ ಆಫ್ಘಾನ್ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಸೋಲಿಗೆ ಇಲ್ಲಿ ಸೇಡು ತೀರಿಸಿಕೊಂಡಿತು. ಹಾಲಿ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಈ ಮೈದಾನದಲ್ಲಿ ಆಡಿದ 4ಕ್ಕೂ ಪಂದ್ಯಗಳನ್ನು ಕೂಡ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಗೆದ್ದು ಬೀಗಿತು.
ಸಣ್ಣ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೆ ನವೀನ್ ಉಲ್ ಹಕ್ ಮೊದಲ ಎಸೆತದಲ್ಲೇ ಆಘಾತವಿಕ್ಕಿದರು. ಅಪಾಯಕಾರಿ ಬ್ಯಾಟರ್ ಟ್ರಾವಿಸ್ ಹೆಡ್(0) ಅವರನ್ನು ಕ್ಲೀನ್ ಬೌಲ್ಟ್ ಮಾಡಿದರು. 16 ರನ್ ಒಟ್ಟುಗೂಡುವಷ್ಟರಲ್ಲಿ ಡೇವಿಡ್ ವಾರ್ನರ್(3) ವಿಕೆಟ್ ಕೂಡ ಪತನಗೊಂಡಿತು. ಇಲ್ಲಿಂದ ಆಸೀಸ್ ಪತನ ಕೂಡ ಆರಂಭವಾಯಿತು. ನಾಯಕ ಮಿಚೆಲ್ ಮಾರ್ಷ್(12), ಮಾರ್ಕಸ್ ಸ್ಟೋಯಿನಿಸ್(11), ಟಿಮ್ ಡೇವಿಡ್(2), ಮ್ಯಾಥ್ಯೂ ವೇಡ್(5) ಸತತವಾಗಿ ವಿಕೆಟ್ ಕಳೆದುಕೊಂಡು ಪೆವಿಲಿಯನ್ ಪರೇಡ್ ನಡೆಸಿದರು.
ಒಂದೆಡೆ ವಿಕೆಟ್ ಬೀಳುತ್ತಿದ್ದರು ಮತ್ತೊಂದು ತುದಿಯಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಮಾತ್ರ ಬಿರುಸಿನ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿಗಾಗಿ ಶಕ್ತಿ ಮೀರಿ ಪ್ರಯತ್ನಪಟ್ಟರು. ಅವರ ಬ್ಯಾಟಿಂಗ್ ಗಮನಿಸುವಾಗ ಕಳೆದ ವರ್ಷದ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯ ಮತ್ತೆ ಮರುಕಳಿಸುವಂತೆ ಭಾಸವಾಯಿತು. ಏಕದಿನ ವಿಶ್ವಕಪ್ನಲ್ಲಿ ಆಫ್ಘಾನ್ ವಿರುದ್ಧ ಮ್ಯಾಕ್ಸ್ವೆಲ್ ಏಕಾಂಗಿಯಾಗಿ ಅಜೇಯ ದ್ವಿಶತಕ ಬಾರಿಸಿ ಆಸೀಸ್ಗೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು. ಆದರೆ ಈ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ವಿಕೆಟ್ ಕಳೆದುಕೊಂಡರು. ಇವರ ವಿಕೆಟ್ ಪತನಗೊಳ್ಳುತ್ತಿದ್ದಂತೆ ಆಸೀಸ್ ಸೋಲು ಕೂಡ ಖಚಿತಗೊಂಡಿತು. ಅಂತಿಮವಾಗಿ ಮ್ಯಾಕ್ಸ್ವೆಲ್ 3 ಸಿಕ್ಸರ್ ಮತ್ತು 6 ಬೌಂಡರಿ ನೆರವಿನಿಂದ 59 ರನ್ ಬಾರಿಸಿದರು. ಒಟ್ಟಾರೆ ಆಸೀಸ್ ಪರ ಇಬ್ಬರು ಮಾತ್ರ ಎರಡಂಕಿ ಮೊತ್ತ ದಾಖಲಿಸಿದರು.
ಅಫಘಾನಿಸ್ತಾನ ಪರ ಘಾತಕ ಬೌಲಿಂಗ್ ದಾಳಿ ನಡೆಸಿದ ಗುಲ್ಬದಿನ್ ನೈಬ್ 2 ಓವರ್ಗೆ 20 ರನ್ ನೀಡಿ 4 ವಿಕೆಟ್ ಕಿತ್ತರು. ಇವರಿಗೆ ಉತ್ತಮ ಸಾಥ್ ನೀಡಿದ ನವೀನ್ ಉಲ್ ಹಕ್ 4 ಓವರ್ಗೆ 20 ರನ್ ಬಿಟ್ಟುಕೊಟ್ಟು 3 ವಿಕೆಟ್ ಉರುಳಿಸಿದರು. ನಾಯಕ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ತಲಾ ಒಂದು ವಿಕೆಟ್ ಪೆಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಅಫಘಾನಿಸ್ತಾನ ಪರ ರಹಮಾನುಲ್ಲಾ ಗುರ್ಬಾಜ್(60) ಮತ್ತು ಇಬ್ರಾಹಿಂ ಜದ್ರಾನ್(51) ಅವರ ಅಮೋಘ ಅರ್ಧಶತಕದ ಆಟದಿಂದ ಅಫಘಾನಿಸ್ತಾನ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಈ ಜೋಡಿ ಮೊದಲ ವಿಕೆಟ್ಗೆ 118 ರನ್ಗಳ ಜತೆಯಾಟ ನಡೆಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿತು. ಈ ಜೋಡಿ ವಿಕೆಟ್ ಪತನದ ಬಳಿಕ ಬಂದ ಆಟಗಾರರು ನಿರೀಕ್ಷಿತ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾದರು.
ಕಮಿನ್ಸ್ ಹ್ಯಾಟ್ರಿಕ್ ವಿಕೆಟ್ ಸಾಧನೆ
ಕಳೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತು ಮಿಂಚಿದ್ದ ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ಮತ್ತೊಂದು ಹ್ಯಾಟ್ರಿಕ್ ವಿಕೆಟ್ ಸಾಧನೆಗೈದಿದ್ದಾರೆ. ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ಹ್ಯಾಟ್ರಿಕ್ ವಿಕೆಟ್ ಕಿತ್ತು ಟಿ20 ವಿಶ್ವಕಪ್ ಟೂರ್ನಿಯಲ್ಲಿ 2 ಬಾರಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಬೌಲರ್ ಎನಿಸಿಕೊಂಡರು. 18ನೇ ಓವರ್ನ ಕೊನೆಯ ಎಸೆತದಲ್ಲಿ ರಶೀದ್ ಖಾನ್ ಅವರ ವಿಕೆಟ್ ಕಬಳಿಸಿದ್ದ ಕಮಿನ್ಸ್ 20ನೇ ಓವರ್ನ ಮೊದಲೆರಡು ಎಸೆತಗಳಲ್ಲಿ ಕರೀಮ್ ಜನ್ನತ್, ಹಾಗೂ ಗುಲ್ಬದ್ದೀನ್ ನೈಬ್ ವಿಕೆಟ್ ಉರುಳಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು. ಕಮಿನ್ಸ್ ಟಿ20 ವಿಶ್ವ ಕಪ್ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಆಸೀಸ್ನ ಎರಡನೇ ಆಟಗಾರ. ಬ್ರೆಟ್ ಲೀ ಮೊದಲಿಗ. 2007ರ ಚೊಚ್ಚಲ ಆವೃತ್ತಿಯಲ್ಲಿ ಬ್ರೆಟ್ ಲೀ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತಿದ್ದರು.