Site icon Vistara News

AUS vs ENG: ಆಸೀಸ್​ಗೆ ಗೆಲುವು; ಟೂರ್ನಿಯಿಂದ ಹೊರಬಿದ್ದ ಹಾಲಿ ಚಾಂಪಿಯನ್​ ಇಂಗ್ಲೆಂಡ್​

England vs Australia

ಅಹಮದಾಬಾದ್​: ಸೆಮಿಫೈನಲ್​ ಪ್ರವೇಶದ ಸಣ್ಣ ಕನಸೊಂದನ್ನು ಕಂಡಿದ್ದ ಹಾಲಿ ಚಾಂಪಿಯನ್​ ಇಂಗ್ಲೆಂಡ್(AUS vs ENG)​ ತಂಡದ ಈ ಕನಸು ಭಗ್ನಗೊಂಡಿದೆ. ಆಸ್ಟ್ರೇಲಿಯಾ ವಿರುದ್ಧ 33 ರನ್​ಗಳ ಸೋಲಿಗೆ ತುತ್ತಾಗಿ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿತು. ಗೆಲುವು ಕಂಡ ಆಸೀಸ್​ 10 ಅಂಕ ಸಂಪಾದಿಸಿ ಸೆಮಿ ಫೈನಲ್​ ಬಾಗಿಲಿಗೆ ಬಂದು ನಿಂತಿದೆ.

ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಆಸ್ಟ್ರೇಲಿಯಾ ಸಂಘಟಿತ ಬ್ಯಾಟಿಂಗ್​ ಪ್ರದರ್ಶನದ ನೆರವಿನಿಂದ 49.3 ಓವರ್​ಗಳಲ್ಲಿ 286 ರನ್​ ಗಳಿಸಿ ಆಲೌಟ್​ ಆಯಿತು. ಸುಲಭ ಮೊತ್ತವನ್ನು ಈ ಬಾರಿಯಾದರೂ ಬೆನ್ನಟ್ಟಿ ಇಂಗ್ಲೆಂಡ್ ಗೆಲುವು ಕಾಣಬಹುದು ಎಂದು ನಿರೀಕ್ಷೆ ಮಾಡಲಾಯಿತು. ಆದರೆ ಆಂಗ್ಲರದ್ದು ಅದೇ ಹಾಡು ಅದೇ ರಾಗ ಎಂಬಂತೆ ಮತ್ತೆ ಕಳಪೆ ಪ್ರದರ್ಶನ ತೋರುವ ಮೂಲಕ 253 ರನ್​ಗೆ ಸರ್ವಪತನ ಕಂಡಿತು. ಈ ಸೋಲಿನೊಂದಿಗೆ ಆಂಗ್ಲರು ವಿಶ್ವಕಪ್​ನಿಂದ ಹೊರಬಿದ್ದ ಸಂಕಟಕ್ಕೆ ಸಿಲುಕಿದರು.​

ಇದನ್ನೂ ಓದಿ ಭಾರತ ವಿರುದ್ಧ ಆಡುವ ಮುನ್ನವೇ ಸೆಮಿಫೈನಲ್​ ತಲುಪಿದ ದಕ್ಷಿಣ ಆಫ್ರಿಕಾ

ಸ್ಟೋಕ್ಸ್​-ಮಲಾನ್​ ಅರ್ಧಶತಕ ವ್ಯರ್ಥ

ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್​ಗೆ ಆರಂಭಕಾರ ಡೇವಿಡ್ ಮಲಾನ್​ ಮತ್ತು ನಿವೃತ್ತಿ ವಾಪಸ್​ ಪಡೆದು ಬಂದ 2019 ವಿಶ್ವಕಪ್​ ಗೆಲುವಿನ ಹೀರೊ ಬೆನ್ ಸ್ಟೋಕ್ಸ್​ ಅರ್ಧಶತಕ ಬಾರಿಸಿ ಒಂದು ಹಂತದಲ್ಲಿ ತಂಡಕ್ಕೆ ಆಸರೆಯಾದರು. ಉಭಯ ಆಟಗಾರು ಕೆಲ ಕಾಲ ಆಸೀಸ್​ ಬೌಲರ್​ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ತಂಡಕ್ಕೆ ಗೆಲುವು ತಂದು ಕೊಡುವ ಸೂಚನೆ ನೀಡಿದರು. ಆದರೆ ಇವರ ವಿಕೆಟ್​ ಪತನದ ಬಳಿಕ ತಂಡ ನಾಟಕೀಯ ಕುಸಿತ ಕಂಡಿತು. ಬೆನ್​ ಸ್ಟೋಕ್ಸ್​ ಅವರು 90 ಎಸೆತ ಎದುರಿಸಿ 3 ಸಿಕ್ಸರ್​ ಮತ್ತು 2 ಬೌಂಡರಿ ನೆರವಿನಿಂದ 64 ರನ್​ ಬಾರಿಸಿದರು. ಮಲಾನ್​ 4 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ ಭರ್ತಿ 50 ರನ್ ಗಳಿಸಿದರು. ನಂಬುಗೆಯ ಬ್ಯಾಟರ್​ ಜೋ ರೂಟ್​(13) ಮತ್ತು ಜಾನಿ ಬೇರ್​ ಸ್ಟೋ ಶೂನ್ಯಕ್ಕೆ ಔಟಾದರು.

ಮೂರು ವಿಕೆಟ್ ಕಿತ್ತ ಜಂಪಾ

ಅಂತಿಮ ಹಂತದಲ್ಲಿ ಮೊಯಿನ್​ ಅಲಿ ಮತ್ತು ಕ್ರಿಸ್​ ವೋಕ್ಸ್​ ಹೋರಾಟ ಜಾರಿಯಲ್ಲಿರಿಸಿದರೂ ಇವರಿಂದ ಪಂದ್ಯವನ್ನು ಗೆಲುವಿನ ಗಡಿ ದಾಟಿಸಲು ಸಾಧ್ಯವಾಗಲಿಲ್ಲ. ಮೊಯಿನ್​ ಅಲಿ 42 ರನ್​ ಗಳಿಸಿದರೆ, ವೋಕ್ಸ್​ 32 ರನ್​ ಬಾರಿಸಿದರು. ಆಸೀಸ್​ ಪರ ಆ್ಯಡಂ ಜಂಪಾ 21 ರನ್​ಗೆ ಮೂರು ವಿಕೆಟ್​ ಕಿತ್ತು. ಆಂಗ್ಲರ ಹೆಡೆಮುರಿ ಕಟ್ಟಿದರು. ಇವರಿಗೆ ಮಾರ್ಕಸ್​ ಸ್ಟೋಯಿನಿಸ್​, ಜೋಶ್​ ಹ್ಯಾಜಲ್​ವುಡ್​ ಮತ್ತು ನಾಯಕ ಪ್ಯಾಟ್ ಕಮಿನ್ಸ್​ ತಲಾ 2 ವಿಕೆಟ್​ ಕಿತ್ತು ಉತ್ತಮ ಸಾಥ್​ ನೀಡಿದರು.

ಆಸೀಸ್​ಗೆ ಆಸರೆಯಾದ ಲಬುಶೇನ್​-ಗ್ರೀನ್​

ಮೊದಲು ಬ್ಯಾಟಿಂಗ್​ ನಡೆಸಿದ ಆಸೀಸ್​ ತಂಡ ಕೂಡ ನಿರೀಕ್ಷಿತ ಆಟ ಪ್ರದರ್ಶಿಸಲು ವಿಫಲವಾಯಿತು. ಡೇಂಜಸರ್​ ಬ್ಯಾಟರ್​ಗಳಾದ ಡೇವಿಡ್ ವಾರ್ನರ್​(15) ಮತ್ತು ಕಳೆದ ಪಂದ್ಯದ ಶತಕ ವೀರ ಟ್ರಾವಿಸ್​ ಹೆಟ್​(11) ಅಗ್ಗಕ್ಕೆ ಔಟಾದರು. ಬಳಿಕ ಬಂದ ಸ್ಮಿತ್​ ಕೂಡ ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸುವಲ್ಲಿ ವಿಫಲರಾದರು. ಅವರ ಗಳಿಕೆ 44.

ತಂಡ ಸಂಕಷ್ಟಕ್ಕ ಸಿಲುಕಿದಾಗ ಮಾರ್ನಸ್​ ಲುಬುಶೇನ್ ಅರ್ಧಶತಕ ಬಾರಿಸಿ ಆಸರೆಯಾದರು. ಇವರಿಗೆ ಮತ್ತೊಂದು ತುದಿಯಲ್ಲಿ ಕ್ಯಾಮರೂನ್​ ಗ್ರೀನ್​ ಉತ್ತಮ ಸಾಥ್​ ನೀಡಿದರು. ಲಬುಶೇನ್​ 71 ರನ್​ ಗಳಿಸಿದರೆ, ಗ್ರೀನ್​ 47 ರನ್​ಗೆ ಔಟಾಗಿ​ ಕೇವಲ ಮೂರು ರನ್​ ಅಂತರದಿಂದ ಅರ್ಧಶತಕ ತಪ್ಪಿಸಿಕೊಂಡರು. ಅಂತಿಮ ಹಂತದಲ್ಲಿ ಮಾರ್ಕಸ್​ ಸ್ಟೋಯಿನಿಸ್​(35) ಮತ್ತು ಜಂಪಾ(29) ಅವರ ಬಿರಿಸಿನ ಬ್ಯಾಟಿಂಗ್​ ನೆರವಿನಿಂದ ತಂಡ ಸ್ಪರ್ಧಾತ್ಮಕ ಮೊತ್ತಗಳಿಸುವಲ್ಲಿ ಯಶಸ್ಸಿಯಾಯಿತು. ಇಂಗ್ಲೆಂಡ್​ ಪರ ಬೌಲಿಂಗ್​ನಲ್ಲಿ ಕ್ರಿಸ್​ ವೋಕ್ಸ್​ 4 ವಿಕೆಟ್​ ಕಿತ್ತು ಮಿಂಚಿದರು.

Exit mobile version