ನವದೆಹಲಿ: ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಸರ್ವಾಂಗೀಣ ಪ್ರದರ್ಶನ ತೋರಿದ ಆಸ್ಟ್ರೇಲಿಯಾ(AUS vs NED) ತಂಡ ನೆದರ್ಲೆಂಡ್ಸ್ ವಿರುದ್ಧ ಭಾರಿ ಮೊತ್ತದ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 6 ಅಂಕ ಸಂಪಾದಿಸಿ ಸೆಮಿಫೈನಲ್ ಆಸೆ ಜೀವಂತವಿರಿಸಿದೆ. ಇದು ಆಸ್ಟ್ರೇಲಿಯಾಕ್ಕೆ 5 ಪಂದ್ಯಗಳಿಂದ ಒಲಿದ 3ನೇ ಗೆಲುವಾಗಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ, ಆರಂಭಕಾರ ಡೇವಿಡ್ ವಾರ್ನರ್(104) ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್(106) ಅವರ ದಾಖಲೆಯ ಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗೆ 399 ರನ್ ಬಾರಿಸಿತು. ಬೃಹತ್ ಮೊತ್ತವನ್ನು ಕಂಡು ಕಂಗಾಲಾದ ನೆದರ್ಲೆಂಡ್ಸ್ 21 ಓವರ್ಗಳಲ್ಲಿ 90 ರನ್ಗೆ ಸರ್ವಪತನ ಕಂಡಿತು. ಆಸ್ಟ್ರೇಲಿಯಾ 309 ರನ್ಗಳ ಗೆಲುವು ಸಾಧಿಸಿತು.
ವಿಶ್ವಕಪ್ನಲ್ಲಿ ದಾಖಲೆ
ಇದು ಏಕದಿನ ಕ್ರಿಕೆಟ್ನಲ್ಲಿ ತಂಡವೊಂದರ ವಿರುದ್ಧ ಗೆದ್ದ ಎರಡನೇ ಅತ್ಯಧಿಕ ರನ್ ಗೆಲುವಾಗಿದೆ. ದಾಖಲೆ ಭಾರತದ ಹೆಸರಿನಲ್ಲಿದೆ. ಇದೇ ವರ್ಷ ತಿರುವನಂತಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಟೀಮ್ ಇಂಡಿಯಾ ಲಂಕಾ ವಿರುದ್ಧ 317ರನ್ಗಳ ಅಂತರದಿಂದ ಗೆದ್ದು ಬೀಗಿತ್ತು. ಆದರೆ ವಿಶ್ವಕಪ್ನಲ್ಲಿ ಆಸೀಸ್ ತಂಡದ ದಾಖಲೆಯ ಮೊತ್ತದ ಗೆಲುವುವಾಗಿದೆ.
Australia register the largest victory by runs in the history of the Cricket World Cup. #AUSvNED | #CWC23 | 📝: https://t.co/PWnTqfNey8 pic.twitter.com/GwizCvWydo
— ICC Cricket World Cup (@cricketworldcup) October 25, 2023
ವಾರ್ನರ್ ಶತಕ ಸಂಭ್ರಮ
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾಕ್ಕೆ ಡೇವಿಡ್ ವಾರ್ನರ್ ಅವರು ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ಒದಗಿಸಿದರು. ಆದರೆ ಇವರ ಜತೆಗಾರ ಶಾನ್ ಮಾರ್ಷ್ ಅವರು ಕೇವಲ 9ರನ್ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಆ ಬಳಿಕ ಬಂದ ಸ್ಟೀವನ್ ಸ್ಮಿತ್ ಅವರು ವಾರ್ನರ್ ಜತೆ ಉತ್ತಮ ಜತೆಯಾಟ ನಿಭಾಯಿಸಿದರು. ದ್ವಿತೀಯ ವಿಕೆಟ್ಗೆ ಬರೋಬ್ಬರಿ 132 ರನ್ ಒಟ್ಟುಗೂಡಿತು. ಸ್ಮಿತ್ ಅವರು 71 ರನ್ ಗಳಿಸಿ ಅರ್ಧಶತಕ ಪೂರ್ತಿಗೊಳಿಸಿದರು. ವಾರ್ನರ್ ಅವರು ಶತಕ ಬಾರಿಸುವ ಮೂಲಕ ಸಚಿನ್ ಅವರ ವಿಶ್ವಕಪ್ ದಾಖಲೆಯನ್ನು ಸರಿಗಟ್ಟಿದರು.
ಸಚಿನ್ ದಾಖಲೆ ಸರಿಗಟ್ಟಿದ ವಾರ್ನರ್
ವಿಶ್ವಕಪ್ನಲ್ಲಿ ಟೂರ್ನಿಯಲ್ಲಿ ಅತ್ಯಧಿಕ ಶತಕ ಬಾರಿಸಿದ ಸಚಿನ್ ತೆಂಡೂಲ್ಕರ್(Sachin Tendulkar) ಅವರ ದಾಖಲೆಯನ್ನು ವಾರ್ನರ್ ಸರಿಗಟ್ಟಿದ್ದಾರೆ. ಸಚಿನ್ ಮತ್ತು ವಾರ್ನರ್ ವಿಶ್ವಕಪ್ನಲ್ಲಿ ತಲಾ 6 ಶತಕ ಬಾರಿಸಿದ್ದಾರೆ. 7 ಶತಕ ಬಾರಿಸಿರುವ ರೋಹಿತ್ ಶರ್ಮ ಅವರು ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಅವರು ಈ ದಾಖಲೆಯನ್ನು ಹಾಲಿ ಆವೃತ್ತಿಯಲ್ಲಿ ನಿರ್ಮಿಸಿದ್ದರು. ಇದು ವಾರ್ನರ್ ಅವರ ಏಕದಿನ ಕ್ರಿಕೆಟ್ನ 22ನೇ ಶತಕವಾಗಿದೆ. ಅಂತಿಮವಾಗಿ ಅವರು 93 ಎಸೆತ ಎದುರಿಸಿ 11 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 104 ರನ್ಗೆ ವಿಕೆಟ್ ಕೈಚೆಲ್ಲಿದರು. ಕಳೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ವಾರ್ನರ್ ಶತಕ ಬಾರಿಸಿ ಸಂಭ್ರಮಿಸಿದ್ದರು. ಈ ಶತಕದ ಮೂಲಕ ಬ್ಯಾಕ್ ಟು ಬ್ಯಾಕ್ ಶತಕ ಬಾರಿಸಿದಂತಾಗಿದೆ.
ಇದನ್ನೂ ಓದಿ Glenn Maxwell: ವಿಸ್ಫೋಟಕ ಬ್ಯಾಟಿಂಗ್ ನಡೆಸಿ ವಿಶ್ವಕಪ್ನಲ್ಲಿ ವಿಶ್ವ ದಾಖಲೆ ಬರೆದ ಗ್ಲೆನ್ ಮ್ಯಾಕ್ಸ್ವೆಲ್
ವಿಶ್ವಕಪ್ನಲ್ಲಿ ದಾಖಲೆ ಬರೆದ ಮ್ಯಾಕ್ಸ್ವೆಲ್
ಡೇವಿಡ್ ವಾರ್ನರ್ ವಿಕೆಟ್ ಪತನದ ಬಳಿಕ ನೆದರ್ಲೆಂಡ್ಸ್ ಬೌಲರ್ಗಳ ಮೇಲೆರಗಿದ ಗ್ಲೆನ್ ಮ್ಯಾಕ್ಸ್ವೆಲ್ ಕೇವಲ 40 ಎಸೆತಗಳಿಂದ ಶತಕ ಬಾರಿಸಿ ವಿಶ್ವಕಪ್ನಲ್ಲಿ ಅತಿ ವೇಗದ ಶತಕ ಬಾರಿಸಿದ ವಿಶ್ವ ದಾಖಲೆಯನ್ನು ನಿರ್ಮಿಸಿದರು. ಈ ಮೂಲಕ ಇದೇ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದ ಆಟಗಾರ ಐಡೆನ್ ಮಾರ್ಕ್ರಮ್ ಅವರು 49 ಎಸೆತಗಳಿಂದ ಶತಕ ಬಾರಿಸಿದ ದಾಖಲೆಯನ್ನು ಮುರಿದರು. ಈ ಹಿಂದೆ ಮ್ಯಾಕ್ಸ್ವೆಲ್ ಅವರು 2015ರ ವಿಶ್ವಕಪ್ನಲ್ಲಿ 51 ಎಸೆತಗಳಿಂದ ಶತಕ ಬಾರಿಸಿದ್ದರು. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಬಂದ ಮ್ಯಾಕ್ಸ್ವೆಲ್ ಅವರು ಒಟ್ಟು 44 ಎಸೆತ ಎದುರಿಸಿ 106 ರನ್ಬಾರಿಸಿ ಔಟಾದರು. ಅವರ ಈ ಸೊಗಸಾದ ಬ್ಯಾಟಿಂಗ್ ವೇಳೆ ಬರೋಬ್ಬರಿ 8 ಸಿಕ್ಸರ್ ಮತ್ತು 9 ಬೌಂಡರಿ ಸಿಡಿಯಿತು.
ಬೌಲಿಂಗ್ನಲ್ಲಿ ಮಿಂಚಿದ ಸ್ಪಿನ್ನರ್ ಆ್ಯಡಂ ಜಂಪಾ ಅವರು 3 ಓವರ್ಗೆ ಕೇವಲ 8 ರನ್ ನೀಡಿ ನಾಲ್ಕು ವಿಕೆಟ್ ಕಿತ್ತು ಡಚ್ಚರ ಹೆಡೆಮುರಿ ಕಟ್ಟಿದರು. ಆಲ್ರೌಂಡರ್ ಮಿಚೆಲ್ ಮಾರ್ಷ್ ಅವರು 2 ವಿಕೆಟ್ ಕಿತ್ತರು. ಚೇಸಿಂಗ್ ನಡೆಸಿದ ನೆದರ್ಲೆಂಡ್ಸ್ ಪರ ಆರಂಭಕಾರ ವಿಕ್ರಮ್ಜಿತ್ ಸಿಂಗ್ ಅವರು 25 ರನ್ ಬಾರಿಸಿದರು. ಇವರದ್ದೇ ತಂಡದ ಅತ್ಯಧಿಕ ಗಳಿಕೆ ಉಳಿದ ಎಲ್ಲ ಬ್ಯಾಟರ್ಗಳು ಅಗ್ಗಕ್ಕೆ ವಿಕೆಟ್ ಒಪ್ಪಿಸಿದರು.