ಲಕ್ನೋ: ಅತ್ಯಂತ ರೋಚಕವಾಗಿ ಸಾಗಿದ ಬೃಹತ್ ಮೊತ್ತದ ಮೇಲಾಟದಲ್ಲಿ ಕೊನೆಗೂ ಆಸ್ಟ್ರೇಲಿಯಾ(AUS vs NZ) ತಂಡದ ಕೈ ಮೇಲಾಗಿದೆ. 5 ರನ್ಗಳಿಂದ ಗೆಲುವು ಸಾಧಿಸಿದೆ. ಆದರೆ ಕಿವೀಸ್ ತಂಡದ ಈ ಅಸಾಮಾನ್ಯ ಹೋರಾಟ ಪಂದ್ಯದ ಹೈಲೈಟ್ಸ್ ಆಗಿತ್ತು. ಗೆಲುವು ಕಂಡ ಆಸೀಸ್ನ ಸೆಮಿ ಹಾದಿ ಇನ್ನಷ್ಟು ಭದ್ರವಾಯಿತು.
ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಆಸ್ಟ್ರೇಲಿಯಾ 49.2 ಓವರ್‌ಗಳಲ್ಲಿ 388ರನ್ಗೆ ಆಲೌಟ್ ಆಯಿತು. ಬೃಹತ್ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಹೋದ ನ್ಯೂಜಿಲ್ಯಾಂಡ್ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ಗೆ 383 ರನ್ ಗಳಿಸಿ 5 ರನ್ ಅಂತರದಲ್ಲಿ ಸೋಲು ಕಂಡಿತು. ಒಂದೊಮ್ಮೆ ಈ ಮೊತ್ತವನ್ನು ಕಿವೀಸ್ ಬೆನ್ನಟ್ಟುತ್ತಿದ್ದರೆ ಇದು ವಿಶ್ವಕಪ್‌ನಲ್ಲಿ ದಾಖಲೆಯ ಮೊತ್ತದ ರನ್ ಚೇಸ್ ಗೆಲುವಾಗುತ್ತಿತ್ತು.
ರಚಿನ್ ಶತಕ ಸಾಹಸ
ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಕಿವೀಸ್ಗೆ ಆಸರೆಯಾದದ್ದು ಕರ್ನಾಟಕ ಮೂಲದ ರಚಿನ್ ರವೀಂದ್ರ. ಆಸೀಸ್ ಬೌಲರ್ಗಳನ್ನು ಸದೆಬಡಿದ ಅವರು ಪಂದ್ಯದ ಕೊನೆಯ ಹಂತದವರೆಗೂ ಹೋರಾಡಿ ಉತ್ತಮ ಇನಿಂಗ್ಸ್ ಕಟ್ಟಿದರು. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಅವರು ಧರ್ಮಶಾಲಾ ಸ್ಟೇಡಿಯಂನ ಮೂಲೆ ಮೂಲೆಗೂ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ನೆರದ ಪ್ರೇಕ್ಷಕರಿಗೆ ಭರಪೂರ ರಂಜನೆ ನೀಡಿದರು. ಒಟ್ಟು 9 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ ಶತಕ ಬಾರಿಸಿ ಸಂಭ್ರಮಿಸಿದರು.
ಡ್ಯಾರಿಯಲ್ ಮಿಚೆಲ್ ಜತೆ ಮೂರನೇ ವಿಕೆಟ್ಗೆ 96 ರನ್ಗಳ ಜತೆಯಾಟ ನಡೆಸಿದರು. ಭಾರತ ವಿರುದ್ಧ ಶತಕ ಬಾರಿಸಿದ್ದ ಮಿಚೆಲ್ ಈ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಎಡವಿ ಲಾಂಗ್ ಆನ್ನಲ್ಲಿ ಜಾಂಪ ಅವರಿಗೆ ಕ್ಯಾಚ್ ನೀಡಿ ವಿಕೆಟ್ ಕೈಚೆಲ್ಲಿದರು. ಅವರ ಗಳಿಕೆ 54 ರನ್. ಬಾರಿಸಿದ್ದು 6 ಬೌಂಡರಿ ಮತ್ತು 1 ಸಿಕ್ಸರ್. ಆರಂಭಿಕ ಆಟಗಾರರಾದ ಡೆವೋನ್ ಕಾನ್ವೆ(28) ಮತ್ತು ವಿಲ್ ಯಂಗ್(32) ರನ್ ಗಳಿಸಿದರು.
ಅಂತಿಮ ಹಂತದಲ್ಲಿ ಹೋರಾಡಿದ ನೀಶಮ್
ಬೌಲಿಂಗ್ನಲ್ಲಿ 3 ವಿಕೆಟ್ ಕಿತ್ತು ಮಿಂಚಿದ ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್ನಲ್ಲಿ ಎಡವಿದರು. ಕೇವಲ 12ರನ್ಗೆ ಆಟ ಮುಗಿಸಿದರು. 40 ಓವರ್ ತನಕ ಬ್ಯಾಟಿಂಗ್ ನಡೆಸಿದ ರಚಿನ್ ರವೀಂದ್ರ 116 ರನ್ ಗಳಿಸಿದ ವೇಳೆ ಸಿಕ್ಸರ್ಗೆ ಬಾರಿಸಿದ ಚೆಂಡು ನೇರವಾಗಿ ಲಬುಶೇನ್ ಕೈ ಸೇರಿತು. ಅವರ ವಿಕೆಟ್ ಬೀಳುತ್ತಿದ್ದಂತೆ ಕಿವೀಸ್ ಗೆಲುವಿನ ಆಸೆ ಕ್ಷೀಣವಾಯಿತು. ಆದರೆ 7ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಇಳಿದ ಡೇಂಜರಸ್ ಜಿಮ್ಮಿ ನೀಶಮ್ ಅವರು ಶಕ್ತಿ ಮೀರಿ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಮತ್ತೆ ಗೆಲುವಿನ ಆಸೆಯನ್ನು ಚಿಗುರೊಡೆಯುವಂತೆ ಮಾಡಿದರು. 33 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅವರು ಅಂತಿಮವಾಗಿ ತಂಡದ ಗೆಲುವಿಗೆ 2 ಎಸೆತಗಳಲ್ಲಿ 7 ರನ್ ಬೇಕಿದ್ದಾಗ ರನೌಟ್ ಆದರು. ಇಲ್ಲಿಗೆ ಕಿವೀಸ್ ಸೋಲು ಕೂಡ ಖಚಿತವಾಯಿತು. ಚಿರತೆ ವೇಗದಲ್ಲಿ ಓಡಿ ಬೌಂಡರಿ ತಡೆದ ಮಾರ್ನಸ್ ಲಬುಶೇನ್ ಆಸೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ನೀಶಮ್ 39 ಎಸೆತದಲ್ಲಿ ತಲಾ ಮೂರು ಸಿಕ್ಸರ್ ಮತ್ತು ಬೌಂಡರಿ ಬಾರಿಸಿ 58 ರನ್ ಗಳಿಸಿದರು.
ಇದನ್ನೂ ಓದಿ IND vs ENG: ಆಂಗ್ಲರ ವಿರುದ್ಧದ ಪಂದ್ಯಕ್ಕೆ ಸಂಭಾವ್ಯ ತಂಡ; ಪಿಚ್ ರಿಪೋರ್ಟ್ ಹೀಗಿದೆ
ವಿಸ್ಫೋಟ ಬ್ಯಾಟಿಂಗ್ ಪ್ರದರ್ಶಿಸಿದ ವಾರ್ನರ್-ಹೆಡ್
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಆಸೀಸ್ ಪರ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಚೊಚ್ಚಲ ವಿಶ್ವಕಪ್ ಆಡಿದ ಟ್ರಾವಿಸ್ ಹಡ್ ಶತಕ ಬಾರಿಸಿ ಸಂಭ್ರಮಿಸಿದರು. ಈ ಜೋಡಿಯ ಅಬ್ಬರ ಬ್ಯಾಟಿಂಗ್ನಿಂದ ಪವರ್‌ಪ್ಲೇನಲ್ಲಿ 118 ರನ್‌ಗಳನ್ನು ಸೇರಿಸಿ ಆರಂಭಿಕ 10 ಓವರ್‌ಗಳಲ್ಲಿ ಗರಿಷ್ಠ ವಿಶ್ವಕಪ್ ಸ್ಕೋರ್ ದಾಖಲಿಸಿದ ದಾಖಲೆ ಬರೆದರು. ಈ ಜೋಡಿ ಮೊದಲ ವಿಕೆಟ್ಗೆ 175 ರನ್ ಒಟ್ಟುಗೂಡಿಸಿದರು. 25 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದರು. ಇದೇ ವೇಳೆ ಈ ಬಾರಿಯ ವಿಶ್ವಕಪ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ದಾಖಲೆ ಬರೆದರು.
ಇದನ್ನೂ ಓದಿ IND vs ENG: ಭಾರತ-ಇಂಗ್ಲೆಂಡ್ ವಿಶ್ವಕಪ್ ದಾಖಲೆಯೇ ಬಲು ರೋಚಕ
ಒಟ್ಟು 67 ಎಸೆತ ಎದುರಿಸಿದ ಹೆಡ್ 7 ಸಿಕ್ಸರ್ ಮತ್ತು 10 ಬೌಂಡರಿ ನೆರವಿನಿಂದ 109 ರನ್ ಬಾರಿಸಿದರು. ಆಸ್ಟ್ರೇಲಿಯಾ ಪರ ಚೊಚ್ಚಲ ವಿಶ್ವಕಪ್‌ನಲ್ಲಿ ಶತಕ ಬಾರಿಸಿದ 5ನೇ ಆಟಗಾರ ಎನಿಸಿಕೊಂಡರು. ಇದು ಮಾತ್ರವಲ್ಲದೆ ವಿಶ್ವಕಪ್ ಪದಾರ್ಪಣೆ ಪಂದ್ಯದಲ್ಲಿ ಅತಿ ವೇಗವಾಗಿ ಶತಕ ಬಾರಿಸಿದ ಮೊದಲ ಆಟಗಾರ ಎನಿಸಿಕೊಂಡರು. ಸತತ ಎರಡು ಶತಕ ಬಾರಿಸಿದ್ದ ಡೇವಿಡ್ ವಾರ್ನರ್ ಅವರು 81 ರನ್ ಗಳಿಸಿ 19 ರನ್ ಕೊರತೆಯಿಂದ ಶತಕ ವಂಚಿತರಾದರು. ಅವರು ಶತಕ ಬಾರಿಸತುತ್ತಿದ್ದರೆ ಸಚಿನ್ ತೆಂಡೂಲ್ಕರ್ ಅವರ ವಿಶ್ವಕಪ್ನ 6 ಶತಕದ ದಾಖಲೆಯನ್ನು ಮುರಿದು ಅಗ್ರಸ್ಥಾನಿ ರೋಹಿತ್ ಅವರ 7 ಶತಕದ ದಾಖಲೆಯನ್ನು ಸರಿಗಟ್ಟುತ್ತಿದ್ದರು.