ಧರ್ಮಶಾಲಾ: ಶನಿವಾರದ ಡಬಲ್ ಹೆಡರ್ನ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್(AUS vs NZ) ನಡುವಣ ಮೊದಲ ಪಂದ್ಯ ಹಲವು ದಾಖಲೆಗೆ ಸಾಕ್ಷಿಯಾಗಿದೆ. ಅತ್ಯಂತ ಜಿದ್ದಾಜಿದ್ದಿನಿಂದ ಸಾಗಿದ, ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಂತು ನೋಡುವಂತೆ ಮಾಡಿದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಕೊನೆಯ ಓವರ್ನಲ್ಲಿ ರೋಚಕ ಗೆಲುವು ಸಾಧಿಸಿತು.
ವಿಶ್ವಕಪ್ನಲ್ಲಿ ಅತ್ಯಧಿಕ ಸಿಕ್ಸರ್ ದಾಖಲೆ
ಈ ಪಂದ್ಯದಲ್ಲಿ ಉಭಯ ತಂಡಗಳು ಸೇರಿ ಒಟ್ಟು 32 ಸಿಕ್ಸರ್ ಬಾರಿಸಿತು. ಇದು ವಿಶ್ವಕಪ್ ಕ್ರಿಕೆಟ್ನಲ್ಲಿ ದಾಖಲಾದ ಅತ್ಯಧಿಕ 2ನೇ ಸಿಕ್ಸರ್ ದಾಖಲೆಯಾಗಿದೆ. ದಾಖಲೆ ಇಂಗ್ಲೆಂಡ್ ಮತ್ತು ಅಫಘಾನಿಸ್ತಾನ ನಡುವಣ ಪಂದ್ಯದಲ್ಲಿದೆ. 2019ರಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಒಟ್ಟು 33 ಸಿಕ್ಸರ್ ದಾಖಲಾಗಿತ್ತು.
ವಿಶ್ವಕಪ್ ಪಂದ್ಯವೊಂದರಲ್ಲಿ ಅತ್ಯಧಿಕ ಬೌಂಡರಿ ಎಣಿಕೆ
ಈ ಪಂದ್ಯ ಒಟ್ಟು 97 ಬೌಂಡರಿ ದಾಖಲಾಗಿದೆ. ಅಂದರೆ ಸಿಕ್ಸರ್ ಮತ್ತು ಫೋರ್ ಎರಡು ಸೇರಿ 97. ಇದರಲ್ಲಿ 65 ಫೋರ್ ಮತ್ತು 32 ಸಿಕ್ಸರ್ ಒಳಗೊಂಡಿದೆ. ಇದೇ ಆವೃತ್ತಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಣ ಪಂದ್ಯದಲ್ಲಿ ಒಟ್ಟು 105 ಬೌಂಡರಿ ದಾಖಲಾಗಿತ್ತು. ಇದು ಸದ್ಯ ವಿಶ್ವಕಪ್ನ ದಾಖಲೆಯಾಗಿ ಮುಂದುವರಿದಿದೆ.
ಇತ್ತಂಡಗಳ ಈ ಪಂದ್ಯದಲ್ಲಿ ಒಟ್ಟು 9ಮಂದಿ ಬ್ಯಾಟರ್ಗಳು ಡಬಲ್ ಡಿಜಿಟ್ ಮೊತ್ತವನ್ನು ಪೇರಿಸಿದ ದಾಖಲೆ ಬರೆದರು. ಇದು ವಿಶ್ವಕಪ್ನಲ್ಲಿ ದಾಖಲಾದ 5ನೇ ನಿದರ್ಶನ. ಈ ಹಿಂದೆ ನಾಲ್ಕು ಬಾರಿ ಪಂದ್ಯದವೊಂದರಲ್ಲಿ 9 ಮಂದಿ ಆಟಗಾರರು ಎರಡಂಕಿ ಮೊತ್ತ ಪೇರಿಸಿದ್ದರು.
ಇದನ್ನೂ ಓದಿ AUS vs NZ: ಅಂತಿಮ ಓವರ್ನಲ್ಲಿ ರೋಚಕ ಗೆಲುವು ಸಾಧಿಸಿದ ಆಸ್ಟ್ರೇಲಿಯಾ
ಅತ್ಯಧಿಕ ದ್ವಿತೀಯ ಇನಿಂಗ್ಸ್ ಮೊತ್ತ
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಚೇಸಿಂಗ್ ವೇಳೆ ದಾಖಲಾದ ಅತ್ಯಧಿಕ ಮೊತ್ತ ದಾಖಲಾದ 4ನೇ ಪಂದ್ಯ ಇದಾಗಿದೆ. 2006ರಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 9 ವಿಕೆಟ್ಗೆ 438ರನ್ ಬಾರಿಸಿ ಗೆಲುವು ಸಾಧಿಸಿದ್ದು ದಾಖಲೆಯಾಗಿದೆ. ಬೃಹತ್ ಮೊತ್ತವನ್ನು ಬೆನ್ನಟ್ಟಿ ಗೆದ್ದ ದಾಖಲೆ ತೀರ ಕಡಿಮೆ. ನ್ಯೂಜಿಲ್ಯಾಂಡ್ ಪಂದ್ಯ ಸೋತರು ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ದ್ವಿತೀಯ ಇನಿಂಗ್ಸ್ನಲ್ಲಿ ಬೃಹತ್ ಮೊತ್ತ ಪೇರಿಸಿದ ದಾಖಲೆ ಬರೆಯಿತು. ಈ ಮೂಲಕ ಇದೇ ಆವೃತ್ತಿಯಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ 9 ವಿಕೆಟ್ಗೆ 344 ಬಾರಿಸಿದ್ದ ದಾಖಲೆ ಪತನಗೊಂಡಿತು.
ಅತ್ಯಧಿಕ ರನ್ ಗಳಿಕೆ
ಈ ಪಂದ್ಯದಲ್ಲಿ ಇತ್ತಂಡಗಳು ಸೇರಿ 771 ರನ್ ಬಾರಿಸಿತು. ಇದು ಏಕದಿನ ಕ್ರಿಕೆಟ್ನಲ್ಲಿ ಎರಡು ತಂಡಗಳು ಸೇರಿ ಅತ್ಯಧಿಕ ರನ್ ಗಳಿಸಿದ ನಾಲ್ಕನೇ ನಿದರ್ಶನವಾಗಿದೆ. ಅಲ್ಲದೆ ಈ ದಾಖಲೆಯ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ದಾಖಲೆ ಇರುವುದು 2006ರಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯದಲ್ಲಿ. ಈ ಪಂದ್ಯದಲ್ಲಿ ಒಟ್ಟು 872ರನ್ ಒಟ್ಟುಗೂಡಿತ್ತು. ಆದರೆ ವಿಶ್ವಕಪ್ ಕ್ರಿಕೆಟ್ನಲ್ಲಿ ಆಸೀಸ್ ಮತ್ತು ಕಿವೀಸ್ ನಡುವಣ ಪಂದ್ಯದ ಮೊತ್ತ ದಾಖಲೆಯ ಮೊತ್ತವಾಗಿದೆ.
ಇದನ್ನೂ ಓದಿ IND vs ENG: 20 ವರ್ಷಗಳ ಬಳಿಕ ಗೆಲುವು ಕಂಡೀತೇ ಭಾರತ; ಗೆದ್ದರೆ ಅಧಿಕೃತ ಸೆಮಿ ಪ್ರವೇಶ
ಪಂದ್ಯ ಗೆದ್ದ ಆಸ್ಟ್ರೇಲಿಯಾ
ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಆಸ್ಟ್ರೇಲಿಯಾ 49.2 ಓವರ್ಗಳಲ್ಲಿ 388ರನ್ಗೆ ಆಲೌಟ್ ಆಯಿತು. ಬೃಹತ್ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಹೋದ ನ್ಯೂಜಿಲ್ಯಾಂಡ್ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ಗೆ 383 ರನ್ ಗಳಿಸಿ 5 ರನ್ ಅಂತರದಲ್ಲಿ ಸೋಲು ಕಂಡಿತು. ಒಂದೊಮ್ಮೆ ಈ ಮೊತ್ತವನ್ನು ಕಿವೀಸ್ ಬೆನ್ನಟ್ಟುತ್ತಿದ್ದರೆ ಇದು ವಿಶ್ವಕಪ್ನಲ್ಲಿ ದಾಖಲೆಯ ಮೊತ್ತದ ರನ್ ಚೇಸ್ ಗೆಲುವಾಗುತ್ತಿತ್ತು.