ಅಡಿಲೇಡ್: ಪ್ರವಾಸಿ ವೆಸ್ಟ್ ಇಂಡೀಸ್(AUS VS WI) ವಿರುದ್ಧ ಅಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ 419 ರನ್‌ಗಳಿಂದ ಗೆಲುವು ದಾಖಲಿಸಿದ ಆಸ್ಟ್ರೇಲಿಯಾ ಸರಣಿ ವಶಪಡಿಸಿಕೊಂಡಿದೆ. ವಿಂಡೀಸ್ ಈ ಸೋಲಿನೊಂದಿಗೆ ವೈಟ್ವಾಶ್ ಮುಖಭಂಗಕ್ಕೆ ಒಳಗಾಯಿತು.
ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿಯೂ ವೆಸ್ಟ್ ಇಂಡೀಸ್ 164 ರನ್ಗ ಸೋಲಿಗೆ ಸಿಲುಕಿತ್ತು. ಇದೀಗ ಅಡಿಲೇಡ್ ಪಿಂಕ್ ಟೆಸ್ಟ್ನಲ್ಲಿಯೂ ಮುಗ್ಗರಿಸಿ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೋತು ನಿರಾಸೆ ಅನುಭವಿಸಿದೆ.
ಅಡಿಲೇಡ್‌ನಲ್ಲಿ ನಡೆದ ಅಹರ್ನಿಶಿ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ಗೆಲುವಿಗೆ 497 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಆದರೆ ಬೃಹತ್ ಮೊತ್ತ ಕಂಡು ಕಂಗೆಟ್ಟ ವೆಸ್ಟ್ ಇಂಡೀಸ್ ತಂಡ ನಾಟಕೀಯ ಕುಸಿತ ಕಂಡು 77 ರನ್ಗೆ ಆಟ ಮುಗಿಸಿತು. ಇದರಿಂದ ಇನ್ನು ಒಂದು ದಿನ ಬಾಕಿ ಇರುವಂತೆ ಪಂದ್ಯ ಮುಕ್ತಾಯಗೊಂಡಿತು.
ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಭಾನುವಾರ ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 38 ರನ್‌ಗಳಿಂದ ಆಟ ಮುಂದುವರೆಸಿದ ವೆಸ್ಟ್ ಇಂಡೀಸ್ ಕೇವಲ 39 ರನ್ ಸೇರಿಸುವಷ್ಟರಲ್ಲಿ ಉಳಿದ 6 ವಿಕೆಟ್ ಕಳೆದುಕೊಂಡು 419 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಇದಕ್ಕೂ ಮೊದಲು, ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 511 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 214 ರನ್ಗಳಿಗೆ ಆಲೌಟ್ ಆಯಿತು.
ಮೊದಲ ಇನಿಂಗ್ಸ್ನಲ್ಲಿ 297 ರನ್ ಮುನ್ನಡೆ ಸಾಧಿಸಿದರೂ ಫಾಲೋ ಆನ್ ನೀಡದ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್ನಲ್ಲಿ 6 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ ಡಿಕ್ಲೇರ್ ಮಾಡಿತು. ಒಟ್ಟು 497 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಮೂರನೇ ದಿನದಾಟದಲ್ಲಿಯೇ 4 ವಿಕೆಟ್ ಕಳೆದುಕೊಂಡು ಕೇವಲ 38 ರನ್ಗಳಿಸಿತು. ಬಳಿಕ 4ನೇ ದಿನದಾಟವನ್ನು ಆರಂಭಿಸಿದ ವಿಂಡೀಸ್ ಪಡೆ ಇನ್ನುಳಿದ 6 ವಿಕೆಟ್‌ಗಳನ್ನು ಕಳೆದುಕೊಂಡು ಸೋಲು ಕಂಡಿತು.
ಇದನ್ನೂ ಓದಿ | IND VS BAN | ಬಾಂಗ್ಲಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡಕ್ಕೆ ಕೆ.ಎಲ್. ರಾಹುಲ್ ನಾಯಕ?