ಮೊಹಾಲಿ : ಬ್ಯಾಟಿಂಗ್‌ನಲ್ಲಿ ಅಬ್ಬರದ ಪ್ರದರ್ಶನ ನೀಡಿದ ಹೊರತಾಗಿಯೂ ಎದುರಾಳಿ ತಂಡವನ್ನು ಬೌಲಿಂಗ್‌ನಲ್ಲಿ ನಿಯಂತ್ರಿಸಲು ವಿಫಲಗೊಂಡ ಭಾರತ ತಂಡ, ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 3 ಟಿ೨೦ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ 4ವಿಕೆಟ್‌ಗಳ ಸೋಲು ಕಂಡಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ ೨೦ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೨೦೮ ರನ್ ಬಾರಿಸಿದರೆ, ಬೃಹತ್ ಗುರಿ ಬೆನ್ನಟ್ಟಿದ ಪ್ರವಾಸಿ ಆಸೀಸ್ ಬಳಗ ಇನ್ನೂ ೪ ಎಸೆತಗಳು ಬಾಕಿ ಇರುವಂತೆಯೇ ೬ ವಿಕೆಟ್ ನಷ್ಟಕ್ಕೆ ೨೧೧ ರನ್ ಬಾರಿಸಿ ಜಯ ಸಾಧಿಸಿತು.
ಮೊಹಾಲಿಯಲ್ಲಿ ನಡೆದ ಹಣಾಹಣಿಯ ಗೆಲುವಿನೊಂದಿಗೆ ಪ್ರವಾಸಿ ಆಸ್ಟ್ರೇಲಿಯಾ ತಂಡ ಸರಣಿಯಲ್ಲಿ ೧-೦ ಮುನ್ನಡೆ ಪಡೆದುಕೊಂಡಿತು. ದೊಡ್ಡ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಆಸ್ಟ್ತೇಲಿಯಾ ಪರ ಕ್ಯಾಮೆರಾನ್ ಗ್ರೀನ್ ೩೦ ಎಸೆತಗಳಿಗೆ ೬೧ ರನ್ ಬಾರಿಸಿದರೆ, ಸ್ವೀವ್ ಸ್ಮಿತ್ ೩೫ ರನ್ ಗಳಿಸಿದರು. ವಿಕೆಟ್‌ಕೀಪರ್ ಬ್ಯಾಟರ್ ಮ್ಯಾಥ್ಯೂ ವೇಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ೨೧ ಎಸೆತಗಳಿಗೆ ಅಜೇಯ ೪೫ ರನ್ ಬಾರಿಸಿ ಭಾರತದ ವಿಜಯ ಕಸಿದುಕೊಂಡರು.
ಭಾರತ ತಂಡದ ಪರ ಬೌಲಿಂಗ್‌ನಲ್ಲಿ ಅಕ್ಷರ್ ಪಟೇಲ್ ತಮ್ಮ ೪ ಓವರ್‌ಗಳ ಸ್ಪೆಲ್‌ನಲ್ಲಿ ೩ ವಿಕೆಟ್ ನಷ್ಟಕ್ಕೆ ೧೭ ರನ್ ನೀಡಿ ಪ್ರಮುಖ ೩ ವಿಕೆಟ್ ಕಿತ್ತು ಎದುರಾಳಿ ತಂಡವನ್ನು ನಿಯಂತ್ರಿಸಿ ಗೆಲುವಿನ ಆಸೆ ಚಿಗುರಿಸಿದರು. ಆದರೆ ಉಳಿದ ಬೌಲರ್‌ಗಳಿಂದ ಸೂಕ್ತ ನೆರವು ಲಭಿಸಿದ ಕಾರಣ ರೋಹಿತ್ ಪಡೆಗೆ ನಿರಾಸೆ ಎದುರಾಯಿತು. ಉಮೇಶ್ ಯಾದವ್ ೨೭ ರನ್‌ಗಳಿಗೆ ೨ ವಿಕೆಟ್ ಪಡೆದರು.
ರಾಹುಲ್, ಹಾರ್ದಿಕ್ ಅಬ್ಬರ
ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಅವಕಾಶ ಪಡದ ಭಾರತ ಪರ ಆರಂಭಿಕ ಬ್ಯಾಟರ್ ಕೆ. ಎಲ್ ರಾಹುಲ್ (೫೫). ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (೭೧*) ಅಬ್ಬರದ ಬ್ಯಾಟಿಂಗ್ ನಡೆಸಿದರು. ಸೂರ್ಯಕುಮಾರ್ ಯಾದವ್ ೪೬ ರನ್ ಕೊಡುಗೆ ಕೊಟ್ಟರು.
ಇನಿಂಗ್ಸ್ ಆರಂಭಿಸಿದ ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. ೨೧ ರನ್ ಆಗುವಷ್ಟರಲ್ಲಿ ರೋಹಿತ್ ಶರ್ಮ (೧೧) ಅವರ ವಿಕೆಟ್ ಕಳೆದುಕೊಂಡಿತಲ್ಲದೆ, ವಿರಾಟ್ ಕೊಹ್ಲಿಯೂ ೨ ರನ್‌ಗಳಿಗೆ ವಿಕೆಟ್ ಒಪ್ಪಿಸುವುದರೊಂದಿಗೆ ೩೫ ರನ್‌ಗಳಿಗೆ ಟೀಮ್ ಇಂಡಿಯಾದ ೨ ವಿಕೆಟ್ ಪತನಗೊಂಡಿತು. ಬಳಿಕ ಜತೆಯಾದ ಕೆ. ಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಅರಂಭಿಕ ಕುಸಿತದಿಂದ ತಂಡವನ್ನು ಮೇಲಕ್ಕೆತ್ತಿದರು. ಈ ಜೋಡಿ ಮೂರನೇ ವಿಕೆಟ್‌ಗೆ ೬೮ ರನ್‌ಗಳನ್ನು ಪೇರಿಸಿತು. ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಹುಲ್ ೩೫ ಎಸೆತಗಳಲ್ಲಿ ೫೫ ರನ್ ಬಾರಿಸಿ ಹೇಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು.
ಪಾಂಡ್ಯ ಅಬ್ಬರ
ವಿಕೆಟ್ ಪತನಗೊಂಡಿದ್ದ ಸಮಯದಲ್ಲಿ ಆಡಲು ಇಳಿದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ೩೦ ಎಸೆತಗಳಲ್ಲಿ ಅಜೇಯ ೭೧ ರನ್ ಬಾರಿಸಿದರು. ಆರಂಭದಿಂದಲೇ ಆಸ್ಟ್ರೇಲಿಯಾದ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಪಾಂಡ್ಯ ಇನಿಂಂಗ್ಸ್‌ನ ಕೊನೇ ಮೂರು ಎಸೆತಗಳಲ್ಲಿ ಸತತ ಮೂರು ಸಿಕ್ಸರ್ ಬಾರಿಸುವುದರೊಂದಿಗೆ ಸ್ಮರಣೀಯ ಬ್ಯಾಟಿಂಗ್ ಮಾಡಿದರು.
ಸ್ಕೋರ್ ವಿವರ:
ಭಾರತ : ೨೦ ಓವರ್‌ಗಳಲ್ಲಿ ೬ ವಿಕೆಟ್‌ಗೆ ೨೦೮ (ಕೆ.ಎಲ್ ರಾಹುಲ್ ೫೫, ಸೂರ್ಯಕುಮಾರ್ ಯಾದವ್ ೪೦, ಹಾರ್ದಿಕ್ ಪಾಂಡ್ಯ೭೧*; ಜೋಶ್ ಹೇಜಲ್‌ವುಡ್ ೩೯ಕ್ಕೆ೨, ನಥಾನ್ ಎಲ್ಲಿಸ್ ೩೦ಕ್ಕೆ೩).
ಆಸ್ಟ್ರೇಲಿಯಾ : ೧೯.೨ ಓವರ್‌ಗಳಲ್ಲಿ ೬ ವಿಕೆಟ್‌ಗೆ ೨೧೧ (ಕ್ಯಾಮೆರಾನ್ ಗ್ರೀನ್ ೬೧, ಸ್ಟೀವ್ ಸ್ಮಿತ್ ೩೫, ಮ್ಯಾಥ್ಯೂ ವೇಡ್ ೪೫; ಅಕ್ಷರ್ ಪಟೇಲ್ ೧೭ಕ್ಕೆ೩).