Site icon Vistara News

CWG- 2022 | ಮಹಿಳೆಯರ ಕ್ರಿಕೆಟ್‌ ತಂಡಕ್ಕೆ ಬೆಳ್ಳಿ ಪದಕ, ಆಸ್ಟ್ರೇಲಿಯಾ ವಿರುದ್ಧ ವೀರೋಚಿತ ಸೋಲು

CWG-2022

ಬರ್ಮಿಗ್ಹಮ್‌ : ಕಾಮನ್ವೆಲ್ತ್ ಗೇಮ್ಸ್‌ನ ಮಹಿಳೆಯರ ಟಿ೨೦ ಕ್ರಿಕೆಟ್‌ನಲ್ಲಿ ಭಾರತ ತಂಡ ಬೆಳ್ಳಿ ಪದಕ ಗೆದ್ದುಕೊಂಡಿದೆ. ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ೯ ರನ್‌ಗಳ ರೋಚಕ ಸೋಲಿಗೆ ಒಳಗಾದ ಹರ್ಮನ್‌ಪ್ರೀತ್ ಬಳಗ ರಜತ ಪದಕಕ್ಕೇ ತೃಪ್ತಿಪಡಬೇಕಾಯಿತು. ಗೆಲುವಿನ ಅವಕಾಶವಿದ್ದರೂ, ಕೊನೇ ಹಂತದಲ್ಲಿ ಸತತವಾಗಿ ವಿಕೆಟ್‌ ಕಳೆದುಕೊಂಡ ಭಾರತಕ್ಕೆ ಸೋಲು ಅನಿವಾರ್ಯವಾಯಿತು.

ಎಜ್‌ಬಾಸ್ಟನ್‌ ಕ್ರಿಕೆಟ್‌ ಸ್ಟೇಡಿಯಮ್‌ನಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ ೨೦ ಓವರ್‌ಗಳಲ್ಲಿ ೮ ವಿಕೆಟ್‌ ಕಳೆದಕೊಂಡು ೧೬೧ ರನ್‌ ಪೇರಿಸಿತು. ಗುರಿ ಬೆನ್ನಟ್ಟಿದ ಭಾರತ ೧೯.೩ ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ ಕಳೆದುಕೊಂಡು ೧೫೨ ರನ್‌ ಪೇರಿಸಿ ಸೋಲಿಗೆ ಒಳಗಾಯಿತು. ಭಾರತ ಪರ ಹರ್ಮನ್‌ಪ್ರೀತ್‌ ಕೌರ್‌ (೬೫) ಅರ್ಧ ಶತಕ ಬಾರಿಸಿದರೂ ಉಳಿದ ಬ್ಯಾಟರ್‌ಗಳಿಂದ ಉತ್ತಮ ಬೆಂಬಲ ದೊರೆಯದ ಕಾರಣ ಸೋಲಿಗೆ ಒಳಗಾಯಿತು. ಜೆಮಿಮಾ ರೋಡ್ರಿಗಸ್‌ ೩೩ ರನ್‌ಗಳ ಕೊಡುಗೆ ಕೊಟ್ಟರು.

ದೊಡ್ಡ ಗುರಿ ಬೆನ್ನಟ್ಟಲು ಆರಂಭಿಸಿದ ಭಾರತ ಪರ ಶಫಾಲಿ ವರ್ಮಾ (೧೧) ಹಾಗೂ ಸ್ಮೃತಿ ಮಂಧಾನಾ (೬) ಬೇಗನೆ ವಿಕೆಟ್‌ ಒಪ್ಪಿಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಹಾಗೂ ಜೆಮಿಮಾ ರೋಡ್ರಿಗಸ್‌ ಮೂರನೇ ವಿಕೆಟ್‌ಗೆ ೧೧೯ ರನ್‌ಗಳ ಜತೆಯಾಟ ನೀಡಿ ಭಾರತದ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದರು. ಆದರೆ, ಇವರಿಬ್ಬರ ವಿಕೆಟ್‌ ಪತನಗೊಂಡ ಬಳಿಕ ಉಳಿದ ಆಟಗಾರರು ನೆರವಿಗೆ ನಿಲ್ಲದ ಕಾರಣ ಸೋಲಿಗೆ ಒಳಗಾಯಿತು.

ಆಸ್ಟ್ರೇಲಿಯಾ ಅಬ್ಬರ

ಅದಕ್ಕಿಂತ ಮೊದಲು ಬ್ಯಾಟ್‌ ಮಾಡಿದ ಅಸ್ಟ್ರೇಲಿಯಾ ತಂಡದ ಪರ ಬೆತ್‌ ಮೂನಿ (೬೧) ಅರ್ಧ ಶತಕ ಬಾರಿಸಿದರೆ, ಮೆಗ್ ಲ್ಯಾನಿಂಗ್‌ (೩೬) ಹಾಗೂ ಆಶ್ಲೇ ಗಾರ್ಡ್‌ನರ್‌ (೨೫) ದೊಡ್ಡ ಮೊತ್ತ ಪೇರಿಸಲು ನೆರವಾದರು. ಇವರೆಲ್ಲರ ಸಂಘಟಿತ ಆಟದಿಂದಾಗಿ ಆಸ್ಟ್ರೇಲಿಯಾ ತಂಡ ದೊಡ್ಡ ಮೊತ್ತ ಪೇರಿಸಿತು.

ಸ್ಕೋರ್‌ ವಿವರ

ಆಸ್ಟ್ರೇಲಿಯಾ: ೨೦ ಓವರ್‌ಗಳಲ್ಲಿ ೮ ವಿಕೆಟ್‌ಗೆ ೧೬೧ ( ಬೆತ್‌ ಮೂನಿ ೬೧, ಮೆಗ್‌ ಲ್ಯಾನಿಂಗ್‌ ೩೬, ಆಶ್ಲೇ ಗಾರ್ಡ್‌ನರ್‌ ೨೫, ರೇಣುಕಾ ಸಿಂಗ್ ೨೫ಕ್ಕೆ ೨, ಸ್ನೇಹ್‌ ರಾಣಾ ೩೮ಕ್ಕೆ೨).

ಭಾರತ: ೧೯.೩ ಓವರ್‌ಗಳಲ್ಲಿ ೧೫೨ (ಹರ್ಮನ್‌ಪ್ರೀತ್‌ ಕೌರ್‌ ೬೫, ಜೆಮಿಮಾ ರೋಡ್ರಿಗಸ್‌ ೩೩; ಆಶ್ಲೇ ಗಾರ್ಡ್‌ನರ್‌ ೧೬ಕ್ಕೆ೩, ಮೇಘನ್‌ ಶೂಟ್‌ ೨೭ಕ್ಕೆ೨).

ಇದನ್ನೂ ಓದಿ | CWG- 2022 | ಕಂಚು ಗೆದ್ದ ಸಂಭ್ರಮದಲ್ಲಿ ಡಾನ್ಸ್‌ ಮಾಡಿದ ವನಿತೆಯರ ಹಾಕಿ ತಂಡದ ಸದಸ್ಯರು

Exit mobile version