Site icon Vistara News

ಕ್ರಿಕೆಟ್​ಗೆ ದಿಢೀರ್ ವಿದಾಯ ಹೇಳಿದ 5 ವಿಶ್ವಕಪ್​ ವಿಜೇತ ನಾಯಕಿ ಮೆಗ್‌ ಲ್ಯಾನಿಂಗ್‌

meg lanning

ಸಿಡ್ನಿ: 5 ವಿಶ್ವಕಪ್‌ ವಿಜೇತ ಆಸ್ಟ್ರೇಲಿಯಾ ತಂಡದ ನಾಯಕಿ ಹಾಗೂ ಸ್ಟಾರ್‌ ಆಟಗಾರ್ತಿಯಾಗಿದ್ದ ಮೆಗ್‌ ಲ್ಯಾನಿಂಗ್‌(Meg Lanning) ಅವರು ದಿಢೀರ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಮೆಗ್ ಲ್ಯಾನಿಂಗ್ ಅವರು ತಮ್ಮ ನಿವೃತ್ತಿ ನಿರ್ಧಾರವನ್ನು ಸುದ್ದಿಗೋಷ್ಠಿ ನಡೆಸಿ ಪ್ರಕಟಿಸಿದ್ದಾರೆ. ಈ ವಿಚಾರ ಹೇಳಲು ತುಂಬಾ ಕಷ್ಟವಾಗುತ್ತಿದೆ. ಆದರೆ, ಇದು ಸರಿಯಾದ ನಿರ್ಧಾರ ಎಂದು ನಾನು ಭಾವಿಸುತ್ತೇನೆ ಎಂದು ಹೇಳುವ ಮೂಲಕ 13 ವರ್ಷಗಳ ಕ್ರಿಕೆಟ್​ ವೃತ್ತಿ ಬದುಕಿಗೆ ತೆರೆ ಎಳೆದರು.

“ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಹಿಂದೆ ಸರಿಯುವ ನಿರ್ಧಾರವನ್ನು ಮಾಡುವುದು ಕಷ್ಟಕರವಾಗಿತ್ತು, ಆದರೆ ಇದು ನನಗೆ ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. 13 ವರ್ಷಗಳ ನನ್ನ ಕ್ರಿಕೆಟ್​ ಬಾಳ್ವೆಯನ್ನು ಅತ್ಯಂತ ಸುಂದರವಾಗಿ ಕಳೆದಿದ್ದೇನೆ. ಈ ಅವಧಿಯಲ್ಲಿ ಅದೆಷ್ಟೋ ತಂಡದ ವಿರುದ್ಧ ಆಡಿದ ಅನುಭವ ಹಾಗೂ ನನಗೆ ಸಿಕ್ಕ ಆಟಗಾರ್ತಿಯರು, ಸಿಬ್ಬಂದಿಗಳು ಎಲ್ಲರಿಗೂ ನಾನು ಧನ್ಯವಾದ ತಿಳಿಸುವೆ. ಮುಂದೆ ಏನಾದರು ಹೊಸದನ್ನು ಮಾಡಬೇಕು ಎಂದು ಹೊರಟಿರುವೆ. ಹೀಗಾಗಿ ಕ್ರಿಕೆಟ್​ನಿಂದ ದೂರ ಸರಿಯುವ ನಿರ್ಧಾರ ಕೈಗೊಂಡಿದ್ದೇನೆ. ನಿಮ್ಮೆಲ್ಲರ ಹಾರೈಕೆ ಸದಾ ಹೀಗೆ ಇರಲಿದೆ ಎಂಬ ನಂಬಿಕೆ ನನಗಿದೆ. ಆಸ್ಟ್ರೇಲಿಯಾ ತಂಡ ಇನ್ನಷ್ಟು ಯಶಸ್ಸು ಸಾಧಿಸಲಿ” ಎಂದು ಹೇಳಿ ಲ್ಯಾನಿಂಗ್​ ಕ್ಯಾಮೆರ ಮುಂದೆ ಗದ್ಗದಿತರಾದರು.

ರೋಲ್‌ ಮಾಡೆಲ್‌

ಕ್ರಿಕೆಟ್‌ ಆಸ್ಟ್ರೇಲಿಯಾ ಕೂಡ ಮೆಗ್‌ ಲ್ಯಾನಿಂಗ್‌ ಅವರ ಈ ನಿರ್ಧಾರವನ್ನು ಸಮ್ಮತಿಸಿದೆ. ಆಸ್ಟ್ರೇಲಿಯಾದ ಕ್ರಿಕೆಟಿಗೆ ಮೆಗ್‌ ಲ್ಯಾನಿಂಗ್‌ ನೀಡಿದ ಕೊಡುಗೆ ಅಸಾಮಾನ್ಯ. ಯುವ ಆಟಗಾರ್ತಿಯರ ಪಾಲಿಗೆ ಅವರೊಂದು ರೋಲ್‌ ಮಾಡೆಲ್‌ ಆಗಿದ್ದಾರೆ ಎಂದು ಆಸ್ಟ್ರೇಲಿಯನ್‌ ಕ್ರಿಕೆಟ್‌ ಮಂಡಳಿಯ ಅಧಿಕಾರಿ ಶಾನ್‌ ಫ್ಲೆಗ್ಲರ್‌ ಹೇಳಿದರು.

ಇದನ್ನೂ ಓದಿ ʼಇದು ಸಾಮಾನ್ಯ ಫುಟ್‌ವರ್ಕ್‌ ಅಲ್ಲ, ಗ್ರೇಟ್‌ ಫುಟ್‌ವರ್ಕ್‌ʼ; ಮ್ಯಾಕ್ಸಿ ಆಟಕ್ಕೆ ಮನಸೋತ ಸಚಿನ್‌

31 ವರ್ಷದ ಮೆಗ್​ ಲ್ಯಾನಿಂಗ್​ ಅವರು ಕಳೆದ ವರ್ಷ ಹಲವು ತಿಂಗಳುಗಳ ಕಾಲ ಕ್ರಿಕೆಟ್ನಿಂದ ಬ್ರೇಕ್‌ ಪಡೆದಿದ್ದರು. ಬಿಡುವಿಲ್ಲದಷ್ಟು ಕ್ರಿಕೆಟ್‌ ಪಂದ್ಯಗಳನ್ನು ಆಡುತ್ತ ಬಂದಿರುವ ಕಾರಣ ಮಾನಸಿಕವಾಗಿ ನಾನು ಕುಸಿದಿದ್ದೇನೆ ಎಂದು ಇದಕ್ಕೆ ಕಾರಣವನ್ನು ತಿಳಿಸಿದ್ದರು. ಲ್ಯಾನಿಂಗ್​ ಆರು ಟೆಸ್ಟ್​ ಪಂದ್ಯಗಳು, 103 ಏಕ ದಿನ ಪಂದ್ಯಗಳು ಹಾಗೂ 132 ಟಿ20 ಪಂದ್ಯಗಳಲ್ಲಿ ಪಾಲ್ಗೊಂಡಿದ್ದಾರೆ. 17 ಶತಕಗಳು ಸೇರಿದಂತೆ ಒಟ್ಟಾರೆ 8000 ರನ್​ ಬಾರಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಲ್ಯಾನಿಂಗ್ ಕೊನೆಯ ಬಾರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ್ದರು.

2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ ಲ್ಯಾನಿಂಗ್​ಗೆ 2014ರಲ್ಲಿ ನಾಯಕತ್ವ ಒಲಿದು ಬಂದು. 171 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಆಸ್ಟ್ರೇಲಿಯಾವನ್ನು ಮುನ್ನಡೆಸಿದ ಹೆಗ್ಗಳಿಕೆ ಹೊಂದಿದ್ದಾರೆ. ಟಿ20 ವಿಶ್ವಕಪ್‌, ಏಕದಿನ ವಿಶ್ವಕಪ್‌ ಜತೆಗೆ ಆ್ಯಶಸ್‌ ಗೆದ್ದಿರುವುದು ಲ್ಯಾನಿಂಗ್‌ ನಾಯಕತ್ವದ ಮಹಾ ಸಾಧನೆಯಾಗಿದೆ. ಅಲ್ಲದೆ ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್​ನಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸಿ ಫೈನಲ್​ ತಲುಪಿಸಿದ ಹಿರಿಮೆಯೂ ಇವರದ್ದಾಗಿದೆ.

Exit mobile version