Site icon Vistara News

INDvsAUS : ಭಾರತದ ಮಾರಕ ಬೌಲಿಂಗ್​ಗೆ ಕುಸಿದ ಆಸ್ಟ್ರೇಲಿಯಾ, 188 ರನ್​ಗಳಿಗೆ ಆಲ್​ಔಟ್​

Australia fell to India's fatal bowling, all out for 188 runs

#image_title

ಮುಂಬಯಿ: ಭಾರತ ತಂಡದ ಬೌಲರ್​ಗಳಾದ ಮೊಹಮ್ಮದ್​ ಶಮಿ (17 ರನ್​ಗಳಿಗೆ 3 ವಿಕೆಟ್​), ಮೊಹಮ್ಮದ್​ ಸಿರಾಜ್​ (29 ರನ್​ಗಳಿಗೆ 3 ವಿಕೆಟ್​) ಹಾಗೂ ರವೀಂದ್ರ ಜಡೇಜಾ (46 ರನ್​ಗಳಿಗೆ2 ವಿಕೆಟ್) ಅವರ ಮಾರಕ ದಾಳಿಗೆ ಬೆಚ್ಚಿ ಬಿದ್ದ ಪ್ರವಾಸಿ ಆಸ್ಟ್ರೇಲಿಯಾ ತಂಡ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ 188 ರನ್​ಗಳಿಗೆ ಆಲ್​ಔಟ್​ ಆಗಿದೆ. ಇದರೊಂದಿಗೆ ಆತಿಥೇಯ ಭಾರತದ ಗೆಲುವಿಗೆ 189 ರನ್​ಗಳ ಸವಾಲು ಎದುರಾಗಿದೆ. ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್​ ಮಿಚೆಲ್ ಮಾರ್ಷ್​ (81) ಅರ್ಧ ಶತಕ ಬಾರಿಸಿ ಏಕಾಂಗಿ ಹೋರಾಟ ನಡೆಸಿದರೂ ಉಳಿದವರ ನೆರವು ಆಸ್ಟ್ರೇಲಿಯಾ ತಂಡಕ್ಕೆ ಲಭಿಸಲಿಲ್ಲ.

ಬಿಸಿಸಿಐ ಮಾಡಿದ ಟ್ವೀಟ್​ ಇಲ್ಲಿದೆ

ಮುಂಬಯಿಯ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ಹಾರ್ದಿಕ್​ ಪಾಂಡ್ಯ ಟಾಸ್​ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್​ ಮಾಡುವ ಅವಕಾಶ ಪಡೆದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದಿರುವ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ಆತಿಥೇಯರ ಬೌಲಿಂಗ್ ದಾಳಿಯ ಒತ್ತಡಕ್ಕೆ ಸತತವಾಗಿ ವಿಕೆಟ್​ ಕಳೆದುಕೊಂಡು 35.4 ಓವರ್​ಗಳಲ್ಲಿ 188 ರನ್​ಗಳಿಗೆ ಆಲ್​ಔಟ್ ಆಯಿತು.

ವೇಗಕ್ಕೆ ಬೆಚ್ಚಿದ ಆಸೀಸ್​

ಇನಿಂಗ್ಸ್​ ಆರಂಭಿಸಿದ ಆಸ್ಟ್ರೇಲಿಯಾ ತಂಡ ಆರಂಭಿಕ ಬ್ಯಾಟರ್​ ಟ್ರಾವಿಸ್ ಹೆಡ್​ (5) ಅವರ ವಿಕೆಟ್ ಪತನದೊಂದಿಗೆ ಆರಂಭಿಕ ಹಿನ್ನಡೆಗೆ ಒಳಗಾಯಿತು. ಆದರೆ, ಮತ್ತೊಂದು ತುದಿಯಲ್ಲಿ ಆಡಿದ ಮಿಚೆಲ್​ ಮಾರ್ಷ್​ ಭಾರತದ ಬೌಲಿಂಗ್​ಗೆ ಸೆಡ್ಡು ಹೊಡೆದರು. 66 ಎಸೆತಗಳನ್ನು ಎದುರಿಸಿದ ಅವರು 10 ಫೋರ್, 5 ಸಿಕ್ಸರ್​ಗಳ ಸಮೇತ 81 ರನ್​ ಬಾರಿಸಿದರು. ಅವರಿಗೆ ನಾಯಕ ಸ್ವೀವ್​ ಸ್ಮಿತ್​ ಉತ್ತಮ ಜತೆಯಾಟ ಕೊಟ್ಟರೂ 22 ರನ್​ಗಳಿಗೆ ಅವರು ಔಟಾದರು. ಈ ಜೋಡಿ 2ನೇ ವಿಕೆಟ್​ಗೆ 72 ರನ್​ ಬಾರಿಸಿತು. ಈ ವೇಳೆ ಆಸ್ಟ್ರೇಲಿಯಾ ತಂಡ ದೊಡ್ಡ ಮೊತ್ತ ಪೇರಿಸುವ ಸೂಚನೆ ಕೊಟ್ಟಿತು. ಆದರೆ, ತಂಡದ ಮೊತ್ತ 129 ಅಗುವಷ್ಟರಲ್ಲಿ ಮಿಚೆಲ್​ ಮಾರ್ಷ್​ ಜಡೇಜಾಗೆ ವಿಕೆಟ್​ ಒಪ್ಪಿಸಿದರು.

ಇದನ್ನೂ ಓದಿ : IND VS AUS: ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ ವೀಕ್ಷಿಸಿದ ತಲೈವಾ

ಮಾರ್ಷ್​ ಔಟಾದ ಸ್ವಲ್ಪ ಹೊತ್ತಿನಲ್ಲೇ ಮರ್ನಸ್​ ಲಾಬುಶೇನ್​ (15) ವಿಕೆಟ್​ ಒಪ್ಪಿಸಿದರು. ಅಲ್ಲಿಂದ ಆಸ್ಟ್ರೇಲಿಯಾ ತಂಡದ ವಿಕೆಟ್​ಗಳು ಸತತವಾಗಿ ಉರುಳಿದವು. ಜೋಶ್​ ಇಗ್ನಿಸ್​ (26) ಸ್ವಲ್ಪ ಹೊತ್ತು ಆಡಿದರೆ, ಕ್ಯಾಮೆರಾನ್​ ಗ್ರೀನ್​ 12 ರನ್​ಗಳಿಗೆ ಔಟಾದರು. ಇವರಿಬ್ಬರನ್ನೂ ಶಮಿ ಬೌಲ್ಡ್​ ಮಾಡಿದರು.

ಗ್ಲೆನ್​ ಮ್ಯಾಕ್ಸ್​ವೆಲ್​ 8 ರನ್​ ವಿಕೆಟ್​ ಒಪ್ಪಿಸಿದರೆ, ಮಾರ್ಕ್​ ಸ್ಟೋಯ್ನಿಸ್​ 5 ರನ್​ಗೆ ಔಟಾದರು. ಸೀನ್​ ಅಬಾಟ್​ ಶೂನ್ಯ ಸುತ್ತಿದರು. ಮಿಚೆಲ್​ ಸ್ಟಾರ್ಕ್​ 4 ರನ್​ ಬಾರಿಸಿ ಅಜೇಯರಾಗಿ ಉಳಿದರೆ ಆಡಂ ಜಂಪಾ ಸೊನ್ನೆ ಸುತ್ತಿದರು.

Exit mobile version