ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ದಿಗ್ಗಜ ಬೌಲರ್ ಗ್ಲೆನ್ ಮೆಕ್ಗ್ರಾತ್(Glenn McGrath) ಅವರು ಹಾವು ಹಿಡಿದು ಸುದ್ದಿಯಾಗಿದ್ದಾರೆ. ತಮ್ಮ ಮನೆಯಲ್ಲಿದ್ದ ಬೃಹತ್ ಗಾತ್ರದ ಮೂರು ಹೆಬ್ಬಾವುಗಳನ್ನು(Python) ಹಿಡಿದು ಮನೆಯಿಂದ ಹೊರಹಾಕಿದ್ದಾರೆ. ಅವರು ಹೆಬ್ಬಾವು ಹಿಡಿದ ವಿಡಿಯೊವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ವೈರಲ್(viral video) ಆಗಿದೆ.
ಮೂರು ವಿಶ್ವಕಪ್ ವಿಜೇತ ಆಟಗಾರ
1999 ಕ್ರಿಕೆಟ್ ವಿಶ್ವಕಪ್, 2003 ಕ್ರಿಕೆಟ್ ವಿಶ್ವಕಪ್, ಮತ್ತು 2007 ಕ್ರಿಕೆಟ್ ವಿಶ್ವಕಪ್ ಈ ಮೂರು ವಿಶ್ವಕಪ್ನಲ್ಲಿ ಗ್ಲೆನ್ ಮೆಕ್ಗ್ರಾತ್ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಆಸ್ಟ್ರೇಲಿಯಾ ಹ್ಯಾಟ್ರಿಕ್ ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಇವರ ಘಾತಕ ಬೌಲಿಂಗ್ಗೆ ವಿಶ್ವದ ಅನೇಕ ಸ್ಟಾರ್ ಕ್ರಿಕೆಟಿಗರು ಕೂಡ ರನ್ ಗಳಿಸಲು ಪರದಾಟ ನಡೆಸುತ್ತಿದ್ದರು.
“ಸಾಕಷ್ಟು ಪ್ರೋತ್ಸಾಹ ಮತ್ತು ಬೆಂಬಲದ ಬಳಿಕ ಮನೆಯಲ್ಲಿದ್ದ ಎಲ್ಲ 3 ಹೆಬ್ಬಾವುಗಳನ್ನು ಸುರಕ್ಷಿತವಾಗಿ ಪೊದೆಗೆ ಬಿಡಲಾಗಿದೆ. ಇದೊಂದು ಸಾಹಸವೇ ಸರಿ” ಎಂದು ಮೆಕ್ಗ್ರಾತ್ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
53 ವರ್ಷದ ಮೆಕ್ಗ್ರಾತ್ 250 ಏಕದಿನ ಪಂದ್ಯಗಳನ್ನು ಆಡಿದ್ದು, 381 ವಿಕೆಟ್ ಪಡೆದಿದ್ದಾರೆ. 15 ರನ್ಗೆ 7 ವಿಕೆಟ್ ಪಡೆದದ್ದು ಇವರ ವೈಯಕ್ತಿಕ ಗರಿಷ್ಠ ವಿಕೆಟ್ ಆಗಿದೆ. 124 ಟೆಸ್ಟ್ ಪಂದ್ಯಗಳಿಂದ 563 ವಿಕೆಟ್ ಉರುಳಿಸಿದ್ದಾರೆ. 24 ರನ್ಗೆ 8 ವಿಕೆಟ್ ಪಡೆದದ್ದು ಗರಿಷ್ಠ ಸಾಧನೆಯಾಗಿದೆ. 2 ಟಿ20 ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 14 ಐಪಿಎಲ್ ಆಡಿ 12 ವಿಕೆಟ್ ಪಡೆದಿದ್ದಾರೆ.
ವಿಶ್ವಕಪ್ಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ
ಭಾರತದಲ್ಲಿ ನಡೆಯುವ ಬಹುನಿರೀಕ್ಷಿತ ಏಕದಿನ ವಿಶ್ವಕಪ್(ICC World Cup) ಟೂರ್ನಿಗೆ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡ 15 ಸದಸ್ಯರ ಸಂಭಾವ್ಯ ತಂಡವನ್ನು(preliminary World Cup squad) ಬುಧವಾರ ಅಂತಿಮಗೊಳಿಸಿದೆ.
ಇದನ್ನೂ ಓದಿ ICC World Cup 2023: ಭಾರತ ಬಿಟ್ಟು ವಿಶ್ವಕಪ್ ಗೆಲ್ಲುವ ತಂಡ ಹೆಸರಿಸಿದ ಗಂಭೀರ್
ಕಳೆದ ತಿಂಗಳು 18 ಸದಸ್ಯರ ತಂಡವನ್ನು ಪ್ರಕಟಿಸಿತ್ತು. ಈ ತಂಡದಲ್ಲಿ ಮೂವರನ್ನು ಕೈಬಿಟ್ಟು 15 ಮಂದಿಯ ತಂಡವನ್ನು ಅಂತಿಮಗೊಳಿಸಿದೆ. ಈ ಹಿಂದೆ 18 ಮಂದಿ ಸದಸ್ಯರಲ್ಲಿ ಸ್ಥಾನ ಪಡೆದಿದ್ದ ಆರನ್ ಹಾರ್ಡಿ, ನಥಾನ್ ಎಲ್ಲಿಸ್ ಮತ್ತು ತನ್ವೀರ್ ಸಂಘ ಅವರನ್ನು ಕೈ ಬಿಡಲಾಗಿದೆ. ಬಹುತೇಕ ಈ ತಂಡದಲ್ಲಿ ಇನ್ನು ಬದಲಾವಣೆ ಕಷ್ಟ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಖಚಿತಪಡಿಸಿದೆ. ಗಾಯಗೊಂಡರಷ್ಟೇ ಬದಲಾವಣೆ ಎಂದು ತಿಳಿಸಿದೆ.
ಕಮಿನ್ಸ್ ಸಾರಥ್ಯ
ಅನುಭವಿ ವೇಗಿ ಪ್ಯಾಟ್ ಕಮಿನ್ಸ್(Pat Cummins) ತಂಡವನ್ನು ಮುನ್ನಡೆಸಲಿದ್ದಾರೆ. ಕಮಿನ್ಸ್ ನೇತೃತ್ವದಲ್ಲಿ ಇದೇ ವರ್ಷ ಆಸ್ಟ್ರೇಲಿಯಾ ಟೆಸ್ಟ್ ವಿಶ್ವಕಪ್ ಗೆದ್ದ ಸಾಧನೆ ಮಾಡಿತ್ತು. ಫೈನಲ್ನಲ್ಲಿ ಭಾರತವನ್ನು ಮಣಿಸಿ ಆಸೀಸ್ ಎಲ್ಲ ಮಾದರಿಯ ವಿಶ್ವಕಪ್ ಗೆದ್ದ ಸಾಧನೆ ಮಾಡಿತ್ತು. ಇದೀಗ ಮತ್ತೊಂದು ವಿಶ್ವಕಪ್ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಆಸ್ಟ್ರೇಲಿಯಾ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 8ರಂದು ಆತಿಥೇಯ ಭಾರತ ವಿರುದ್ಧ ಕಣ್ಣಕಿಳಿಯುವ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಈ ಪಂದ್ಯ ಚೆನ್ನೈಯಲ್ಲಿ ನಡೆಯಲಿದೆ. ಅನುಭವಿ ಆಟಗಾರ ಮಾರ್ನಸ್ ಲಬುಶೇನ್ ಅವರು ಆಯ್ಕೆಯಾಗಿಲ್ಲ. ವಿಶ್ವಕಪ್ಗೂ ಮುನ್ನ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ.