Site icon Vistara News

Ind vs Aus : ಸತತ ಸೋಲು; ಟಿ20 ಸರಣಿಯ ಮಧ್ಯದಲ್ಲಿಯೇ ಹೊಸ ತಂಡ ಪ್ರಕಟಿಸಿದ ಆಸೀಸ್​

Australia cricket team

ಬೆಂಗಳೂರು: ಭಾರತ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ 20ಐ ಸರಣಿಗೆ (Ind vs Aus) ಈ ಹಿಂದೆ ಪ್ರಕಟಿಸಲಾಗಿದ್ದ ಆಸ್ಟ್ರೇಲಿಯಾ ತಂಡದಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಈ ತಂಡದಲ್ಲಿದ್ದ ವಿಶ್ವ ಕಪ್ ವಿಜೇತ ತಂಡದಲ್ಲಿದ್ದ ಏಳು ಸದಸ್ಯರ ಪೈಕಿ ಆರು ಆಟಗಾರರನ್ನು ಬಿಡುಗಡೆ ಮಾಡಲು ಕ್ರಿಕೆಟ್​ ಆಸ್ಟ್ರೇಲಿಯಾ ನಿರ್ಧರಿಸಿದೆ. ಸ್ಟೀವ್ ಸ್ಮಿತ್ ಮತ್ತು ಆ್ಯಡಮ್ ಜಂಪಾ ಈಗಾಗಲೇ ಸ್ವದೇಶಕ್ಕೆ ಮರಳಿದ್ದರೆ, ಗ್ಲೆನ್ ಮ್ಯಾಕ್ಸ್​ವೆಲ್​ , ಮಾರ್ಕಸ್ ಸ್ಟೊಯಿನಿಸ್, ಜೋಶ್ ಇಂಗ್ಲಿಸ್ ಮತ್ತು ಸೀನ್ ಅಬಾಟ್ ಮಂಗಳವಾರ ಗುವಾಹಟಿಯಲ್ಲಿ ನಡೆಯಲಿರುವ ಮೂರನೇ ಟಿ 20 ಪಂದ್ಯದ ನಂತರ ಬುಧವಾರ ತವರಿಗೆ ಹಾರಲಿದ್ದಾರೆ.

ಎರಡು ತಿಂಗಳಿಗೂ ಹೆಚ್ಚು ಕಾಲ ಭಾರತದಲ್ಲಿರುವ ಆಟಗಾರರಿಗೆ ವಿಶ್ರಾಂತಿ ನೀಡಲು ಈ ನಿರ್ಧಾರ ಕೈಗೊಂಡಿದೆ. ಈ ಆಟಗಾರರಲ್ಲಿ ಹೆಚ್ಚಿನವರು ವಿಶ್ವಕಪ್​​ಗೆ ಮುಂಚಿತವಾಗಿ ಭಾರತದ ವಿರುದ್ಧ 3 ಪಂದ್ಯಗಳ ಒಡಿಐ ಸರಣಿಯನ್ನು ಆಡಿದ ಆಸ್ಟ್ರೇಲಿಯಾದ ಏಕದಿನ ತಂಡದ ಭಾಗವಾಗಿದ್ದರು. ಅದಕ್ಕಿಂತಲೂ ಹೆಚ್ಚಾಗಿ ವಿಶ್ವ ಕಪ್​ ಗೆದ್ದಿರುವ ಸಂಭ್ರಮಾಚರಣೆಗಾಗಿ ಆಟಗಾರರನ್ನು ವಾಪಸ್​ ಕರೆಸಿಕೊಂಡಿರಬಹುದು. ಯಾಕೆಂದರೆ ವಿಶ್ವ ಕಪ್​ ಸಂಭ್ರಮಾರಣೆಯ ರ್ಯಾಲಿಯನ್ನು ಆ ತಂಡ ಇನ್ನೂ ನಡೆಸಿಲ್ಲ. ಹಲವು ಆಟಗಾರರು ಭಾರತದಲ್ಲಿಯೇ ಇರುವುದು ಅದಕ್ಕೆ ಪ್ರಮುಖ ಕಾರಣವಾಗಿದೆ.

ಟ್ರಾವಿಸ್ ಹೆಡ್ ಈ ಟಿ 20 ಐ ಸರಣಿಯ ಉಳಿದ ಪಂದ್ಯಗಳಿಗೆ ಉಳಿಯುವ ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ತಂಡದ ಏಕೈಕ ಸದಸ್ಯರಾಗಿದ್ದಾರೆ. ವಿಶ್ವಕಪ್ ಫೈನಲ್​​ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಹೆಡ್ ಈ ಸರಣಿಯ ತಂಡದಲ್ಲಿ ಇನ್ನೂ ಅವಕಾಶ ಪಡೆದಿಲ್ಲ. ಎಡಗೈ ಆರಂಭಿಕ ಬ್ಯಾಟರ್​ ಮೂರನೇ ಟಿ 20 ಪಂದ್ಯದಿಂದಲೇ ಬ್ಯಾಟಿಂಗ್ ಆರಂಭಿಸಲು ಸಜ್ಜಾಗಿದ್ದಾರೆ.

ವಿಕೆಟ್ ಕೀಪರ್-ಬ್ಯಾಟರ್​ ಜೋಶ್ ಫಿಲಿಪ್ ಮತ್ತು ಬಿಗ್ ಹಿಟ್ಟರ್ ಬೆನ್ ಮೆಕ್ಡರ್ಮಾಟ್ ಈಗಾಗಲೇ ಗುವಾಹಟಿಯಲ್ಲಿ ತಂಡಕ್ಕೆ ಬದಲಿ ಆಟಗಾರರಿಗೆ ಸೇರಿಕೊಳ್ಳಲಿದ್ದಾರೆ. ರಾಯ್ಪುರದಲ್ಲಿ ನಡೆಯಲಿರುವ ನಾಲ್ಕನೇ ಟಿ 20 ಪಂದ್ಯಕ್ಕೆ ಮುಂಚಿತವಾಗಿ ಬೆನ್ ಡ್ವಾರ್ಶುಯಿಸ್ ಮತ್ತು ಆಫ್ ಸ್ಪಿನ್ನರ್ ಕ್ರಿಸ್ ಗ್ರೀನ್ ಬುಧವಾರ ತಂಡವನ್ನು ಸೇರುವ ಸಾಧ್ಯತೆಯಿದೆ. ಆಸ್ಟ್ರೇಲಿಯಾ ತಂಡದ ಮ್ಯಾನೇಜ್ಮೆಂಟ್ ತಮ್ಮ ತಂಡದಲ್ಲಿ ಫಿಂಗರ್ ಸ್ಪಿನ್ನರ್ ನ ಅಗತ್ಯವನ್ನು ಮನಗಂಡಿರುವ ಕಾರಣ ಗ್ರೀನ್​ಗೆ ಅವಕಾಶ ನೀಡಲು ನಿರ್ಧರಿಸಿದೆ.

ಭಾರತಕ್ಕೆ 2-0 ಮುನ್ನಡೆ

ಭಾರತದ ಬ್ಯಾಟಿಂಗ್ ಘಟಕದ ವಿರುದ್ಧ ಮೊದಲ ಎರಡು ಪಂದ್ಯಗಳನ್ನು ಸೋತ ಆಸ್ಟ್ರೇಲಿಯಾ ಸರಣಿಯಲ್ಲಿ 0-2 ರಿಂದ ಹಿಂದುಳಿದಿದೆ. ಆಸ್ಟ್ರೇಲಿಯಾದ ವಿಶ್ವಕಪ್ ಫೈನಲ್​​ನಲ್ಲಿ ಆಡಿದ ಬಳಿಕವೂ ಟಿ20 ಇಲೆವೆನ್​​ನಲ್ಲಿ ಕಾಣಿಸಿಕೊಂಡ ಏಕೈಕ ಆಟಗಾರ ಸ್ಮಿತ್. ವಿಶ್ವಕಪ್ ತಂಡದ ಭಾಗವಾಗಿದ್ದು, ಆಡಲು ಅವಕಾಶ ಪಡೆಯದ ಸ್ಟೋಯ್ನಿಸ್ ಮತ್ತು ಅಬಾಟ್ ಕೂಡ ಟಿ20 ಸರಣಿಯಲ್ಲಿ ಎರಡೂ ಪಂದ್ಯಗಳನ್ನು ಆಡಿದ್ದಾರೆ. ಮ್ಯಾಕ್ಸ್ವೆಲ್ ಮತ್ತು ಜಂಪಾ ಎರಡನೇ ಟಿ20 ಗೆ ಮರಳಿದ್ದರು. ಆದರೆ ಆಸ್ಟ್ರೇಲಿಯಾಕ್ಕೆ ಗೆಲುವು ತಂದುಕೊಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಸರಣಿ ಆರಂಭಕ್ಕೂ ಮುನ್ನವೇ ಡೇವಿಡ್ ವಾರ್ನರ್ ಅವರನ್ನು ಟಿ20 ತಂಡದಿಂದ ಕೈಬಿಡಲಾಗಿತ್ತು.

ಇದನ್ನೂ ಓದಿ : IPL 2024 : ಆರ್​ಸಿಬಿಯಿಂದ ಹೊರ ಹೋಗಿ ಬೇರೆ ತಂಡದಲ್ಲಿ ಮಿಂಚಿದ ಆಟಗಾರರು ಇವರು

ಏತನ್ಮಧ್ಯೆ, ಮೂರನೇ ಪಂದ್ಯಕ್ಕೆ ಭಾರತ ತನ್ನ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಆದಾಗ್ಯೂ, ಶ್ರೇಯಸ್ ಅಯ್ಯರ್ ಮುಂದಿನ ಪಂದ್ಯದಿಂದ ಆಯ್ಕೆಗೆ ಲಭ್ಯವಿರುತ್ತಾರೆ. ಅವರು ಋತುರಾಜ್ ಗಾಯಕ್ವಾಡ್ ಅವರಿಂದ ತಂಡದ ಉಪನಾಯಕರಾಗಿಯೂ ಅಧಿಕಾರ ಪಡೆದುಕೊಳ್ಳಲಿದ್ದಾರೆ. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಬದಲಾಗಿರುವ ಆಸ್ಟ್ರೇಲಿಯಾ ತಂಡ

ಮ್ಯಾಥ್ಯೂ ವೇಡ್ (ನಾಯಕ), ಜೇಸನ್ ಬೆಹ್ರೆನ್ಡಾರ್ಫ್, ಟಿಮ್ ಡೇವಿಡ್, ಬೆನ್ ಡ್ವಾರ್ಶುಯಿಸ್, ನಾಥನ್ ಎಲ್ಲಿಸ್, ಕ್ರಿಸ್ ಗ್ರೀನ್, ಆರೋನ್ ಹಾರ್ಡಿ, ಟ್ರಾವಿಸ್ ಹೆಡ್, ಬೆನ್ ಮೆಕ್ಡರ್ಮಾಟ್, ಜೋಶ್ ಫಿಲಿಪ್, ತನ್ವೀರ್ ಸಂಘಾ, ಮ್ಯಾಟ್ ಶಾರ್ಟ್, ಕೇನ್ ರಿಚರ್ಡ್ಸನ್.

Exit mobile version