ಕೋಲ್ಕತಾ: ಶನಿವಾರದ ವಿಶ್ವಕಪ್ನ ಡಬಲ್ ಹೆಡರ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ನೆದರ್ಲೆಂಡ್ಸ್ ತಂಡಗಳು ಗೆಲುವು ಸಾಧಿಸಿವೆ. ಉಭಯ ತಂಡಗಳ ಈ ಗೆಲುವಿನಿಂದ ಅಂಕಪಟ್ಟಿಯಲ್ಲಿ(World Cup 2023 Points Table) ಭಾರಿ ಬದಲಾವಣೆ ಸಂಭವಿಸಿದೆ. ಗೆಲುವು ಕಂಡ ಆಸ್ಟ್ರೇಲಿಯಾ 6 ಪಂದ್ಯಗಳಿಂದ 4ರಲ್ಲಿ ಗೆಲುವು ಕಂಡು 8 ಅಂಕದೊಂದಿಗೆ ನಾಲ್ಕನೇ ಸ್ಥಾನವನ್ನು ಮತ್ತಷ್ಟು ಗಟ್ಟಿ ಪಡಿಸಿದೆ.
ನೆದರ್ಲೆಂಡ್ಸ್ ತಂಡ ಗೆದ್ದು ಕೊನೆಯ ಸ್ಥಾನದಿಂದ 8ನೇ ಸ್ಥಾನಕ್ಕೇರಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಕೊನೆಯ ಸ್ಥಾನಕ್ಕೆ ಕುಸಿದಿದೆ. ಭಾನುವಾರ ನಡೆಯುವ ಭಾರತ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ಇಂಗ್ಲೆಂಡ್ ಈ ಅವಮಾನದಿಂದ ಪಾರಾಗಬಹುದು. ಒಂದೊಮ್ಮೆ ಭಾರತ ವಿರುದ್ಧವೂ ಸೋಲು ಕಂಡರೆ ಇಂಗ್ಲೆಂಡ್ ಸ್ಥಿತಿ ಮತ್ತಷ್ಟು ಶೋಚನೀಯವಾಗಲಿದೆ.
ಇದನ್ನೂ ಓದಿ BAN vs NED: ನೆದರ್ಲೆಂಡ್ಸ್ಗೆ ಭರ್ಜರಿ ಗೆಲುವು; ಪಾತಾಳಕ್ಕೆ ಕುಸಿದ ಹಾಲಿ ಚಾಂಪಿಯನ್ ಇಂಗ್ಲೆಂಡ್
ಪಾಕ್ಗೆ 6ನೇ ಸ್ಥಾನ
ಸದ್ಯಕ್ಕೆ 10 ಅಂಕ +2.032 ರನ್ ರೇಟ್ ಹೊಂದಿರುವ ದಕ್ಷಿಣ ಆಫ್ರಿಕಾ ಅಗ್ರಸ್ಥಾನದಲ್ಲಿದೆ. 10 ಅಂಕ ಪಡೆದು ರನ್ ರೇಟ್ನಲ್ಲಿ ಹಿಂದಿರುವ ಭಾರತ ದ್ವಿತೀಯ ಸ್ಥಾನದಲ್ಲಿದೆ. 8 ಅಂಕ ಪಡೆದ ನ್ಯೂಜಿಲ್ಯಾಂಡ್ ಮೂರನೇ ಸ್ಥಾನದಲ್ಲಿದೆ. ಭಾರತದ ಬದ್ಧ ಎದುರಾಳಿ ಪಾಕಿಸ್ತಾನ 4 ಅಂಕದೊಂದಿಗೆ 6ನೇ ಸ್ಥಾನದಲ್ಲಿದೆ. ಉಳಿದಿರುವ ಮೂರು ಪಂದ್ಯಗಳನ್ನು ಭಾರಿ ಅಂತರದಿಂದ ಗೆದ್ದು ತನಗಿಂತ ಮೇಲಿರುವ ತಂಡಗಳು ಸತತ ಸೋಲು ಕಂಡರೆ ಮಾತ್ರ ಪಾಕ್ಗೆ ಸೆಮಿಫೈನಲ್ ಟಿಕೆಟ್ ದೊರೆಯುವ ಸಾಧ್ಯತೆ ಇದೆ. ಸಣ್ಣ ಅಂತರದ ಗೆಲುವು ಪ್ರಯೋಜನಕ್ಕೆ ಬಾರದು.
ನೂತನ ಅಂಕಪಟ್ಟಿ ಹೀಗಿದೆ
ತಂಡ | ಪಂದ್ಯ | ಗೆಲುವು | ಸೋಲು | ಅಂಕ | ನೆಟ್ ರನ್ರೇಟ್ |
ದಕ್ಷಿಣ ಆಫ್ರಿಕಾ | 6 | 5 | 1 | 10 | +2.032 |
ಭಾರತ | 5 | 5 | 0 | 10 | 1.353 |
ನ್ಯೂಜಿಲ್ಯಾಂಡ್ | 6 | 4 | 2 | 8 | +1.232 |
ಆಸ್ಟ್ರೇಲಿಯಾ | 6 | 4 | 2 | 8 | +0.970 |
ಶ್ರೀಲಂಕಾ | 5 | 2 | 3 | 4 | -0.205 |
ಪಾಕಿಸ್ತಾನ | 6 | 2 | 4 | 4 | -0.387 |
ಅಫಘಾನಿಸ್ತಾನ | 5 | 2 | 3 | 4 | -0.969 |
ನೆದರ್ಲ್ಯಾಂಡ್ಸ್ | 6 | 2 | 4 | 4 | -1.277 |
ಬಾಂಗ್ಲಾದೇಶ | 6 | 1 | 5 | 2 | -1.338 |
ಇಂಗ್ಲೆಂಡ್ | 5 | 1 | 4 | 2 | -1.634 |
ಆಸೀಸ್ಗೆ 5 ರನ್ ರೋಚಕ ಗೆಲುವು
ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಆಸ್ಟ್ರೇಲಿಯಾ 49.2 ಓವರ್ಗಳಲ್ಲಿ 388ರನ್ಗೆ ಆಲೌಟ್ ಆಯಿತು. ಬೃಹತ್ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಹೋದ ನ್ಯೂಜಿಲ್ಯಾಂಡ್ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ಗೆ 383 ರನ್ ಗಳಿಸಿ 5 ರನ್ ಅಂತರದಲ್ಲಿ ಸೋಲು ಕಂಡಿತು. ಒಂದೊಮ್ಮೆ ಈ ಮೊತ್ತವನ್ನು ಕಿವೀಸ್ ಬೆನ್ನಟ್ಟುತ್ತಿದ್ದರೆ ಇದು ವಿಶ್ವಕಪ್ನಲ್ಲಿ ದಾಖಲೆಯ ಮೊತ್ತದ ರನ್ ಚೇಸ್ ಗೆಲುವಾಗುತ್ತಿತ್ತು.
ಇದನ್ನೂ ಓದಿ AUS vs NZ: ಶತಕ ಬಾರಿಸಿ ವಿಶ್ವಕಪ್ನಲ್ಲಿ ಸಚಿನ್ ದಾಖಲೆ ಸರಿಗಟ್ಟಿದ ರಚಿನ್ ರವೀಂದ್ರ
ನೆದರ್ಲೆಂಡ್ಸ್ಗೆ 87 ರನ್ಗಳ ಗೆಲುವು
ಶನಿವಾರದ ವಿಶ್ವಕಪ್ನ ಡಬಲ್ ಹೆಡರ್ನ ದ್ವಿತೀಯ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನೆದರ್ಲೆಂಡ್ಸ್ ಎಂದಿನಂತೆ ಆರಂಭಿಕ ಆಘಾತ ಕಂಡು ಆ ಬಳಿಕ ಚೇತರಿಸಿ ಭರ್ತಿ 50 ಓವರ್ ಆಡಿ 229ಕ್ಕೆ ಆಲೌಟ್ ಆಯಿತು. ಅಲ್ಪ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾ ನಾಟಕೀಯ ಕುಸಿತ ಕಂಡು 42.2 ಓವರ್ಗಳಲ್ಲಿ 142 ರನ್ಗೆ ಸರ್ವಪತನ ಕಂಡು ಸೋಲಿಗೆ ತುತ್ತಾಯಿತು. ಪಂದ್ಯ ಗೆದ್ದ ನೆದರ್ಲೆಂಡ್ಸ್ 4 ಅಂಕದೊಂದಿಗೆ ಕೊನೆಯ ಸ್ಥಾನದಿಂದ ಮೇಲೇರಿ 8ನೇ ಸ್ಥಾನಕ್ಕೇರಿತು.