ಅಹಮದಾಬಾದ್: ಉಸ್ಮಾನ್ ಖ್ವಾಜಾ (180) ಹಾಗೂ ಕ್ಯಾಮೆರಾನ್ ಗ್ರೀನ್ (114) ಜೋಡಿಯ ಶತಕದ ನೆರವಿನಿಂದ ಮಿಂಚಿದ ಆಸ್ಟ್ರೇಲಿಯಾ ತಂಡ ಬಾರ್ಡರ್- ಗವಾಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 480 ರನ್ಗೆ ಆಲ್ಔಟ್ ಆಗಿದೆ. ಭಾರತ ತಂಡದ ಪರ ಬೌಲಿಂಗ್ನಲ್ಲಿ ಆರ್ ಅಶ್ವಿನ್ 91 ರನ್ಗಳ ವೆಚ್ಚದಲ್ಲಿ 6 ವಿಕೆಟ್ ಉರುಳಿಸಿ ಸಾಧನೆ ಮಾಡಿದರು. ಸರಣಿಯ ಮೊದಲ ಮೂರು ಪಂದ್ಯಗಳು ಕಡಿಮೆ ರನ್ಗಳಲ್ಲಿ ಮುಕ್ತಾಯಗೊಂಡ ಕಾರಣ ಈ ಪಂದ್ಯ ಹೆಚ್ಚು ರೋಚಕವಾಗಿ ಕಾಣಿಸಿತು.
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನ 255 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡ ಎರಡನೇ ದಿನ ಒಟ್ಟು 167. 2 ಓವರ್ಗಳನ್ನು ಎದುರಿಸಿ 480 ರನ್ಗಳನ್ನು ಪೇರಿಸಿತು. ಮೊದಲ ದಿನದಿಂದ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಉಸ್ಮಾನ್ ಖ್ವಾಜಾ ಹಾಗೂ ಕ್ಯಾಮೆರಾನ್ ಗ್ರಿನ್ ಬೆಳಗ್ಗಿನ ಅವಧಿಯಲ್ಲಿ ಭಾರತದ ಬೌಲರ್ಗಳನ್ನು ನಿರಂತರವಾಗಿ ಕಾಡುವ ಜತೆಗೆ ತಂಡದ ರನ್ ಗಳಿಕೆಯನ್ನು ಹೆಚ್ಚಿಸಿದರು. ಈ ಜೋಡಿ ಐದನೇ ವಿಕೆಟ್ಗೆ 208 ರನ್ ಬಾರಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಮೊತ್ತ ಪೇರಿಸಲು ನೆರವಾದರು.
ಖ್ವಾಜಾ, ಗ್ರೀಣ್ ಜತೆಯಾಟ
ಎರಡನೇ ದಿನ ಬೆಳಗ್ಗಿನ ಅವಧಿಯಲ್ಲಿ ಕ್ಯಾಮೆರಾನ್ ಗ್ರೀನ್ ಹಾಗೂ ಉಸ್ಮಾನ್ ಖವಾಜ ತಳವೂರಿ ಬ್ಯಾಟ್ ಮಾಡಿದರು. ಹೀಗಾಗಿ ಭೋಜನ ವಿರಾಮದ ವೇಳೆಗೆ 4 ವಿಕೆಟ್ ನಷ್ಟಕ್ಕೆ 347 ರನ್ ಬಾರಿಸಿತು. ವಿರಾಮದ ಸ್ವಲ್ಪ ಹೊತ್ತಿನಲ್ಲಿಯೇ ಕ್ಯಾಮೆರಾನ್ ಗ್ರೀನ್ 143 ಎಸೆತಗಳಲ್ಲಿ ಚೊಚ್ಚಲ ಶತಕದ ಸಾಧನೆ ಮಾಡಿದರು. ಮತ್ತೆ 14 ರನ್ ಸೇರಿಸಿದ ಗ್ರೀನ್ ಅಶ್ವಿನ್ ಎಸೆತಕ್ಕೆ ವಿಕೆಟ್ಕೀಪರ್ ಕೆ.ಎಸ್ ಭರತ್ಗೆ ಕ್ಯಾಚ್ ನೀಡಿ ಔಟಾದರು. ಬಳಿಕ ಬಂದ ವಿಕೆಟ್ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯೇರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಮಿಚೆಲ್ ಸ್ಟಾರ್ಕ್ 6 ರನ್ಗೆ ಔಟಾದರು. ಹೀಗಾಗಿ 387 ರನ್ಗಳಿಗೆ ಆಸ್ಟ್ರೇಲಿಯಾ 7 ವಿಕೆಟ್ ಕಳೆದುಕೊಂಡಿತು.
ಮತ್ತೊಂದು ಬದಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಉಸ್ಮಾನ್ ಖ್ವಾಜಾ ಒಟ್ಟು 422 ಎಸೆತಗಳನ್ನು ಎದುರಿಸಿ 180 ರನ್ ಬಾರಿಸಿ ಅಕ್ಷರ್ ಪಟೇಲ್ ಎಸೆತಕ್ಕೆ ಎಲ್ಬಿಡಬ್ಲ್ಯು ಆದರು. 20 ರನ್ಗಳಿಂದ ದ್ವಿಶತಕ ಅವಕಾಶ ಕಳೆದುಕೊಂಡರು. ಇದಾದ ಬಳಿಕ ಬ್ಯಾಟ್ ಮಾಡಲು ಬಂದ ಸ್ಪಿನ್ನರ್ಗಳಾದ ನೇಥನ್ ಲಿಯಾನ್ (34) ಹಾಗೂ ಟಾಡ್ ಮರ್ಫಿ (41) ಒಂಬತ್ತನೇ ವಿಕೆಟ್ಗೆ 70 ರನ್ ಜತೆಯಾಟ ನೀಡಿದರು. ಮರ್ಫಿ ಎಲ್ಬಿಡಬ್ಲ್ಯು ಆಗಿ ವಿಕೆಟ್ ಒಪ್ಪಿಸಿದ ಸ್ವಲ್ಪ ಹೊತ್ತಿನಲ್ಲೇ ಲಿಯಾನ್ ಔಟಾದರು.
ಇದನ್ನೂ ಓದಿ : INDvsAUS : ಪ್ಯಾಟ್ ಕಮಿನ್ಸ್ ತಾಯಿ ನಿಧನ, ಕಪ್ಪು ಪಟ್ಟಿ ಧರಿಸಿ ಕ್ರೀಡಾಂಗಣಕ್ಕೆ ಇಳಿದ ಆಸ್ಟ್ರೇಲಿಯಾ ತಂಡ
ಮೊಹಮ್ಮದ್ ಶಮಿ 134 ರನ್ಗಳಿಗೆ 2 ವಿಕೆಟ್ ಪಡೆದರೆ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ 1 ವಿಕೆಟ್ ತಮ್ಮದಾಗಿಸಿಕೊಂಡರು.