ಇಂದೋರ್: ಮೈಂಡ್ ಗೇಮ್ ಹಾಗೂ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ಆಸ್ಟ್ರೇಲಿಯಾ ತಂಡದ ಕ್ರಿಕೆಟಿಗರು ನಿಸ್ಸೀಮರು. ಅಂಥದ್ದೊಂದು ನಕಾರಾತ್ಮಕ ತಂತ್ರವನ್ನು ಪದೇ ಪದೆ ಬಳಸಿದ್ದು ಭಾರತ ವಿರುದ್ಧದ ಟೆಸ್ಟ್ ಸರಣಿಯ (INDvsAUS) ಮೂರನೇ ಪಂದ್ಯದಲ್ಲಿ ಬಯಲಾಗಿದೆ. ನಾಯಕ ಸ್ಟೀವ್ ಸ್ಮಿತ್ ಹಾಗೂ ವಿಕೆಟ್ಕೀಪರ್ ಅಲೆಕ್ಸ್ ಕ್ಯೇರಿಯ ಈ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತಗೊಂಡಿವೆ. ಭಾರತ ತಂಡದ ಮಾಜಿ ಆಟಗಾರ ಪಾರ್ಥೀವ್ ಪಟೇಲ್ ಕೂಡ ಕ್ರಿಕ್ಬಜ್ ಜತೆ ಮಾತನಾಡುತ್ತಾ, ಆಸ್ಟ್ರೇಲಿಯಾ ತಂಡದ ಆಟಗಾರರು ಡಿಆರ್ಎಸ್ ತಾಂತ್ರಿಕತೆಯ ಲೋಪವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಮುಂದುವರಿದರೆ ನಿಯಮದಲ್ಲಿ ಬದಲಾವಣೆ ಮಾಡುವುದೇ ಸೂಕ್ತ ಎಂದು ಹೇಳಿದ್ದಾರೆ.
ಮೂರನೇ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ತಂಡದ ನೇತೃತ್ವ ವಹಿಸಿಕೊಂಡಿದ್ದರು. ಪ್ಯಾಟ್ ಕಮಿನ್ಸ್ ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾಗೆ ಮರಳಿದವರು ವಾಪಸ್ ಬರದ ಕಾರಣ ಸ್ಮಿತ್ಗೆ ಹೊಣೆಗಾರಿಕೆ ನೀಡಲಾಗಿತ್ತು. ತಂತ್ರಗಾರಿಕೆಯಲ್ಲಿ ನಿಸ್ಸೀಮರಾಗಿರುವ ಅವರು ಡಿಆರ್ಎಸ್ ಲೋಪವನ್ನು ಸರಿಯಾಗಿ ಬಳಸಿಕೊಂಡಿದ್ದಾರೆ. ಈ ಮೂಲಕ ಭಾರತದ ಎರಡು ವಿಕೆಟ್ಗಳು ಪತನಗೊಳ್ಳುವಂತೆ ಮಾಡಿದ್ದಾರೆ ಎಂಬುದಾಗಿ ಚರ್ಚೆಗಳು ನಡೆಯುತ್ತಿವೆ.
ಸ್ಮಿತ್ ಮತ್ತು ಕ್ಯೇರಿಯ ತಂತ್ರವೇನು?
ಭಾರತ ತಂಡ ಬ್ಯಾಟಿಂಗ್ ಮಾಡುವಾಗ ಈ ತಂತ್ರವನ್ನು ಸ್ಮಿತ್ ಬಳಸಿಕೊಂಡಿದ್ದಾರೆ. ಬೌಲರ್ ಎಸೆದ ಚೆಂಡು ಬ್ಯಾಟ್ನ ಸನಿಹದಲ್ಲೇ ನುಸುಳಿ ವಿಕೆಟ್ಕೀಪರ್ ಕೈ ಸೇರಿದರೆ ತಕ್ಷಣವೇ ಸ್ಟಂಪ್ ಮಾಡುವುದು. ಆಗ ಸ್ಕ್ವೇರ್ಲೆಗ್ ಅಂಪೈರ್ ಸ್ಟಂಟ್ ಔಟ್ ಮನವಿಯನ್ನು ಪುರಸ್ಕರಿಸಲೇಬೇಕಾಗುತ್ತದೆ ಹಾಗೂ ತೀರ್ಮಾನಕ್ಕಾಗಿ ಮೂರನೇ ಅಂಪೈರ್ ಮೊರೆ ಹೋಗುತ್ತಾರೆ. ಈ ವೇಳೆ ಟಿವಿ ಅಂಪೈರ್ಗಳು ಚೆಂಡು ಎಸೆಯುವ ಪ್ರಕ್ರಿಯೆಯಿಂದ ಆರಂಭಿಸಿ ಸ್ಟಂಪ್ ತನಕವೂ ಪರಿಶೀಲನೆ ನಡೆಸಿ ತೀರ್ಪು ನೀಡುತ್ತಾರೆ. ಒಂದು ವೇಳೆ ಸ್ಟಂಪ್ ಅಲ್ಲದೇ ಹೋದರೂ ಎಲ್ಬಿಡಬ್ಲ್ಯು ಅಥವಾ ಚೆಂಡು ಬ್ಯಾಟ್ಗೆ ಸವರಿ ಕ್ಯಾಚ್ ಆಗಿದ್ದರೂ ಮೂರನೇ ಅಂಪೈರ್ ಔಟ್ ನೀಡುತ್ತಾರೆ. ಇಂಥ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡದ ಡಿಆರ್ಎಸ್ ಆಯ್ಕೆಯೂ ಉಳಿಯುತ್ತದೆ ಹಾಗೂ ಒಂದು ವಿಕೆಟ್ ಕೂಡ ಉರುಳುತ್ತದೆ. ಇದೇ ಉದ್ದೇಶದಿಂದ ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಪ್ರತಿಯೊಂದು ಚೆಂಡು ತಮ್ಮ ಕೈ ಸೇರಿದಾಗೂ ಬೇಲ್ಸ್ ಹಾರಿಸಿ ಸ್ಟಂಪ್ ಔಟ್ಗೆ ಮನವಿ ಮಾಡುತ್ತಿದ್ದರು.
ಇದನ್ನೂ ಓದಿ : IND VS AUS: ಮೂರನೇ ಟೆಸ್ಟ್ ಪಂದ್ಯದಿಂದ ಹೊರಗುಳಿದ ಪ್ಯಾಟ್ ಕಮಿನ್ಸ್; ಸ್ಟೀವನ್ ಸ್ಮಿತ್ಗೆ ನಾಯಕತ್ವ
ಎರಡನೇ ಇನಿಂಗ್ಸ್ನಲ್ಲಿ ಭಾರತ ತಂಡದ ಬ್ಯಾಟರ್ ಆರ್. ಅಶ್ವಿನ್ ಅವರ ವಿಕೆಟ್ ಪಡೆದಿರುವುದು ಇದೇ ರೀತಿ. ಅವರ ಬ್ಯಾಟ್ನ ಸನಿಹದಿಂದ ಹೋದ ಚೆಂಡು ವಿಕೆಟ್ಕೀಪರ್ ಅಲೆಕ್ಸ್ ಕ್ಯೇರಿ ಕೈ ಸೇರಿತ್ತು. ಅಶ್ವಿನ್ ಕ್ರೀಸ್ನ ಒಳಗೆ ಇರುವುದು ಗೊತ್ತಿದ್ದರೂ ಕ್ಯೇರಿ ಬೇಲ್ಸ್ ಎಗರಿಸಿ ಅಂಪೈರ್ಗೆ ಮನವಿ ಮಾಡಿದ್ದರು. ಸ್ಕ್ವೇರ್ಲೆಗ್ ಅಂಪೈರ್ ಟಿವಿ ಅಂಪೈರ್ ಮೊರೆ ಹೋಗಿದ್ದರು. ಟಿವಿ ಅಂಪೈರ್ ಪರಿಶೀಲನೆ ನಡೆಸುವ ವೇಳೆ ಚೆಂಡು ಬ್ಯಾಟ್ಗೆ ಸವರಿದ್ದು ಅಲ್ಟ್ರಾ ಎಜ್ ಮೂಲಕ ಗೊತ್ತಾಗಿದೆ. ಅಶ್ವಿನ್ ಸ್ಟಂಪ್ ಅಲ್ಲದಿದ್ದರೂ ಕ್ಯಾಚ್ ಆಗಿ ಔಟ್ ಎಂದು ಅಂಪೈರ್ ಘೋಷಿಸಿದರು. ಈ ಮೂಲಕ ಸ್ಮಿತ್ ಹಾಗೂ ಕ್ಯೇರಿ ಡಿಅರ್ಎಸ್ ನಿಯಮಕ್ಕೆ ಚಮಕ್ ಕೊಟ್ಟಿದ್ದರು.
ಪಾರ್ಥೀವ್ ಪಟೇಲ್ ಏನಂದರು?
ಭಾರತ ತಂಡದ ಮಾಜಿ ಹಾಗೂ ಆರ್ಸಿಯ ಮಾಜಿ ಬ್ಯಾಟರ್ ಪಾರ್ಥಿವ್ ಪಟೇಲ್ ಆಸೀಸ್ ಬಳಗದ ತಂತ್ರವನ್ನು ಸರಿಯಾಗಿ ಅರ್ಥೈಸಿಕೊಂಡು ಛೀಮಾರಿ ಹಾಕಿದ್ದಾರೆ. ಲೋಪಗಳನ್ನು ದುರ್ಬಳಕೆ ಮಾಡುವುದರಲ್ಲಿ ಸ್ಮಿತ್ ನಿಸ್ಸೀಮರು ಎಂದು ಅವರು ಕ್ರಿಕ್ಬಜ್ ಚರ್ಚೆಯಲ್ಲಿ ಹೇಳಿದ್ದಾರೆ. ಸ್ಟಂಪ್ ಔಟ್ಗೆ ಮನವಿ ಮಾಡಿದಾಗ ಅಂಪೈರ್ಗಳು ನಿರಾಕರಿಸಲು ಸಾಧ್ಯವೇ ಇಲ್ಲ ಎಂಬುದು ಅವರಿಗೆ ಗೊತ್ತು ಎಂದೂ ಅವರು ಹೇಳಿದ್ದಾರೆ.
ಇದಕ್ಕೊಂದು ಪರಿಹಾರವಿವದೆ. ಇನ್ನು ಮುಂದೆ ಯಾವುದಾದರೂ ತಂಡದ ಸ್ಟಂಪ್ ಔಟ್ಗೆ ಮನವಿ ಮಾಡಿದರೆ ಅದನ್ನು ಮಾತ್ರ ಪರಿಶೀಲನೆ ನಡೆಸಬೇಕು. ಕ್ಯಾಚ್ ಹಾಗೂ ಎಲ್ಬಿಡಬ್ಲ್ಯು ಔಟ್ ಎಂಬುದನ್ನು ಪರಿಶೀಲನೆ ಮಾಡಬಾರದು. ನಿಯಮಕ್ಕೆ ಬದಲಾವಣೆ ತಂದು ಲೋಪದ ದುರ್ಬಳಕೆ ತಪ್ಪಿಸಬೇಕು ಎಂದು ಅವರು ಸಲಹೆ ಕೊಟ್ಟಿದ್ದಾರೆ.