ಬೆಂಗಳೂರು: ಏಕದಿನ ವಿಶ್ವಕಪ್‌ನಲ್ಲಿ(World Cup History) ಅತ್ಯಂತ ಯಶಸ್ವಿ ತಂಡವೆಂದರೆ ಅದು ಆಸ್ಟ್ರೇಲಿಯಾ. ಸರ್ವಾಧಿಕ 5 ಬಾರಿ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿದೆ. 2 ಬಾರಿ ರನ್ನರ್ ಆಗಿದೆ. ಒಟ್ಟು 12 ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ 7 ಬಾರಿ ಫೈನಲ್ ಪ್ರವೇಶಿಸಿದೆ. ಆಸ್ಟ್ರೇಲಿಯಾದ ವಿಶ್ವಕಪ್ ಸಾಧನೆಯ ಚಿತ್ರಣ ಇಲ್ಲಿದೆ.
1987ರ ವಿಶ್ವಕಪ್
ಆಸ್ಟ್ರೇಲಿಯಾ ತಂಡ ಮೊದಲ ಬಾರಿ ಚಾಂಪಿಯನ್ ಆದದ್ದು 1987ರ ವಿಶ್ವಕಪ್ ಟೂರ್ನಿಯಲ್ಲಿ. ಚೊಚ್ಚಲ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ಆಸಿಸ್ ಫೈನಲ್ ಪ್ರವೇಶ ಪಡೆದಿತ್ತು. ಆದರೆ ಇಲ್ಲಿ ಬಲಿಷ್ಠ ವಿಂಡೀಸ್ ವಿರುದ್ಧ ಮಂಡಿಯೂರಿ ರನ್ನರ್ ಅಪ್ ಆಗಿತ್ತು. 1987ರಲ್ಲಿ ಕಪ್ ಗೆಲ್ಲುವಲ್ಲಿ ಯಶಸ್ಸು ಕಂಡಿತು. ಈ ಟೂರ್ನಿಯ ಆತಿಥ್ಯವನ್ನು ಭಾರತ- ಪಾಕಿಸ್ತಾನ ಜಂಟಿಯಾಗಿ ನಿರ್ವಹಿಸಿದ್ದವು. ಇದು 50 ಓವರ್ಗಳ ಮಾದರಿಯಾಗಿತ್ತು. 8 ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಿದ್ದವು. ರೋಚಕ ಫೈನಲ್‌ನಲ್ಲಿ ಆಸ್ಟ್ರೇಲಿಯಾ 7 ರನ್ಗಳಿಂದ ಆಂಗ್ಲರಿಗೆ ಸೋಲಿನ ಆಘಾತ ನೀಡಿದ್ದರು.
ಇದನ್ನೂ ಓದಿ World Cup History: ರೋಚಕ ಫೈನಲ್‌ನಲ್ಲಿ ಗೆದ್ದು ಬೀಗಿ ಮತ್ತೆ ಚಾಂಪಿಯನ್ ಪಟ್ಟ ಅಲಂಕರಿಸಿದ ವೆಸ್ಟ್ ಇಂಡೀಸ್!
1999ರ ವಿಶ್ವಕಪ್
ಆಸ್ಟ್ರೇಲಿಯಾ ತಂಡ ದ್ವಿತೀಯ ವಿಶ್ವಕಪ್ ಜಯಿಸಿದ್ದು 12 ವರ್ಷಗಳ ಬಳಿಕ. ಇಂಗ್ಲೆಂಡ್‌ನಲ್ಲಿ ನಡೆದ 1999ರ ವಿಶ್ವಕಪ್‌ನಲ್ಲಿ. ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆಗಿದ್ದ ಪಾಕಿಸ್ತಾನವನ್ನು ಕಡೆವಿ ಆಸೀಸ್ ದ್ವಿತೀಯ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2ನೇ ಕಪ್ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನದ ಯೋಜನೆ ವಿಫಲಗೊಂಡಿತು. ಈ ಆವೃತ್ತಿಯಲ್ಲಿ ಒಟ್ಟು 12 ತಂಡಗಳು ಪಾಲ್ಗೊಂಡಿದ್ದವು. ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಅತ್ಯಂತ ಕಳಪೆ ಮಟ್ಟದ ಆಟವಾಡಿ ಕೇವಲ 132 ರನ್ಗೆ ಕುಸಿತ ಕಂಡಿತು. ಆಸ್ಟ್ರೇಲಿಯಾ ಈ ಮೊತ್ತವನ್ನು 2 ವಿಕೆಟ್ ನಷ್ಟಕ್ಕೆ ಬಾರಿಸಿ ಗೆದ್ದು ಬೀಗಿತ್ತು.
ಇದನ್ನೂ ಓದಿ World Cup History: ಲಾರ್ಡ್ಸ್ ಅಂಗಳದಲ್ಲಿ ಚೊಚ್ಚಲ ವಿಶ್ವಕಪ್ ಎತ್ತಿದ ‘ಕಪಿಲ್ ಡೆವಿಲ್ಸ್’
2003ರ ವಿಶ್ವಕಪ್
ಈ ಆವೃತ್ತಿಯಲ್ಲಿ ಸೌರವ್ ಗಂಗೂಲಿ ಸಾರಥ್ಯದ ಭಾರತ ತಂಡ ಅಭೂತಪೂರ್ವ ಪ್ರದರ್ಶನ ತೋರಿ ಫೈನಲ್‌ಗೇರಿತು. ಎಲ್ಲರು ಕೂಡ ಭಾರತ 2ನೇ ಬಾರಿ ವಿಶ್ವಕಪ್ ಗೆಲ್ಲಲಿದೆ ಎಂದು ನಿರೀಕ್ಷೆ ಮಾಡಿದ್ದರು. ಆದರೆ ಫೈನಲ್‌ನಲ್ಲಿ ಸ್ಟಾರ್ ಆಟಗಾರರೆಲ್ಲ ಕೈಕೊಟ್ಟ ಕಾರಣ ಆಸ್ಟ್ರೇಲಿಯಾ ಮೂರನೇ ವಿಶ್ವಕಪ್ ವಿಜಯ ಸಾಧಿಸಿತು. ಭಾರತ ಫೈನಲ್‌ನಲ್ಲಿ 125 ರನ್‌ಗಳ ಸೋಲು ಕಂಡಿತು. ಭಾರತ ಪರ ವೀರೇಂದ್ರ ಸೆಹವಾಗ್ ಏಕಾಂಗಿ ಹೋರಾಟ ನಡೆಸಿ 82 ರನ್ ಬಾರಿಸಿದ್ದರು. ಇದು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ಕೀನ್ಯಾ ಆತಿಥ್ಯದಲ್ಲಿ ನಡೆದ ವಿಶ್ವಕಪ್ ಟೂರ್ನಿಯಾಗಿತ್ತು. ಇಲ್ಲಿ 14 ತಂಡಗಳು ಸ್ಪರ್ಧಿಸಿದ್ದವು.
ಇದನ್ನೂ ಓದಿ World Cup Recap : ದುರ್ಬಲ ಪಾಕಿಸ್ತಾನ ಚಾಂಪಿಯನ್ ಆಗಿದ್ದು ಹೇಗೆ? 1992ರ ವಿಶ್ವ ಕಪ್ ಸ್ಟೋರಿ ಇಲ್ಲಿದೆ
2007ರ ವಿಶ್ವಕಪ್
2007ರ ವಿಶ್ವಕಪ್ ಭಾರತದ ಪಾಲಿಗೆ ಅತ್ಯಂತ ಕರಾಳ ನೆನಪು ಏಕೆಂದರೆ ಭಾರತ ಲೀಗ್ ಹಂತದಲ್ಲೇ ಸೋತು ಹೊರಬಿದ್ದಿತ್ತು. ಅಚ್ಚರಿ ಎಂದರೆ ದುರ್ಬಲ ಬಾಂಗ್ಲಾ ವಿರುದ್ಧವೂ ಭಾರತಕ್ಕೆ ಗೆಲ್ಲಲು ಅಸಾಧ್ಯವಾಗಿತ್ತು. ಈ ಆವೃತ್ತಿಗೆ ವೆಸ್ಟ್‌ಇಂಡೀಸ್ ಆತಿಥ್ಯ ವಹಿಸಿಕೊಂಡಿತ್ತು. ವಿಶೇಷವೆಂದರೆ ಇಲ್ಲಿ ಗರಿಷ್ಠ 16 ತಂಡಗಳು ಸ್ಪರ್ಧೆಗೆ ಇಳಿದಿದ್ದವು. ಫೈನಲ್‌ನಲ್ಲಿ ಶ್ರೀಲಂಕಾ ಮತ್ತು ಆಸೀಸ್ ಮುಖಾಮುಖಿಯಾದವು. ಮಳೆ ಪೀಡಿತ ಫೈನಲ್‌ನಲ್ಲಿ ಆಸೀಸ್ ಡಕ್ವರ್ತ್ ನಿಯಮದ ಪ್ರಕಾರ 53 ರನ್‌ಗಳ ಗೆಲುವು ಸಾಧಿಸಿ ಹ್ಯಾಟ್ರಿಕ್ ವಿಶ್ವಕಪ್‌ಗೆ ಮುತ್ತಿಟ್ಟಿತು. ಒಟ್ಟಾರೆಯಾಗಿ ನಾಲ್ಕನೇ ವಿಶ್ವಕಪ್ ಗೆಲುವು.
ಇದನ್ನೂ ಓದಿ ಭಾರತೀಯ ಕ್ರಿಕೆಟಿನ 28 ವರ್ಷಗಳ ಸುದೀರ್ಘ ಕನಸೊಂದು ಸಾಕಾರಗೊಂಡದ್ದು 2011ರ ವಿಶ್ವಕಪ್‌ನಲ್ಲಿ…
2015ರ ವಿಶ್ವಕಪ್
ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಜಂಟಿಯಾಗಿ ಆತಿಥ್ಯ ವಹಿಸಿಕೊಂಡ 2015ರ ವಿಶ್ವಕಪ್‌ನಲ್ಲಿ ಉಭಯ ದೇಶಗಳ ಮಧ್ಯೆಯೇ ಫೈನಲ್ ಪಂದ್ಯ ಕೂಡ ಏರ್ಪಟ್ಟಿತ್ತು. 14 ತಂಡಗಳು ಪಾಲ್ಗೊಂಡ ಈ ಟೂರ್ನಿಯಲ್ಲಿ ಒಟ್ಟು 49 ಪಂದ್ಯಗಳು ನಡೆದವು. ಹಾಲಿ ಚಾಂಪಿಯನ್ ಆಗಿದ್ದ ಭಾರತ ಸೆಮಿಫೈನಲ್ನಲ್ಲಿ ಆಸೀಸ್ ವಿರುದ್ಧ ಸೋಲು ಕಂಡು ನಿರಾಸೆ ಮೂಡಿಸಿತ್ತು. ಧೋನಿ 2ನೇ ಬಾರಿ ಕಪ್ ಗೆಲ್ಲುವ ಯೋಜನೆ ವಿಫಲವಾಯಿತು. ಅತ್ಯಂತ ನೀರಸವಾಗಿ ನಡೆದ ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ 183 ರನ್ಗೆ ಸರ್ವಪತನ ಕಂಡಿತು. ಸುಲಭ ಮೊತ್ತವನ್ನು ಗುರಿ ಬೆನ್ನಟ್ಟಿದ ಮೈಕಲ್ ಕ್ಲಾರ್ಕ್ ಸಾರಥ್ಯದ ಆಸೀಸ್ 3 ವಿಕೆಟ್ ಕಳೆದುಕೊಂಡು 186ರನ್ ಪೇರಿಸಿ 5ನೇ ವಿಶ್ವಕಪ್ ಮುಕುಟವನ್ನು ಮುಡಿಗೇರಿಸಿಕೊಂಡಿತು.