ಹೈದರಾಬಾದ್: ಭಾರತದ ಆತಿಥ್ಯದಲ್ಲಿ ಏಕ ದಿನ ವಿಶ್ವ ಕಪ್ ನಡೆಯಲಿದೆ. ಅದಕ್ಕೆ ಇನ್ನು ಕೆಲವೇ ತಿಂಗಳುಗಳು ಮಾತ್ರ ಬಾಕಿ ಉಳಿದಿವೆ. ಆದರೆ, ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯ (INDvsAUS) ಎರಡನೇ ಪಂದ್ಯದಲ್ಲಿ ಭಾರತ ತಂಡ ನೀಡಿದ ಪ್ರದರ್ಶನ ವಿಶ್ವ ಕಪ್ ಸಿದ್ಧತೆಗೆ ಪೂರಕವಾಗಿಲ್ಲ ಎಂಬ ಅಭಿಪ್ರಾಯ ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿದೆ. ಆಸ್ಟ್ರೇಲಿಯಾ ತಂಡ ಹೈದರಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಸಂಪೂರ್ಣವಾಗಿ ಮೇಲುಗೈ ಸಾಧಿಸಿತ್ತು. ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಪ್ರವಾಸಿ ತಂಡವೇ ದರ್ಬಾರ್ ನಡೆಸಿತು. ಹೀಗಾಗಿ ರೋಹಿತ್ ಶರ್ಮಾ ನೇತೃತ್ವದ ಬಳಗ 10 ವಿಕೆಟ್ ಹೀನಾಯ ಸೋಲಿಗೆ ಒಳಗಾಯಿತು. ಟೀಮ್ ಇಂಡಿಯಾವನ್ನು ಬೃಹತ್ ಅಂತರದಿಂದ ಸೋಲಿಸಿದ ಆಸ್ಟ್ರೇಲಿಯಾ ತಂಡ ಇದೇ ವೇಳೆ ಏಕ ದಿನ ಮಾದರಿಯಲ್ಲಿ ಒಂದು ವಿಶಿಷ್ಟ ದಾಖಲೆಯನ್ನು ಮಾಡಿದೆ.
ವಿಶಾಖಪಟ್ಟಣದ ವೈ.ಎಸ್.ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 26 ಓವರ್ಗಳಲ್ಲಿ 117 ರನ್ಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 11 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 121 ರನ್ ಬಾರಿಸಿ ವಿಜಯ ಸಾಧಿಸಿದೆ. ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್ಗಳಾದ ಮಿಚೆಲ್ ಮಾರ್ಷ್ (ಅಜೇಯ 66) ಹಾಗೂ ಟ್ರಾವಿಡ್ ಹೆಡ್ (ಅಜೇಯ 51) ವಿಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 66 ಎಸೆತಗಳಲ್ಲಿ (11 ಓವರ್) ವಿಕೆಟ್ ನಷ್ಟವಿಲ್ಲದೆ ಭಾರತ ತಂಡ ನೀಡಿದ್ದ 118 ರನ್ಗಳ ಗುರಿ ಬೆನ್ನಟ್ಟಿದೆ. ಇದು ಏಕ ದಿನ ಪಂದ್ಯವೊಂದರಲ್ಲಿ ಆಸ್ಟ್ರೇಲಿಯಾ ತಂಡದ ದಾಖಲಿಸಿದ ಅತ್ಯುತ್ತಮ ಗೆಲುವು.
ಅಂದ ಹಾಗೆ ಆಸೀಸ್ ಬಳಗ ತವರು ನೆಲದಲ್ಲಿ ಇದಕ್ಕಿಂತಲೂ ಕಡಿಮೆ ಓವರ್ಗಳಲ್ಲಿ ಏಕ ದಿನ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. 2013ರಲ್ಲಿ ಪರ್ತ್ನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಆಸ್ಟ್ರೇಲಿಯಾ ತಂಡ 9.2 ಓವರ್ಗಳಲ್ಲಿ ಚೇಸ್ ಮಾಡಿ ಗೆಲುವು ಸಾಧಿಸಿತ್ತು. ಆ ಪಂದ್ಯದಲ್ಲಿ ಆಸೀಸ್ 1 ವಿಕೆಟ್ಗೆ 71 ರನ್ ಗಳಿಸಿತ್ತು. ಇಲ್ಲಿ ಆಸ್ಟ್ರೇಲಿಯಾ ತಂಡ ಒಂದು ವಿಕೆಟ್ ನಷ್ಟ ಮಾಡಿಕೊಂಡಿತ್ತು. ಅದಕ್ಕಿಂತ ಮೊದಲು 2003ರಲ್ಲಿ ಸಿಡ್ನಿಯಲ್ಲಿ ಇಂಗ್ಲೆಂಡ್ ತಂಡ ನೀಡಿದ್ದ 118 ರನ್ಗಳ ಗುರಿಯನ್ನು ಮೀರಿತ್ತು. ಇಲ್ಲಿ ವಿಕೆಟ್ ನಷ್ಟವಾಗಿರಲಿಲ್ಲ. ಆದರೆ, 12.2 ಓವರ್ಗಳನ್ನು ತೆಗೆದುಕೊಂಡಿತ್ತು.
ಭಾರತದ ಬ್ಯಾಟಿಂಗ್ ವೈಫಲ್ಯ
ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ನಾಯಕತ್ವ ವಹಿಸಿಕೊಂಡರು. ಆದರೆ ಅವರ ಆಗಮನ ತಂಡಕ್ಕೆ ಯಾವುದೇ ಪ್ರಯೋಜನಾಗಲಿಲ್ಲ ಅವರು 13 ರನ್ಗೆ ಆಟ ಮುಗಿಸಿದರು. ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿಯೂ ಶೂನ್ಯಕ್ಕೆ ಔಟಾಗುವ ಮೂಲಕ ಘೋರ ವೈಫಲ್ಯ ಕಂಡರು. ಮೊದಲ ಪಂದ್ಯದಲ್ಲಿಯೂ ಅವರು ಸ್ಟಾರ್ಕ್ ಎಸೆತಕ್ಕೆ ಶೂನ್ಯ ಸುತ್ತಿದ್ದರು.
ಮುಂಬಯಿ ಪಂದ್ಯದ ಗೆಲುವಿನ ಹೀರೋ ಕೆ.ಎಲ್. ರಾಹುಲ್(9) ಕೂಡ ಈ ಪಂದ್ಯದಲ್ಲಿ ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲರಾದರು. ವಿರಾಟ್ ಕೊಹ್ಲಿ 31 ರನ್ ಗಳಿಸಿದರು. ಅಂತಿಮವಾಗಿ ಅಕ್ಷರ್ ಪಟೇಲ್ ಅವರು ನಡೆಸಿದ ಹೋರಾಟದಿಂದಾಗಿ ಭಾರತ 100 ಗಡಿ ದಾಟಿತು. ಅಕ್ಷರ್ ಪಟೇಲ್ ಅಜೇಯ 29 ರನ್ ಬಾರಿಸಿದರು. ಇವರಿಗೆ ಒಬ್ಬ ಆಟಗಾರ ಸಾಥ್ ನೀಡುತ್ತಿದ್ದರೂ ಭಾರತ 150 ಗಡಿ ದಾಟುತ್ತಿತ್ತು.
ಇದನ್ನೂ ಓದಿ : WTC 2023 Final: ಓವಲ್ ಕದನಕ್ಕೆ ಕಾಯುತ್ತಿದ್ದೇವೆ; ಫೈನಲ್ಗೂ ಮುನ್ನವೇ ರೋಹಿತ್ ಪಡೆಗೆ ಎಚ್ಚರಿಕೆ ನೀಡಿದ ಸ್ಮಿತ್
ಮಿಚೆಲ್ ಸ್ಟಾರ್ಕ್ ಮತ್ತು ಸೀನ್ ಅಬೋಟ್ ಅವರು ಸೇರಿಕೊಂಡು ಭಾರತದ ಬ್ಯಾಟರ್ಗಳಿಗೆ ಪೆವಿಲಿಯನ್ ದಾರಿ ತೋರಿಸುವಲ್ಲಿ ಯಶಸ್ಸು ಕಂಡರು. ಅದರಲ್ಲಿಯೂ ಸ್ಟಾರ್ಕ್ ಅವರ ದಾಳಿ ತುಂಬಾನೆ ಘಾತಕವಾಗಿತ್ತು. ಆರಂಭಿಕ ನಾಲ್ಕು ವಿಕೆಟ್ ಕೀಳುವ ಮೂಲಕ ಭಾರತಕ್ಕೆ ಆರಂಭಿಕ ಆಘಾತವಿಕ್ಕಿದರು. 8 ಓವರ್ ಎಸೆದ ಅವರು ಒಂದು ಮೇಡನ್ ಸಹಿತ 53 ರನ್ ವೆಚ್ಚದಲ್ಲಿ 5 ವಿಕೆಟ್ ಕಿತ್ತು ಮಿಂಚಿದರು. ಸೀನ್ ಅಬೋಟ್ 3 ವಿಕೆಟ್ ಕಿತ್ತರು.
ಮಿಚೆಲ್ ಸ್ಟಾರ್ಕ್ ಅವರ ಸ್ವಿಂಗ್ ದಾಳಿಗೆ ತತ್ತರಿಸಿದ ಭಾರತ(IND VS AUS) ತಂಡ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಕೇವಲ 117 ರನ್ಗೆ ಕುಸಿತ ಕಂಡಿದೆ. ಇದು ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗಳಿಸಿದ ಅತಿ ಕಡಿಮೆ ಮೊತ್ತವಾಗಿದೆ. ಆದರೆ 1981ರಲ್ಲಿ ಸಿಡ್ನಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತ 63 ರನ್ಗೆ ಆಲೌಟ್ ಆದ ಸಂಕಟಕ್ಕೆ ಸಿಲುಕಿತ್ತು.