Site icon Vistara News

ಪಿಸಿಬಿಗೆ ಚಳ್ಳೆ ಹಣ್ಣು ತಿನ್ನಿಸಿ ಬಿರಿಯಾನಿ, ಕಬಾಬ್​ ತಿಂದ ಪಾಕ್ ಆಟಗಾರರು; ಆದರೂ ಸಿಕ್ಕಿಬಿದ್ದರು

Pakistan Team

ಕರಾಚಿ: ಪ್ರಸಕ್ತ ಸಾಗುತ್ತಿರುವ ಏಕದಿನ ವಿಶ್ವಕಪ್​ನಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಪಾಕ್‌(Pakistan Team) ಆಟಗಾರರು ಫಿಟ್‌ನೆಸ್‌ ಕಾಯ್ದುಕೊಳ್ಳಲು ತಮ್ಮ ಪ್ರೀತಿಯ ಬಿರಿಯಾನಿ ತ್ಯಜಿಸಬೇಕು, ಅದರ ಬದಲಿಗೆ ಮೆಡಿಟರೇನಿಯನ್ ಕಬಾಬ್​​ಗಳು (Mediterranean Kebabs), ಮೊಟ್ಟೆಗಳು ಮತ್ತು ಪ್ರೋಟೀನ್‌ಯುಕ್ತ ಆಹಾರವನ್ನು ಮಾತ್ರ ಸೇವಿಸಬೇಕು ಎಂದು ಆಟಗಾರರಿಗೆ ಪಾಕ್​ ಕ್ರಿಕೆಟ್​ ಮಂಡಳಿ ಖಡಕ್​ ಸೂಚನೆ ನೀಡಿತ್ತು. ಆದರೆ ಪಾಕ್​ ಆಟಗಾರರು ತಮ್ಮ ಕ್ರಿಕೆಟ್​ ಮಂಡಳಿಗೆ ಚಳ್ಳೆ ಹಣ್ಣು ತಿನ್ನಿಸಿ, ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ ಕೋಲ್ಕತ್ತಾದ ಪ್ರಸಿದ್ಧ ಝಮ್‌ ಝಮ್‌ ಬಿರಿಯಾನಿ ತಿಂದು ತೇಗಿದ್ದಾರೆ. ಆದರೆ ಕೊನೆಗೂ ಸಿಕ್ಕಿಬಿದ್ದಿದ್ದಾರೆ.

ಆನ್​ಲೈನ್​ ಮೂಲಕ ಆರ್ಡರ್​

ಫಿಟ್​ನೆಸ್​ ಕಾಳಜಿಯನ್ನು ಗಂಭೀರವಾಗಿ ಪಾಲಿಸುವ ಸಲುವಾಗಿ ಪಾಕ್​ ಕ್ರಿಕೆಟ್​ ಮಂಡಳಿ ವಿಶ್ವಕಪ್ ಪಂದ್ಯಗಳು ಮುಗಿಯುವ ತನಕ ಪಾಕ್​ ಆಟಗಾರರಿಗೆ ಹೊಸ ಆಹಾರದ ಚಾರ್ಟ್​ ಪ್ರಕಟಿಸಿ ಇದನ್ನು ಚಾಚು ತಪ್ಪದೆ ಪಾಲಿಸಿ ಎಂದು ಆದೇಶಿಸಿತ್ತು. ಬೆಳಗಿನ ಉಪಾಹಾರದಲ್ಲಿ, ಹೆಚ್ಚಾಗಿ ಮೊಟ್ಟೆಗಳು ಮತ್ತು ಪ್ರೋಟೀನ್​ಗಳನ್ನು ನೀಡುವಂತೆ ಪಾಕ್​ ತಂಡ ತಂಗಿದ್ದ ಕೋಲ್ಕತಾ ಹೋಟೆಲ್​ನ ಬಾಣಸಿಗರಿಗೆ ತಿಳಿಸಿತ್ತು. ಹೀಗಾಗಿ ಹೊಟೇಲ್​ನ ಬಾಣಸಿಗರು ಪಾಕ್ ಆಟಗಾರರಿಗೆ ಬಿರಿಯಾನಿಯನ್ನು ಹೊರತುಪಡಿಸಿ ಉಳಿದ ಆಹಾರವನ್ನು ತಯಾರು ಮಾಡಿದ್ದರು. ಆದರೆ ಬಿರಿಯಾನಿಯ ರುಚಿ ಬಿಡದ ಪಾಕ್​ ಆಟಗಾರು ತಮ್ಮ ಆನ್​ಲೈನ್​ ಮೂಲಕ ಬಿರಿಯಾನಿ ತಂದು ತಿಂದಿದ್ದಾರೆ.

ಇದನ್ನೂ ಓದಿ PAK vs SA: ಅಂಪೈರ್ಸ್ ಕಾಲ್ ವಿಚಾರದಲ್ಲಿ ಕಿತ್ತಾಟ ನಡೆಸಿದ ಹರ್ಭಜನ್‌-ಸ್ಮಿತ್‌; ಪೋಸ್ಟ್‌ ವೈರಲ್‌

ಪಾಕ್​ ಬಿರಿಯಾನಿ ರಹಸ್ಯ ಬಿಚ್ಚಿಟ್ಟ ರೆಸ್ಟೋರೆಂಟ್‌ ನಿರ್ದೇಶಕ

ಪಾಕಿಸ್ತಾನದ ಆಟಗಾರರು ಕದ್ದು ಮುಚ್ಚಿ ಬಿರಿಯಾನಿ ತಿಂದ ವಿಚಾರವನ್ನು ಕೋಲ್ಕತ್ತಾದ ಪ್ರಸಿದ್ಧ ಝಮ್ ಝಮ್ ರೆಸ್ಟೋರೆಂಟ್​ನ ನಿರ್ದೇಶಕ ಶಾದ್ಮನ್ ಫೈಜ್ ರಿವೀಲ್​ ಮಾಡಿದ್ದಾರೆ. ಪಾಕ್​ ಆಟಗಾರರು ನಮ್ಮ ರೆಸ್ಟೋರೆಂಟ್​ನಿಂದ ಬಿರಿಯಾನಿ (Zam Zam Biriyani), ಕಬಾಬ್‌ ಹಾಗೂ ಚಾಪ್ಸ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್‌ಮಾಡಿ ತರಿಸಿಕೊಂಡು ಸವಿದಿದ್ದಾರೆ. ಮೊದಲು ಇದು ಪಾಕ್‌ ತಂಡದಿಂದ ಬಂದ ಆರ್ಡರ್‌ ಎಂದು ನಮಗೆ ತಿಳಿಯಲಿಲ್ಲ. ಈ ವಿಚಾರ ಸ್ವಲ್ಪ ತಡವಾಗಿ ಗೊತ್ತಾಗಿದೆ. ಇಡೀ ವಿಶ್ವದಲ್ಲೇ ಮನಸೋತ ಕೋಲ್ಕತ್ತಾದ ನಮ್ಮ ಝಮ್‌ ಝಮ್‌ ಬಿರಿಯಾನಿಗೆ ಪಾಕ್​ ಆಟಗಾರರು ಮನಸೋತಿದ್ದಾರೆ ಎಂದು ಹೇಳಿದ್ದಾರೆ.

ಪಾಕ್​ ಆಟಗಾರರಿಗೆ ಬಿರಿಯಾನಿಯನ್ನು ತಿನ್ನಬಾರದೆಂದು ಪಾಕ್​ ಕ್ರಿಕೆಟ್​ ಮಂಡಳಿ ಹಾಕಿರುವ ಷರತ್ತುಗಳ ಬಗ್ಗೆ ಈ ರೆಸ್ಟೋರೆಂಟ್​ನ ನಿರ್ದೇಶಕರಿಗೆ ತಿಳಿದಿರಲಿಲ್ಲ. ಅವರು ತಮ್ಮ ರೆಸ್ಟೋರೆಂಟ್​ನ ಬಿರಿಯಾನಿಗೆ ಪಾಕ್​ ಆಟಗಾರರು ಕೂಡ ಮನಸೋತಿದ್ದಾರಲ್ಲಾ ಎಂಬ ಸಂತಸದಲ್ಲಿ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಆದರೆ ಅವರ ಈ ಪೋಸ್ಟ್​ ಪಾಕ್​ ಆಟಗಾರರಿಗೆ ಮುಳುವಾಗಿದೆ. ಕದ್ದು ಮುಚ್ಚಿ ಬಿರಿಯಾನಿ ತಿಂದ ವಿಚಾರ ಪಾಕ್​ ಮಂಡಳಿಗೆ ತಿಳಿದಿದೆ. ಸದ್ಯ ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಪಾಕ್​ ಸೋತರೆ, ಸೋಲಿಗೆ ಬಿರಿಯಾನಿಯೇ ಕಾರಣ ಎಂದು ಆಟಗಾರರ ವಿರುದ್ಧ ಪಿಸಿಬಿ ಶಿಸ್ತು ಕ್ರಮ ಕೈಗೊಳ್ಳಬಹುದು.

ಇದನ್ನೂ ಓದಿ Pakistan Cricket Team : ಸೋಲಿಗೆ ಶಿಕ್ಷೆ; ಪಾಕ್​ ಆಟಗಾರರಿಗೆ ಇನ್ನುಮುಂದೆ ಬಿರಿಯಾನಿ ಬಂದ್​!

ಹೈದರಾಬಾದ್ ಬಿರಿಯಾನಿಗೆ ಮನಸೋತಿದ್ದ ಪಾಕ್​ ಆಟಗಾರರು

ವಿಶ್ವಕಪ್​ ಆಡಲು ಭಾರತಕ್ಕೆ ಬಂದ ಪಾಕಿಸ್ತಾನ ಆಟಗಾರರು ಆರಂಭದಲ್ಲಿ ಹೈದರಾಬಾದ್​ನಲ್ಲಿ ನೆಲೆಸಿದ್ದರು. ಇಲ್ಲಿ ಮೂರು ಹೊತ್ತು ಕೂಡ ಬಿರಿಯಾನಿ ಸವಿದಿದ್ದರು. ಅಲ್ಲದೆ ಹೈದರಾಬಾದ್​ನಂತಹ ರುಚಿಯಾದ ಬಿರಿಯಾನಿ ತಮ್ಮ ಕರಾಚಿಯಲ್ಲಿಯೂ ಸಿಗುವುದಿಲ್ಲ ಎಂದು ಐಸಿಸಿಯ ವಿಡಿಯೊದಲ್ಲಿ ತಿಳಿಸಿದ್ದರು.

ನಾಯಕ ಬಾಬರ್​ ಅಜಂ, ಫಖಾರ್​ ಜಮಾನ್, ಹಸನ್​ ಅಲಿ​ ಸೇರಿ ಕೆಲವರು ಹಿಂದೆಂದೂ ಈ ರೀತಿಯ ಬಿರಿಯಾನಿ ತಿಂದಿಲ್ಲ. ನಮ್ಮ ದೇಶದ ಕರಾಚಿ ಬಿರಿಯಾನಿಗಿಂತ ಹೈದರಾಬಾದ್ ಬಿರಿಯಾನಿ ಸೂಪರ್​ ಆಗಿದೆ ಎಂದು ಹೇಳಿದ್ದಾರೆ. ಅಲ್ಲದೆ 20ಕ್ಕೆ 20 ಅಂಕವನ್ನು ನೀಡಿದ್ದರು. ಅಲ್ಲದೆ ರುಚಿಯಾದ ಬಿರಿಯಾನಿ ತಿಂದು ಪೀಲ್ಡಿಂಗ್​ ನಡೆಸಲು ಕೂಡ ಕಷ್ಟವಾಯಿತು ಎಂದು ಶಾದಾಬ್‌ ಖಾನ್‌ ಅವರು ಹರ್ಷಾ ಬೋಗ್ಲೆ ಜತೆ ಹೇಳಿದ್ದರು. 

Exit mobile version