Site icon Vistara News

Aus vs Pak : ಪಾಕ್​ ತಂಡವನ್ನು ಹೀನಾಯವಾಗಿ ಸೋಲಿಸಿದ ಆಸ್ಟ್ರೇಲಿಯಾ

Australia Cricket team

ಬೆಂಗಳೂರು: ಪಾಕಿಸ್ತಾನ ತಂಡಕ್ಕೆ ವಿಶ್ವ ಕಪ್​ನಲ್ಲಿ (ICC World Cup 2023) ಮತ್ತೊಂದು ಕಹಿ ಅನುಭವ ಉಂಟಾಗಿದೆ. ಆಸ್ಟ್ರೇಲಿಯಾ (Aus vs Pak) ವಿರುದ್ಧದ ತನ್ನ ಪಂದ್ಯದಲ್ಲಿ 62 ರನ್​ಗಳ ಹೀನಾಯ ಸೋಲಿಗೆ ಒಳಗಾಗಿದೆ. ಈ ಮೂಲಕ ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಎರಡು ಸೋಲು ಕಂಡಿದೆ. ಇದಕ್ಕಿಂತ ಹಿಂದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತ ವಿರುದ್ಧ 7 ವಿಕೆಟ್​ ಅವಮಾನಕರ ಸೋಲಿಗೆ ತುತ್ತಾಗಿತ್ತು. ಏತನ್ಮಧ್ಯೆ ಆಸ್ಟ್ರೇಲಿಯಾ ತಂಡ ಮೊದಲೆರಡು ಸೋಲಿನ ಬಳಿಕ ಚೇತರಿಸಿಕೊಂಡಿದ್ದು ಸತತ ಎರಡನೇ ವಿಜಯಕ್ಕೆ ಪಾತ್ರವಾಗಿದೆ. ಹಿಂದಿನ ಪಂದ್ಯದಲ್ಲಿ ಲಂಕಾ ವಿರುದ್ಧ ಆಸೀಸ್​ ಬಳಗ ವಿಜಯ ಕಂಡಿತ್ತು.

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ತೇಲಿಯಾ ತಂಡ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್ ಬಾರಿಸಿತ್ತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 45.3 ಓವರ್​ಗಳಲ್ಲಿ 305 ರನ್​ಗಳಿಗೆ ಆಲ್​ಔಟ್ ಆಗಿ ಸೋಲೊಪ್ಪಿಕೊಂಡಿತು. ಈ ಗೆಲುವಿನ ಬಳಿಕ ಆಸ್ಟ್ರೇಲಿಯಾ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದರೆ, ಪಾಕಿಸ್ತಾನ ತಂಡ ಐದನೇ ಸ್ಥಾನಕ್ಕೆ ಕುಸಿಯಿತು.

ದೊಡ್ಡ ಮೊತ್ತವನ್ನು ಬೆನ್ನಟ್ಟಲು ಹೊರಟ ಪಾಕಿಸ್ತಾನ ತಂಡ ಮೊದಲ ವಿಕೆಟ್​ಗೆ 134 ರನ್ ಬಾರಿಸಿ ಪ್ರತಿರೋಧ ಒಡ್ಡಿತು. ಆದರೆ, ನಾಯಕ ಬಾಬರ್ ಅಜಂ (18) ಸೇರಿದಂತೆ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯದಿಂದಾಗಿ ಸೋಲಿಗೆ ಒಳಗಾಯಿತು. ಇನಿಂಗ್ಸ್​ ಆರಂಭಿಸಿದ ಅಬ್ದುಲ್ಲಾ ಶಫಿಕ್​ (64) ಹಾಗೂ ಇಮಾಮ್ ಉಲ್ ಹಕ್ (70) ಅರ್ಧ ಶತಕಗಳನ್ನು ಬಾರಿಸುವ ಮೂಲಕ ವಿಶ್ವಾಸ ಮೂಡಿಸಿದರು. ಈ ಜತೆಯಾಟವನ್ನು ಮಾರ್ಕಸ್ ಸ್ಟೊಯ್ನಿಸ್​ ಮುರಿದರು. ಇಬ್ಬರನ್ನೂ ಅವರು ಔಟ್ ಮಾಡಿದರು. ಬಳಿಕ ಬಾಬರ್​ ಅಜಮ್​ 18 ರನ್ ಬಾರಿಸಿದರೆ, ಮಹಮ್ಮದ್ ರಿಜ್ವಾನ್​ ಸ್ವಲ್ಪ ಹೊತ್ತು ಕ್ರೀಸ್​ನಲ್ಲಿ ನಿಂತು ಆಡಿದರು. ಆದರೆ, ಜಂಪಾ ಎಸೆತಕ್ಕೆ ಔಟಾದರು. ಅವರು 4 ರನ್​ಗಳ ಕೊರತೆಯಿಂದ ಅರ್ಧ ಶತಕದಿಂದ ವಂಚಿತರಾದರು.

ಈ ಸುದ್ದಿಯನ್ನೂ ಓದಿ : ICC World Cup 2023 : ಪಾಕಿಸ್ತಾನದ ಪಂದ್ಯವನ್ನು ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ
ICC World Cup 2023: ಪಾಕ್​ ಅಭಿಮಾನಿಗಳಿಗೂ ಪಾಕಿಸ್ತಾನ ಜಿಂದಾಬಾದ್​ ಹೇಳಲು ಬಿಡದ ಪೊಲೀಸರು​; ಆರೋಪ

ಸೌದ್ ಶಕೀಲ್​ 30 ರನ್ ಬಾರಿಸಿದರೆ, ಇಫ್ತಿಕಾರ್ ಅಹಮದ್ 26 ರನ್ ಕೊಡುಗೆ ಕೊಟ್ಟರು. ಒಂದು ಹಂತದಲ್ಲಿ ಪಾಕಿಸ್ತಾನ ತಂಡ ಗೆಲುವಿನ ಅವಕಾಶವನ್ನು ಸೃಷ್ಟಿ ಮಾಡಿಕೊಂಡಿತ್ತು. ಆದರೆ, ಕೊನೆ ಕೊನೆಯಲ್ಲಿ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದೇ ಸತತವಾಗಿ ವಿಕೆಟ್​ ಒಪ್ಪಿಸಿತು. ಆಸ್ಟ್ರೇಲಿಯಾ ತಂಡದ ಪರವಾಗಿ ಸ್ಪಿನ್ನರ್ ಆ್ಯಡಂ ಜಂಪಾ ಅವರು 53 ರನ್​ಗೆ 4 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪಾತ್ರ ವಹಿಸಿದರು.

ಆಸೀಸ್ ಭರ್ಜರಿ ಬ್ಯಾಟಿಂಗ್​

ಮೊದಲು ಬ್ಯಾಟ್​ ಮಾಡಿದ ಆಸ್ಟ್ತೇಲಿಯಾ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ ಮಳೆಯನ್ನು ಸುರಿಸಿತು. ಡೇವಿಡ್ ವಾರ್ನರ್ ಹಾಗೂ ಶಾನ್​ ಮಾರ್ಷ್​ ಮೊದಲ ವಿಕೆಟ್​ಗೆ 259 ರನ್ ಬಾರಿಸಿ ಮಿಂಚಿದರು. ಇದು ಆಸ್ಟ್ರೇಲಿಯಾ ತಂಡದ ಪರ ವಿಶ್ವ ಕಪ್​ನಲ್ಲಿ ದಾಖಲಾಗಿರುವ ಗರಿಷ್ಠ ಮೊತ್ತದ ಆರಂಭಿಕ ಜತೆಯಾಟವಾಗಿದೆ. ಆದರೆ ಇವರಿಬ್ಬರು ಔಟಾದ ಬಳಿಕ ಆಸ್ಟ್ರೇಲಿಯಾ ತಂಡದ ಬ್ಯಾಟರ್​ಗಳು ಉತ್ತಮವಾಗಿ ಆಡಲಿಲ್ಲ. ನಿರಂತರವಾಗಿ ವಿಕೆಟ್​ ಕಳೆದುಕೊಂಡಿತು. ಸ್ಟೊಯ್ನಿಸ್​ 21 ಹಾಗೂ ಜೋಶ್ ಇಂಗ್ಲಿಷ್​ 13 ರನ್ ಬಾರಿಸಿದ್ದೇ ಗರಿಷ್ಠವಾಗಿತ್ತು. ಪಾಕಿಸ್ತಾನ ಬೌಲಿಂಗ್ ಪರ ಶಹೀನ್ ಶಾ ಅಫ್ರಿದಿ 54 ರನ್​ಗಳಿಗೆ 5 ವಿಕೆಟ್ ಮಿಂಚಿದರು.

Exit mobile version