ಬೆಂಗಳೂರು: ಆರ್‌ಸಿಬಿ ತಂಡದ ಆಲ್ರೌಂಡರ್, ಆಸೀಸ್ ತಂಡದ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ತಂದೆಯಾಗುವ ಖುಷಿಯಲ್ಲಿದ್ದಾರೆ. ಈ ವಿಚಾರವನ್ನು ಅವರ ಪತ್ನಿ, ಭಾರತ ಮೂಲದ ವಿನಿ ರಾಮನ್ ಅವರು ಗುರುವಾರ ಖಚಿತಪಡಿಸಿದ್ದಾರೆ.
ಬಹುಕಾಲದಿಂದ ಡೇಡಿಂಗ್ ನಡೆಸುತ್ತಿದ್ದ ಈ ಜೋಡಿ ಫೆಬ್ರವರಿ 2020ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬಳಿಕ 2022ರ ಮಾರ್ಚ್ನಲ್ಲಿ ಹಸೆಮಣೆ ಏರಿದ್ದರು. ಫಾರ್ಮಸಿಸ್ಟ್ ಆಗಿರುವ ವಿನಿ ರಾಮನ್ ಅವರು ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ನೆಲೆಸಿದ್ದಾರೆ. ಅವರು ಭಾರತೀಯ ತಮಿಳು ಕುಟುಂಬಕ್ಕೆ ಸೇರಿದವರು. ಇದೀಗ ಅವರು ತಾಯಿಯಾಗುವ ಸಂತಸದಲ್ಲಿದ್ದಾರೆ.
ಮಗುವಿಗೆ ಧರಿಸುವ ಸಣ್ಣದಾದ ಬಟ್ಟೆಯನ್ನು ಪೋಸ್ಟ್ ಮಾಡುವ ಮೂಲಕ ವಿನಿ ರಾಮನ್ ಅವರು ತಾಯಿಯಾಗುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಜತೆಗೆ ಭಾವನಾತ್ಮ ಸಂದೇಶವೊಂದನ್ನು ಬರೆದಿದ್ದಾರೆ. “ನೀವು ಯಾವಾಗ ತಾಯಿಯಾಗುತ್ತೀರಾ, ನಿಮಗೆ ಮಕ್ಕಳಿಲ್ಲವಾ ಎಂದು ಕೇಳುವ ಮಾತುಗಳು ಮತ್ತು ಸಂದೇಶಗಳು ಎಷ್ಟು ನೋವಿನಿಂದ ಕೂಡಿದೆ ಎಂದು ನನಗೆ ತಿಳಿದಿದೆ. ಈ ನೋವನ್ನು ಎದರಿಸುತ್ತಿರುವ ಹಲವು ದಂಪತಿಗಳಿಗೆ ನಾವು ನಮ್ಮ ಪ್ರೀತಿ ಮತ್ತು ಶಕ್ತಿಯನ್ನು ಕಳುಹಿಸುತ್ತೇವೆ” ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ IPL 2023: ಧೋನಿ ಕಾಲಿಗೆ ಏನಾಗಿದೆ; ಇರ್ಫಾನ್ ಪಠಾಣ್ ಬಹಿರಂಗ ಪಡಿಸಿದ ಸತ್ಯವೇನು?
34 ವರ್ಷದ ಮ್ಯಾಕ್ಸ್‌ವೆಲ್ ಐಪಿಎಲ್ನಲ್ಲಿ ಆರ್‌ಸಿಬಿ ಪರ ಆಡುತ್ತಿದ್ದು ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಸದ್ಯ ಅವರು 16ನೇ ಆವೃತ್ತಿಯಲ್ಲಿ 11 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 186.44 ರ ಸ್ಟ್ರೈಕ್ ರೇಟ್‌ನಲ್ಲಿ 4 ಅರ್ಧಶತಕಗಳೊಂದಿಗೆ 330 ರನ್ ಗಳಿಸಿದ್ದಾರೆ. ಒಟ್ಟಾರೆ ಅವರು ಐಪಿಎಲ್ ವೃತ್ತಿಜೀವನದಲ್ಲಿ, 2,649 ರನ್ ಗಳಿಸಿದ್ದಾರೆ. ಆರ್‌ಸಿಬಿ ಪ್ಲೇ ಆಫ್ ಹಂತಕ್ಕೇರಬೇಕಾದರೆ ಮುಂದಿನ ಮೂರು ಪಂದ್ಯಗಳನ್ನು ಗೆಲ್ಲಬೇಕಿದೆ.