ಸಿಡ್ನಿ: ಭಾರತದ ಸ್ಟಾರ್ ಶಟ್ಲರ್ ಎಚ್.ಎಸ್. ಪ್ರಣಯ್(HS Prannoy) ಅವರು ಆಸ್ಟ್ರೇಲಿಯನ್ ಓಪನ್(Australian Open) ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ(Australian Open Super 500 badminton) ಫೈನಲ್ ತಲುಪಿದ್ದಾರೆ. ಈ ಮೂಲಕ ಭಾರತಕ್ಕೆ ಪದಕವೊಂದನ್ನು ಖಾತ್ರಿ ಪಡಿಸಿದ್ದಾರೆ. ಶನಿವಾರ ನಡೆದ ಆಲ್ ಇಂಡಿಯನ್ ಸೆಮಿಫೈನಲ್ ಹೋರಾಟದಲ್ಲಿ ಪ್ರಿಯಾಂಶು ರಾಜಾವತ್(Priyanshu Rajawat) ಅವರನ್ನು ಮಣಿಸಿ ಪ್ರಶಸ್ತಿ ಸುತ್ತಿಗೇರಿದರು.
ಮಲೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್(Malaysia Masters) ಚಾಂಪಿಯನ್ ಆಗಿರುವ ಅನುಭವಿ ಪ್ರಣಯ್(Prannoy HS vs H. Weng) ಅವರ ಸವಾಲನ್ನು ಎದುರಿಸಲಾಗಿದೆ 21 ವರ್ಷದ ಪ್ರಿಯಾಂಶು ರಾಜಾವತ್ 21-18 21-12 ನೇರ ಗೇಮ್ಗಳಿಂದ ಪರಾಭವಗೊಂಡರು. ಉಭಯ ಆಟಗಾರರ ನಡುವಿನ ದ್ವಿತೀಯ ಮುಖಾಮುಖಿ ಇದಾಗಿತ್ತು. 2022ರ ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ಪಂದ್ಯಾವಳಿಯಲ್ಲಿ ಇವರಿಬ್ಬರು ಎದುರಾಗಿದ್ದರು. ಇಲ್ಲಿ ಪ್ರಣಯ್ ಗೆಲುವು ಸಾಧಿಸಿದ್ದರು. ಇದೀಗ ಮತ್ತೊಂದು ಮುಖಾಮುಖಿಯಲ್ಲಿಯೂ ಪ್ರಣಯ್ ಗೆಲುವು ಸಾಧಿಸಿ ಅಜೇಯ ದಾಖಲೆ ಮುಂದುವರಿಸಿದ್ದಾರೆ.
ಭಾನುವಾರ ನಡೆಯುವ ಫೈನಲ್ನಲ್ಲಿ ಪ್ರಣಯ್ ಚೀನಾದ 24 ವರ್ಷದ ವೆಂಗ್ ಹಾಂಗ್ ಯಾಂಗ್ ಅವರ ಸವಾಲು(Prannoy HS vs H. Weng) ಎದುರಿಸಲಿದ್ದಾರೆ. ಗೆದ್ದರೆ ಈ ವರ್ಷದ ಎರಡನೇ ಪ್ರಶಸ್ತಿಗೆ ಪ್ರಣಯ್ ಕೊರಳೊಡ್ಡಲಿದ್ದಾರೆ. ಇದೇ ವರ್ಷದ ಮೇ ಯಲ್ಲಿ ನಡೆದಿದ್ದ ಮಲೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್(Malaysia Masters) ಟೂರ್ನಿಯಲ್ಲಿ ಪ್ರಣಯ್ ಚಿನ್ನದ ಪದಕ ಗೆದ್ದಿದ್ದರು.
ಪ್ರಣಯ್ ಅವರು 2017ರ ಯುಎಸ್ ಓಪನ್ ಗ್ರ್ಯಾನ್‌ಪ್ರಿ ಚಿನ್ನದ ಪದಕ ಗೆದ್ದ ಬಳಿಕ ಪ್ರಶಸ್ತಿಯ ಬರಗಾಲದಲ್ಲಿದ್ದರು. ಕಳೆದ ವರ್ಷ ಸ್ವಿಸ್ ಓಪನ್ ಫೈನಲ್ ಪ್ರವೇಶಿಸಿದರೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾಗಿದ್ದರು. ಬಳಿಕ ಮಲೇಷ್ಯಾ ಮತ್ತು ಸಿಂಗಾಪುರ್-1000 ಕೂಟದ ಸೆಮಿಫೈನಲ್‌ನಲ್ಲೇ ಮುಗ್ಗರಿಸಿದ್ದರು. ಇದೆಲ್ಲ ಸೋಲಿಗೂ ಮಲೇಷ್ಯಾ ಮಾಸ್ಟರ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಮತ್ತೆ ಆತ್ಮವಿಶ್ವಾಸ ಹೆಚ್ಚಿಕೊಂಡ ಇವರು ಇದೀಗ ಮತ್ತೊಂದು ಟೂರ್ನಿಯಲ್ಲಿಯೂ ಪ್ರಶಸ್ತಿ ಸುತ್ತಿಗೆ ನೆಗೆದ ಸಾಧನೆ ಮಾಡಿದ್ದಾರೆ. ಈ ಸಾಧನೆಯೊಂದಿಗೆ ಮುಂದಿನ ವರ್ಷ ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಬರವಸೆಯೊಂದನ್ನು ಮೂಡಿಸಿದ್ದಾರೆ.
ಇದನ್ನೂ ಓದಿ Australian Open: ಸಿಂಧುಗೆ ಸೋಲು; ಸೆಮಿಫೈನಲ್ ತಲುಪಿದ ಪ್ರಣಯ್,ಪ್ರಿಯಾಂಶು
ಶುಕ್ರವಾರ ನಡೆದಿದ್ದ ಕ್ವಾರ್ಟರ್ ಫೈನಲ್ನಲ್ಲಿ ಪ್ರಣಯ್ ಭಾರಿ ಹೋರಾಟ ನಡೆಸಿ ಇಂಡೋನೇಷ್ಯನ್ ಆಟಗಾರ ಆ್ಯಂಟನಿ ಸಿನಿಸುಕ ಗಿಂಟಿಂಗ್ ಅವರಿಗೆ 16-21, 21-17, 21-14ರಿಂದ ಸೋಲುಣಿಸಿದ್ದರು. ಪ್ರಿಯಾಂಶು ರಾಜಾವತ್ ಅವರು ಭಾರತದವರೇ ಆದ ಕೆ. ಶ್ರೀಕಾಂತ್ ಅವರನ್ನು 21-13, 21-8 ಅಂರತದಿಂದ ಮಣಿಸಿದ್ದರು.