ನವದೆಹಲಿ: ವಿದಾದಗಳಿಂದಾಗಿ ಹಲವು ಬಾರಿ ಮುಂದೂಡಲ್ಪಟ್ಟಿದ್ದ ಭಾರತ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್ಐ) ಚುನಾವಣೆ(WFI Elections) ಡಿ. 21ರಂದು ನಡೆಯಲಿದೆ. ಫಲಿತಾಂಶ ಕೂಡ ಅದೇ ದಿನ ಪ್ರಕಟಗೊಳ್ಳಲಿದೆ ಎಂದು ಸಂಸ್ಥೆಯ ಚುನಾವಣಾಧಿಕಾರಿ ಈಗಾಲೇ ಪ್ರಕಟಿಸಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್(Brij Bhushan Sharan Singh) ಅವರ ಆಪ್ತರಾದ ಸಂಜಯ್ ಸಿಂಗ್ ಅವರಿಗೆ ಸ್ಪರ್ಧಿಸಲು ಅವಕಾಶ ನೀಡದಂತೆ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ(bajrang punia) ಮತ್ತು ಸಾಕ್ಷಿ ಮಲಿಕ್(sakshi malik) ಅವರು ಸೋಮವಾರ ಸಂಜೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬ್ರಿಜ್ ಭೂಷಣ್ ಅವರಿಗೆ ನಿಷ್ಠರಾಗಿರುವ ಸಂಜಯ್ ಸಿಂಗ್ ಮತ್ತು 2010ರ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನಿತಾ ಶೆರಾಣ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ. ಈ ಹಿಂದೆ ಬಜರಂಗ್ ಪೂನಿಯಾ,ಸಾಕ್ಷಿ ಮಲಿಕ್ ಸೇರಿ ಕೆಲ ಕುಸ್ತಿಪಟುಗಳು ಬ್ರಿಜ್ ಭೂಷಣ್ ಅವರ ವಿರುದ್ಧ ಲೈಗಿಂಕ ಕಿರುಕುಳದ ಆರೋಪ ಮಾಡಿ ದೆಹಲಿಯಲ್ಲಿ ಹಲವು ತಿಂಗಳುಗಳ ಕಾಲ ಪ್ರತಿಭಟನೆ ಮಾಡಿದ್ದರು. ಅವರನ್ನು ಈ ಹುದ್ದೆಯಿಂದ ಕೆಳಗಿಳಿಸಿ ಅವರಿಗೆ ಶಿಕ್ಷೆ ವಿಧಿಸಬೇಕು ಎನ್ನುವುದು ಕುಸ್ತಿಪಟುಗಳ ಬೇಡಿಕೆಯಾಗಿತ್ತು. ಈ ಪ್ರತಿಭಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸುದ್ದು ಮಾಡಿತ್ತು. ಬಳಿಕ ಕುಸ್ತಿಪಟುಗಳ ಬೇಡಿಕೆಯಂತೆ ಕೇಂದ್ರ ಕ್ರೀಡಾ ಸಚಿವಾಲಯ ಬ್ರಿಜ್ ಭೂಷಣ್ ಅವರನ್ನು ಈ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಹೀಗಾಗಿ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದರು.
ಪ್ರತಿಭಟನೆಯನ್ನು ಹಿಂಪಡೆದರೂ ಕುಸ್ತಿಪಟುಗಳು ಅಧ್ಯಕ್ಷ ಸ್ಥಾನಕ್ಕೆ ಬ್ರಿಜ್ ಭೂಷಣ್ ಆಪ್ತರು ಸ್ಪರ್ಧಿಸಬಾರದು ಎಂದು ಬೇಡಿಕೆ ಇರಿಸಿದ್ದರು. ಆದರೆ ಈಗ ಅವರಿಗೆ ನಿಷ್ಠರಾಗಿರುವ ಸಂಜಯ್ ಸಿಂಗ್ ಕಣದಲ್ಲಿರುವುದು ಕುಸ್ತಿಪಟುಗಳಿಗೆ ಚಿಂತೆಯಾಗಿದೆ. ಒಂದೊಮ್ಮೆ ಸಂಜಯ್ ಅಧ್ಯಕ್ಷರಾದರೆ ಅವರ ಮೂಲಕ ಬ್ರಿಜ್ ಭೂಷಣ್ ತಮ್ಮ ಮೇಲೆ ಪ್ರಭಾವ ಬೀರಬಹುದು ಎನ್ನುವುದು ಕುಸ್ತಿಪಟುಗಳ ವಾದವಾಗಿದೆ. ಆದರೆ ಅನಿತಾ ಶೆರಾಣ್ ಅವರ ಸ್ಪರ್ಧೆಗೆ ನಮ್ಮ ತಕರಾರಿಲ್ಲ ಎಂದು ಹೇಳಿದ್ದಾರೆ.
ಸರ್ವೋಚ್ಚ ನ್ಯಾಯಾಲಯ ಕೆಲವು ದಿನಗಳ ಹಿಂದೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್(Punjab and Haryana High Court) ಚುನಾವಣೆಗೆ ತಡೆಯಾಜ್ಞೆ ನೀಡಿದನ್ನು ತೆರವುಗೊಳಿಸಿತ್ತು. ಹೀಗಾಗಿ ಎಲ್ಲ ವಿಘ್ನಗಳೂ ತೆರವಾಗಿವೆ. ಇದೀಗ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿರುವ ಸರ್ವೋಚ್ಚ ನ್ಯಾಯಾಲಯ ಇನ್ನು ಯಾವುದೇ ಕಾರಣಕ್ಕೂ ಈ ಚುನಾವಣೆ ಮುಂದೂಡಿಕೆ ಕಾಣಬಾರದು ಎಂದು ಖಡಕ್ ಆಗಿ ಎಲ್ಲ ಕುಸ್ತಿ ಅಸೋಸಿಯೇಶನ್ಗೆ ಎಚ್ಚರಿಕೆ ನೀಡಿದೆ. 4ನೇ ಪ್ರಯತ್ನದಲ್ಲಿ ಬುನಾವಣೆ ನಡೆಯುವ ಖಚಿತವಾಗಿದೆ.
ಇದನ್ನೂ ಓದಿ WFI Elections: ಕೊನೆಗೂ ಭಾರತ ಕುಸ್ತಿ ಒಕ್ಕೂಟದ ಚುನಾವಣೆಗೆ ದಿನಾಂಕ ನಿಗದಿ
ಈ ಹಿಂದೆ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿದ್ದ ಬಿಜೆಪಿ ಸಂದಸರೂ ಆಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್(Brij Bhushan Sharan Singh) ಅವರ ವಿರುದ್ಧ ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್, ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್ ಸೇರಿದಂತೆ ಆರು ಅಗ್ರ ಕುಸ್ತಿಪಟುಗಳು ಲೈಂಗಿಕ ಕಿರುಕುಳ ಆರೋಪ ಹೊರಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಸರಿ ಸುಮಾರು 2 ತಿಂಗಳುಕಾಲ ಪ್ರತಿಭಟನೆ ನಡೆಸಿದ್ದರು. ಈ ಕಾರಣದಿಂದ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದಾದ ಬಳಿಕ ನೂತನ ಸಮಿತಿಗೆ ಚುನಾವಣೆ ನಡೆಸಲು ನಿರ್ಧರಿಸಲಾಗಿತ್ತು.
ಜುಲೈ 6ಕ್ಕೆ ಈ ಚುನಾವಣೆಗೆ ದಿನ ನಿಗದಿ ಪಡಿಸಲಾಗಿತ್ತು. ಆದರೆ ಡಬ್ಲ್ಯುಎಫ್ಐಯಿಂದ ಮಾನ್ಯತೆ ಕಳೆದುಕೊಂಡ 5 ರಾಜ್ಯಗಳ ಘಟಕಗಳು ಮತದಾನದ ಹಕ್ಕು ಕೋರಿ ಅಹವಾಲು ಸಲ್ಲಿಸಿದ್ದವು ಇದರಿಂದ ಒಲಿಂಪಿಕ್ ಸಂಸ್ಥೆಯ ಅಡ್ ಹಾಕ್ ಸಮಿತಿ(Indian Olympic Association) ಈ ಚುನಾವಣೆಯನ್ನು ಜುಲೈ 11ಕ್ಕೆ ಮುಂದೂಡಿತ್ತು. ಜುಲೈ 12ರಂದು ಚುನಾವಣೆ ನಡೆಸಬೇಕೆಂದು ಆದೇಶಿಸಿತ್ತು. ಅದರಂತೆ ಚುನಾವಣೆಯಲ್ಲಿ 24 ರಾಜ್ಯ ಸಂಸ್ಥೆಗಳ 48 ಪ್ರತಿನಿಧಿಗಳು ಭಾಗವಹಿಸಲು ಸಿದ್ಧತೆ ನಡೆಸಿದ್ದರು. ಡಬ್ಲ್ಯುಎಫ್ಐ ಅಧ್ಯಕ್ಷ, ಉಪಾಧ್ಯಕ್ಷ, ನಾಲ್ಕು ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಇಬ್ಬರು ಜಂಟಿ ಕಾರ್ಯದರ್ಶಿಗಳು ಮತ್ತು ಐದು ಕಾರ್ಯಕಾರಿ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಆದರೆ ಹರಿಯಾಣ ಕುಸ್ತಿ ಅಸೋಸಿಯೇಶನ್ (ಎಚ್‌ಡಬ್ಲ್ಯುಎ) ಸಲ್ಲಿಸಿದ ದೂರಿನ ಆಧಾರದಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್(Punjab and Haryana High Court) ಚುನಾವಣೆಗೆ ತಡೆಯಾಜ್ಞೆ ನೀಡಿತ್ತು. ಹೀಗಾಗಿ ಮೂರನೇ ಬಾರಿಯೂ ಚುನಾವಣೆ ಮುಂದೂಡಿಕೆಯಾಗಿತ್ತು.