Site icon Vistara News

Bajrang Punia: ಕುಸ್ತಿಪಟು ಬಜರಂಗ ಪುನಿಯಾರಿಂದ ಪದ್ಮಶ್ರೀ ಪ್ರಶಸ್ತಿ ವಾಪಸ್! ಕಾರಣ ಏನು?

Bajrang Punia will returns padma shree award to govt, Why he did so?

ನವದೆಹಲಿ: ಭಾರತದ ಕುಸ್ತಿ ಫೆಡರೇಷನ್‌ (wrestling federation of india) ಅಧ್ಯಕ್ಷ ಸ್ಥಾನಕ್ಕೆ ಬ್ರಿಜ್ ಭೂಷಣ್ ಸಿಂಗ್ (Brij bhushan Singh) ಅವರ ನಿಕಟವರ್ತಿ ಸಂಜಯ್ ಸಿಂಗ್ (Sanjay Singh) ಅವರು ಆಯ್ಕೆಯಾಗಿರುವುದನ್ನು ವಿರೋಧಿಸಿ, ಒಲಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ ಪುನಿಯಾ (Wrestler Bajarang Punia) ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು (Padma Shree Award) ಪ್ರಧಾನಿ ಮೋದಿ ಅವರಿಗೆ ವಾಪಸ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಗಳಿವೆ.

ಪದ್ಮಶ್ರೀ ಪ್ರಶಸ್ತಿ ವಾಪಸ್ ನೀಡುವ ನಿರ್ಧಾರವನ್ನು ಕುಸ್ತಿಪಟು ಬಜರಂಗ ಪುನಿಯಾ ಅವರು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. 2019ರಲ್ಲಿ ಬಜರಂಗ ಪುನಿಯಾ ಅವರಿಗೆ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತ್ತು. ನಿರ್ಗಮಿತ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರನ್ ಸಿಂಗ್ ಅವರ ನಿಕಟವರ್ತಿ ಸಂಜಯ್ ಅವರು ಚುನಾವಣೆಯಲ್ಲಿ 15 ಹುದ್ದೆಗಳಲ್ಲಿ 13 ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಗ್ರ ಮೂರು ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರು ಕುಸ್ತಿ ಒಕ್ಕೂಟದಲ್ಲಿ ಅಮೂಲಾಗ್ರ ಬದಲಾವಣೆಗೆ ಒತ್ತಾಯಿಸಿದ್ದರು. ಆದರೆ, ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಅವರ ನಿಷ್ಠಾವಂತ ಸಂಜಯ್ ಅವರೇ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಅವರಿಗೆ ಭಾರೀ ನಿರಾಸೆಯಾಗಿದೆ. ಈ ಮೂವರು ಕುಸ್ತಿಪಟುಗಳು ಸೇರಿದಂತೆ ಅನೇಕರು ಬ್ರಿಜ್ ಭೂಷಣ್ ಬಂಧನಕ್ಕೆ ಒತ್ತಾಯಿಸಿ ಈ ಹಿಂದೆ ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದರು.

ಗುರುವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಾಕ್ಷಿ ಮಲಿಕ್ ಅವರು ತಮ್ಮ ನಿವೃತ್ತಿಯನ್ನು ಘೋಷಿಸಿದರು. ತಮ್ಮ ಶೂಗಳನ್ನು ಮೇಜಿನ ಮೇಲೆ ಇಟ್ಟು ಕಣ್ಣೀರು ಹಾಕುತ್ತಾ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ಪ್ರಕಟಿಸಿದರು. ಇದೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಬಜರಂಗ ಪುನಿಯಾ ಅವರು, ಕುಸ್ತಿ ಫೆಡರೇಷನ್‌ನ ಚುನಾವಣಾ ಫಲಿತಾಂಶಗಳಿಂದ ನಿರಾಸೆಯಾಗಿದೆ ಎಂದು ಹೇಳಿದ್ದರು.

ಕುಸ್ತಿ ಕ್ಷೇತ್ರ ತೊರೆಯುವ ಬೆದರಿಕೆ ಒಡ್ಡಿದ ಒಲಿಂಪಿಕ್ಸ್​ ಪದಕ ವಿಜೇತೆ ಸಾಕ್ಷಿ ಮಲಿಕ್​

ಡಬ್ಲ್ಯುಎಫ್ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಲೈಂಗಿಕ ಕಿರುಕುಳ ಮತ್ತು ಬೆದರಿಕೆಯ ಆರೋಪ ಎದುರಿಸಿದ್ದ ಭಾರತೀಯ ಕುಸ್ತಿ ಒಕ್ಕೂಟವು ಮತ್ತೆ ಒತ್ತಡಕ್ಕೆ ಸಿಲುಕಿದೆ. ಯಾಕೆಂದರೆ ಕುಸ್ತಿ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಬ್ರಿಜ್​ಭೂಷಣ್ ಅವರ ಬೆಂಬಲಿಗ ಸಂಜಯ್​ ಸಿಂಗ್ ಆಯ್ಕೆಯಾದ ಬಳಿಕ ಅಸಮಾಧಾನಗೊಂಡಿರುವ ರಿಯೋ ಒಲಿಂಪಿಕ್ಸ್ ಪದಕ ವಿಜೇತ ಸಾಕ್ಷಿ ಮಲಿಕ್ ಕ್ರೀಡೆಯನ್ನು ತೊರೆಯುವ ಬೆದರಿಕೆ ಒಡ್ಡಿದ್ದಾರೆ.

ಸಂಜಯ್ ಸಿಂಗ್ ಅವರು 12 ವರ್ಷಗಳ ಕಾಲ ಡಬ್ಲ್ಯುಎಫ್ಐ ಮುಖ್ಯಸ್ಥರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ದೀರ್ಘಕಾಲದ ಸಹಾಯಕರಾಗಿದ್ದಾರೆ. ಉತ್ತರ ಪ್ರದೇಶದಿಂದ ಆರು ಬಾರಿ ಬಿಜೆಪಿ ಸಂಸದರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಲಿಕ್ ಸೇರಿದಂತೆ ಉನ್ನತ ಕುಸ್ತಿಪಟುಗಳು ಆರೋಪಿಸಿದ್ದ ನಂತರ ಅವರು ರಾಜೀನಾಮೆ ನೀಡಬೇಕಾಯಿತು.

ಈ ಸುದ್ದಿಯನ್ನೂ ಓದಿ: ಬ್ರಿಜ್​ಭೂಷಣ್​ ಬೆಂಬಲಿತ ಸಂಜಯ್​ ಸಿಂಗ್​ ಕುಸ್ತಿ ಒಕ್ಕೂಟದ ನೂತನ ಅಧ್ಯಕ್ಷ

ಚುನಾವಣೆಯಲ್ಲಿ ಸಂಜಯ್ ಸಿಂಗ್ 47 ಮತಗಳಲ್ಲಿ 40 ಮತಗಳನ್ನು ಪಡೆದರು. ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ, ಡಬ್ಲ್ಯುಎಫ್ಐ ಅಧ್ಯಕ್ಷ ಸ್ಥಾನಕ್ಕೆ ಪ್ರತಿಭಟನಾನಿರತ ಕುಸ್ತಿಪಟುಗಳ ಆಯ್ಕೆಯಾಗಿದ್ದ ಅನಿತಾ ಶಿಯೋರನ್ ಕೇವಲ ಏಳು ಮತಗಳನ್ನು ಪಡೆದರು. ದೇಶದ ಅಗ್ರ ಕುಸ್ತಿಪಟುಗಳಾದ ಮಲಿಖ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪೂನಿಯಾ ಫಲಿತಾಂಶದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ.

ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್, ಈಗ ಸಂಜಯ್ ಸಿಂಗ್ ಫೆಡರೇಶನ್ ಮುಖ್ಯಸ್ಥರಾಗಿ ಆಯ್ಕೆಯಾಗಿರುವುದರಿಂದ ಮಹಿಳಾ ಕುಸ್ತಿಪಟುಗಳು ಕಿರುಕುಳವನ್ನು ಎದುರಿಸುತ್ತಲೇ ಇರುತ್ತಾರೆ. ಎಂದು ಹೇಳಿದ್ದಾರೆ. “ದೇಶದಲ್ಲಿ ನ್ಯಾಯವನ್ನು ಹೇಗೆ ಪಡೆಯುವುದ ಎಂಬುದರ ಬಗ್ಗೆ ನನಗೆ ಯಾವುದೇ ಸುಳಿವು ಇಲ್ಲ” ಎಂದು ಫೋಗಟ್ ಹೇಳಿದರು. “ನಮ್ಮ ಕುಸ್ತಿ ವೃತ್ತಿಜೀವನದ ಭವಿಷ್ಯವು ಕತ್ತಲೆಯಲ್ಲಿದೆ. ಎಲ್ಲಿಗೆ ಹೋಗಬೇಕೆಂದು ನಮಗೆ ತಿಳಿದಿಲ್ಲ” ಎಂದು ಅವರು ಹೇಳಿದರು.

ಈ ಸುದ್ದಿಗೆ ನಿಮ್ಮ ಅನಿಸಿಕೆ ಏನು, ಕಮೆಂಟ್ ತಿಳಿಸಿ

Exit mobile version