ಕಿಂಗ್‌ಸ್ಟನ್: ಸೋಮವಾರ ನಡೆದ ಟಿ20 ವಿಶ್ವಕಪ್ನ(T20 World Cup 2024) ಲೀಗ್ ಪಂದ್ಯದಲ್ಲಿ ನೇಪಾಳ(BAN vs NEP) ತಂಡ ಬಾಂಗ್ಲಾದೇಶ ವಿರುದ್ಧ ಸೋಲು ಕಂಡರೂ ಕೂಡ ಅಭಿಮಾನಿಯೊಬ್ಬ ನೇಪಾಳ ತಂಡಕ್ಕೆ ಬೆಂಬಲ ಸೂಚಿಸಿದ ರೀತಿ ಎಲ್ಲರ ಗಮನಸೆಳೆದಿದೆ. ಬಾಂಗ್ಲಾದೇಶದ ವಿಕೆಟ್ ಪತನಗೊಂಡ ವೇಳೆ ಈ ಅಭಿಮಾನಿ ಸ್ಟೇಡಿಯಂನಲ್ಲಿದ್ದ ಸ್ವಿಮ್ಮಿಂಗ್ ಪೂಲ್ಗೆ(Nepal Fan Jumps in Swimming Pool) ಜಿಗಿದು ಸಂಭ್ರಮಿಸಿದ್ದಾನೆ. ಈ ವಿಡಿಯೊವನ್ನು ಐಸಿಸಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ವಿಡಿಯೊ ಎಲ್ಲೆಡೆ ವೈರಲ್ ಆಗಿದೆ.
ನೇಪಾಳ ತಂಡದ ಬೌಲಿಂಗ್ ಇನಿಂಗ್ಸ್ನ 5ನೇ ಓವರ್ ನಾಯಕ ರೋಹಿತ್ ಪೌಡೆಲ್ ಎಸೆದರು. ಈ ಓವರ್ನ 4ನೇ ಎಸೆತಕ್ಕೆ ಬಾಂಗ್ಲಾದೇಶದ ಬ್ಯಾಟರ್ ತೌಹಿದ್ ಹೃದಯೋಯ್ ಸಿಕ್ಸರ್ ಬಾರಿಸುವ ಯತ್ನದಲ್ಲಿ ಸಂದೀಪ್ ಲಮಿಚಾನೆಗೆ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. ಈ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ನೇಪಾಳದ ಅಭಿಮಾನಿಯೊಬ್ಬ ಸಂತಸದಲ್ಲಿ ಸ್ಟೇಡಿಯಂನ ಮುಂದೆ ಇದ್ದ ಸ್ವಿಮ್ಮಿಂಗ್ ಪೂಲ್ಗೆ ಜಿಗಿದ್ದಾನೆ. ಈ ವಿಡಿಯೊವನ್ನು ಐಸಿಸಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುವುದರ ಜತೆಗೆ ಈ ದೃಶ್ಯಕ್ಕೆ ಉತ್ತಮ ಎಸೆತ, ಉತ್ತಮ ಕ್ಯಾಚ್, ಉತ್ತಮ ಪೂಲ್ ಆಚರಣೆ ಎಂದು ಇನ ಬರೆದುಕೊಂಡಿದೆ.
ಇಲ್ಲಿನ ಸೇಂಟ್ ವಿನ್ಸೆಂಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 19.3 ಓವರ್ಗಳಲ್ಲಿ ಕೇವಲ 106 ರನ್ಗೆ ಕುಸಿತ ಕಂಡಿತು. ಈ ಮೊತ್ತವನ್ನು ನೋಡುವಾಗ ಬಾಂಗ್ಲಾ ಸೋಲು ಕಾಣಬಹುದೆಂದು ಊಹಿಸಲಾಯಿತು. ಆದರೆ, ಬಾಂಗ್ಲಾ ಬೌಲರ್ಗಳು ಉತ್ಕೃಷ್ಟ ಮಟ್ಟದ ಬೌಲಿಂಗ್ ದಾಳಿ ನಡೆಸಿ ನೇಪಾಳವನ್ನು 85 ರನ್ಗೆ ಕಟ್ಟಿಹಾಕಿ ಅಮೋಘ ಗೆಲುವು ಸಾಧಿಸಿದರು. ಈ ಗೆಲುವಿನೊಂದಿಗೆ ಬಾಂಗ್ಲಾ ಸೂಪರ್-8 ಹಂತಕ್ಕೂ ಪ್ರವೇಶ ಪಡೆಯಿತು. ಭಾರತ, ಆಸ್ಟ್ರೇಲಿಯಾ, ಅಫಘಾನಿಸ್ತಾನ ತಂಡದ ಜತೆ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ.
ಇದನ್ನೂ ಓದಿ T20 World Cup 2024: ಸೂಪರ್-8 ಹಂತದ ವೇಳಾಪಟ್ಟಿ ಪ್ರಕಟ; 8 ತಂಡಗಳ ಮಾಹಿತಿ ಹೀಗಿದೆ
ಸಣ್ಣ ಮೊತ್ತವನ್ನು ಚೇಸಿಂಗ್ ನಡೆಸಿದ ನೇಪಾಳ ಆರಂಭಿಕ ಆಘಾತ ಎದುರಿಸಿದರೂ ಕೂಡ ಮಧ್ಯಮ ಕ್ರಮಾಂಕದಲ್ಲಿ ಕುಶಾಲ್ ಮಲ್ಲ ಮತ್ತು ದೀಪೇಂದ್ರ ಸಿಂಗ್ ಐರಿ ಉತ್ತಮ ಜತೆಯಾಟವೊಂದನ್ನು ಸಂಘಟಿಸಿದ ಕಾರಣ ತಂಡ ಚೇತರಿಕೆಯ ಹಾದಿಗೆ ಮರಳಿ ಗೆಲುವು ಕಾಣುವ ಸ್ಥಿತಿಯಲ್ಲಿತ್ತು. ಆದರೆ, ಮುಸ್ತಫಿಜುರ್ ರೆಹಮಾನ್ ಅವರು ಉಭತ ಆಟಗಾರರ ವಿಕೆಟ್ ಬೇಟೆಯಾಡಿ ಬಾಂಗ್ಲಾಗೆ ಯಶಸ್ಸು ತಂದುಕೊಟ್ಟರು. ಕುಶಾಲ್ ಮಲ್ಲ 27 ರನ್ ಬಾರಿಸಿದರೆ, ದೀಪೇಂದ್ರ ಸಿಂಗ್ 25 ರನ್ ಗಳಿಸಿದರು. ಇವರಿಬ್ಬರ ವಿಕೆಟ್ ಪತನಗೊಳ್ಳುತ್ತಿದ್ದಂತೆ ನೆಪಾಳ ಸೋಲು ಕೂಡ ಖಚಿತಗೊಂಡಿತು.
ಬಾಂಗ್ಲಾದೇಶದ ಪರ ಘಾತಕ ಬೌಲಿಂಗ್ ದಾಳಿ ನಡೆಸಿದ ತಂಜಿಮ್ ಹಸನ್ ಸಾಕಿಬ್ 4 ಓವರ್ ಎಸೆದು 2 ಮೇಡನ್ ಸಹಿತ ಕೇವಲ 7 ರನ್ಗೆ 4 ವಿಕೆಟ್ ಕಿತ್ತು. ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದರು. ಮುಸ್ತಫಿಜುರ್ ರೆಹಮಾನ್ 7 ರನ್ಗೆ 3 ವಿಕೆಟ್ ಪಡೆದರು. ನಾಯಕ ಶಕೀಬ್ 2 ವಿಕೆಟ್ ಕಿತ್ತು ಮಿಂಚಿದರು. ಮುಂದಿನ ಪಂದ್ಯದಲ್ಲಿ ಶಕೀಬ್ ಮೊದಲ ಎಸೆತದಲ್ಲೇ ವಿಕೆಟ್ ಕಿತ್ತರೆ ಬ್ರೋಕನ್ ಹ್ಯಾಟ್ರಿಕ್ ವಿಕೆಟ್ ಕಿತ್ತ ದಾಖಲೆ ಮಾಡಲಿದ್ದಾರೆ.