ಪಲ್ಲೆಕೆಲೆ: ಹಾಲಿ ಚಾಂಪಿಯನ್ ಶ್ರೀಲಂಕಾ ತಂಡ ತನ್ನ ಖ್ಯಾತಿಗೆ ತಕ್ಕಂತೆ ಆಡವಾಡಿ ಏಷ್ಯಾಕಪ್ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಕಂಡಿದೆ. ಬಾಂಗ್ಲಾದೇಶ(Bangladesh vs Sri Lanka) ವಿರುದ್ಧ 5 ವಿಕೆಟ್ ಗೆಲುವು ಸಾಧಿಸಿದೆ. 4 ವಿಕೆಟ್ ಕಿತ್ತ ಜೂನಿಯರ್ ಮಾಲಿಂಗ ಖ್ಯಾತಿಯ ಮತೀಶ ಪತಿರಣ ಲಂಕಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಶ್ರೀಲಂಕಾದ ಪಲ್ಲೆಕೆಲೆ(Pallekele) ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ನ(Asia cup 2023) ದ್ವಿತೀಯ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ನಜ್ಮುಲ್ ಹೊಸೈನ್ ಶಾಂಟೊ(89) ಅವರ ಏಕಾಂಗಿ ಹೋರಾಟದ ಫಲವಾಗಿ 42.4 ಓವರ್ನಲ್ಲಿ 164 ರನ್ ಗಳಿಸಿ ಸರ್ವಪತನ ಕಂಡಿತು. ಸಣ್ಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಸದೀರ ಸಮರ ವಿಕ್ರಮ(54) ಮತ್ತು ಚರಿತ ಅಸಲಂಕ(62*) ಅವರ ಅರ್ಧಶತಕದ ನೆರವಿನಿಂದ 39 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 165 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಆರಂಭಿಕ ಆಘಾತ
ಸಣ್ಣ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ಕೂಡ ಆರಂಭಿಕ ಆಘಾತ ಎದುರಿಸಿತು. 15 ರನ್ ಗಳಿಸುವ ವೇಳೆ ಆರಂಭಿಕರಿಬ್ಬರ ವಿಕೆಟ್ ಪತನಗೊಂಡಿತು. ಇದರ ಬೆನ್ನಲ್ಲೇ ಮೂರನೇ ವಿಕೆಟ್ ಕೂಡ ಕಳೆದುಕೊಂಡು ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಬಾಂಗ್ಲಾ ಪಾಳಯದಲ್ಲಿ ಗೆಲುವಿನ ಸಣ್ಣ ಆಸೆಯೊಂದು ಚಿಗುರಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಾಂಗ್ಲಾ ಬೌಲರ್ಗಳ ಮೇಲೆ ಸಮರ ಸಾರಿದ ಸಮರ ವಿಕ್ರಮ ಅರ್ಧಶತಕ ಬಾರಿಸಿ ಮಿಂಚಿದರು. ಒಟ್ಟು 77 ಎಸೆತಗಳನ್ನು ಎದುರಿಸಿ 6 ಬೌಂಡರಿ ನೆರವಿನಿಂದ 54 ರನ್ ಗಳಿಸಿದರು.
ಸಮರ ವಿಕ್ರಮಗೆ ಉತ್ತಮ ಸಾಥ್ ನೀಡಿದ ಚರಿತ ಅಸಲಂಕ ಕೂಡ ಅಜೇಯ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅವರ ಅರ್ಧಶತಕ ಇನಿಂಗ್ಸ್ನಲ್ಲಿ 5 ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಯಿತು. ಒಟ್ಟು 92 ಎಸೆತಗಳಿಂದ ಅಜೇಯ 62 ರನ್ ಗಳಿಸಿದರು. ನಾಯಕ ದಸುನ್ ಶಾನಕ 14 ರನ್ ಬಾರಿಸಿ ಅಜೇಯರಾಗಿ ಉಳಿದರು. ಬಾಂಗ್ಲಾ ಪರ ನಾಯಕ ಶಕೀಬ್ ಅಲ್ ಹಸನ್ 2 ವಿಕೆಟ್ ಕಿತ್ತರು. ಆದರೆ ಬ್ಯಾಟಿಂಗ್ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದರು.
ನಜ್ಮುಲ್ ಹೊಸೈನ್ ಏಕಾಂಗಿ ಹೋರಾಟ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಬಾಂಗ್ಲಾ ಪರ ಮಧ್ಯಮ ಕ್ರಮಾಂಕದ ಆಟಗಾರ ನಜ್ಮುಲ್ ಹೊಸೈನ್ ಶಾಂಟೊ ಏಕಾಂಗಿಯಾಗಿ ಹೋರಾಡಿ ಲಂಕಾ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಅವರು ತಂಡಕ್ಕೆ ಆಸರೆಯಾಗಿ ನಿಂತು 89 ರನ್ ಬಾರಿಸಿದರು. ತಂಡ ಗಳಿಸಿದ ಅರ್ಧ ಪಾಲು ಮೊತ್ತ ಇವರದ್ದೇ ಆಗಿತ್ತು. ಈ ಮೂಲಕ ತಂಡದ ಮಾನವನ್ನು ಕಾಪಾಡಿದ್ದರು. ಉಳಿದ ಬಹುತೇಕ ಆಟಗಾರರದ್ದು ಸಿಂಗಲ್ ಡಿಜಿಟ್ ಮೊತ್ತವಾಗಿತ್ತು. ಇವರು ಕೂಡ ತಂಡಕ್ಕೆ ಆಸರೆಯಾಗದೇ ಹೋಗಿದ್ದರೆ ತಂಡ 50 ರನ್ಗಳ ಮೊತ್ತವನ್ನೂ ದಾಖಲಿಸುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಶೋಚನೀಯವಾಗಿತ್ತು ಬಾಂಗ್ಲಾ ಆಟಗಾರರ ಪ್ರದರ್ಶನ.
ಇದನ್ನೂ ಓದಿ Asia Cup 2023: ಭಾರತ-ಪಾಕ್ ಏಷ್ಯಾಕಪ್ ಇತಿಹಾಸವೇ ಬಲು ರೋಚಕ
ನಾಯಕನ ಆಟವಾಡುವಲ್ಲಿ ಶಕೀಬ್ ವಿಫಲ
6 ವರ್ಷಗಳ ಬಳಿಕ ಬಾಂಗ್ಲಾ ಏಕದಿನ ತಂಡವನ್ನು ಮುನ್ನಡೆಸಿದ ನಾಯಕ ಶಕೀಬ್ ಅಲ್ ಹಸನ್ ಕೇವಲ 5 ರನ್ಗೆ ಆಟ ಮುಗಿಸಿದರು. ಲಂಕಾ ಪರ ಈ ಬಾರಿಯ ಐಪಿಎಲ್ನಲ್ಲಿ ಯಾರ್ಕರ್ಗಳ ಮೂಲಕ ಗಮನ ಸೆಳೆದ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ಮತೀಶ ಪತಿರಣ 7.4 ಓವರ್ ಎಸೆದು ಕೇವಲ 32 ರನ್ ವೆಚ್ಚದಲ್ಲಿ ಪ್ರಮುಖ 4 ವಿಕೆಟ್ ಕಿತ್ತು ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಸ್ಪಿನ್ನರ್ ಮಹೀಶ್ ತೀಕ್ಷಣ 8 ಓವರ್ ಎಸೆದು ಒಂದು ಮೇಡನ್ ಸಹಿತ ಕೇವಲ 19 ರನ್ ಬಿಟ್ಟುಕೊಟ್ಟು 2 ವಿಕೆಟ್ ಕಬಳಿಸಿದರು.
ತಮಿಮ್ ಇಕ್ಬಾಲ್, ಇಬಾದತ್ ಹುಸೇನ್ ಮತ್ತು ಲಿಟ್ಟನ್ ದಾಸ್ ಅವರ ಅನುಪಸ್ಥಿತಿ ಬಾಂಗ್ಲಾ ಪಾಳಯದಲ್ಲಿ ಎದ್ದು ಕಾಣುತ್ತಿತ್ತು. ಲಿಟ್ಟನ್ ದಾಸ್ ಅವರು ವೈರಲ್ ಜ್ವರದಿಂದಾಗಿ ಬುಧವಾರ ತಂಡದಿಂದ ಹೊರಬಿದ್ದಿದ್ದರು.