Site icon Vistara News

INDvsBAN | ಭಾರತವನ್ನು ಕಾಡಿದ ಬಾಂಗ್ಲಾದೇಶದ ಆರಂಭಿಕರು, ಇನ್ನೂ ಇದೆ ಗೆಲುವಿನ ಅವಕಾಶ

INDvsBAN

ಚಿತ್ತಗಾಂಗ್​ : ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್​ ಸರಣಿಯ (INDvsBAN) ಮೊದಲ ಪಂದ್ಯ ಕುತೂಹಲಕಾರಿ ಘಟ್ಟ ತಲುಪಿದೆ. 513 ರನ್​ಗಳ ಗೆಲುವಿನ ಗುರಿಯೊಂದಿಗೆ ಎರಡನೇ ಇನಿಂಗ್ಸ್​ ಬ್ಯಾಟ್ ಮಾಡುತ್ತಿರುವ ಬಾಂಗ್ಲಾದೇಶ ತಂಡದ ಆರಂಭಿಕ ಬ್ಯಾಟರ್​ಗಳು ಪ್ರವಾಸಿ ತಂಡದ ಬ್ಯಾಟರ್​ಗಳನ್ನು ಕಾಡಿದ ಹೊರತಾಗಿಯೂ ನಾಲ್ಕನೇ ದಿನ ಅಂತ್ಯಕ್ಕೆ 102 ಒವರ್​ಗಳಲ್ಲಿ 6 ವಿಕೆಟ್​ ನಷ್ಟ ಮಾಡಿಕೊಂಡು 272 ರನ್​ ಪೇರಿಸಿದೆ. ಆದಾಗ್ಯೂ ಆತಿಥೇಯ ತಂಡ 241 ರನ್​ಗಳ ಹಿನ್ನಡೆಯಲ್ಲಿದ್ದು ಕೊನೇ ದಿನ ನಾಲ್ಕು ವಿಕೆಟ್​ಗಳನ್ನು ಕಬಳಿಸಿದರೆ ಭಾರತ ತಂಡಕ್ಕೆ ಜಯ ದೊರಕಬಹುದು.

ಚಿತ್ತಗಾಂಗ್​ ಜಹೂರ್​ ಅಹ್ಮದ್ ಚೌಧರಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ಹಣಾಹಣಿಯಲ್ಲಿ ನಾಲ್ಕನೇ ದಿನವಾದ ಶುಕ್ರವಾರದ ಅಂತ್ಯಕ್ಕೆ ಬಾಂಗ್ಲಾದೇಶ ವಿಕೆಟ್​ ನಷ್ಟವಿಲ್ಲದೆ 42 ರನ್​ ಗಳಿಸಿತ್ತು. ಅದೇ ಲಹರಿಯಲ್ಲಿ ನಾಲ್ಕನೇ ದಿನವಾದ ಶನಿವಾರ ಬ್ಯಾಟಿಂಗ್​ ಮುಂದುವರಿಸಿದ ಆರಂಭಿಕರಾದ ನಜ್ಮುಲ್​ ಹೊಸೈನ್​ (67) ಹಾಗೂ ಜಾಕಿರ್​ ಹಸನ್​ (100) ಭಾರತದ ಬೌಲರ್​ಗಳನ್ನು ಕಾಡಿದರು. ಭೋಜನ ವಿರಾಮದ ವೇಳೆಗೆ ಈ ಜೋಡಿ ವಿಕೆಟ್ ನಷ್ಟವಿಲ್ಲದೆ 119 ರನ್​ ಗಳಿಸಿ ಭಾರತದ ಪಾಳೆಯದಲ್ಲಿ ಆತಂಕ ಮೂಡಿಸಿತು. ಆದರೆ, 47ನೇ ಓವರ್​ನಲ್ಲಿ ಯಶಸ್ಸು ಸಾಧಿಸಿದ ಉಮೇಶ್ ಯಾದವ್​ ನಜ್ಮುಲ್​ ವಿಕೆಟ್​ ಕಬಳಿಸಿದರು.

ಮೂರನೇ ಕ್ರಮಾಂಕದಲ್ಲಿ ಇಳಿದ ಯಾಸಿರ್​ 5 ರನ್​ಗಳಿಗೆ ಸೀಮಿತಗೊಂಡರೆ, ಲಿಟನ್​ ದಾಸ್​ 19 ರನ್​ ಬಾರಿಸಿ ವಿಕೆಟ್​ ಒಪ್ಪಿಸಿದರು. ಇದೇ ವೇಳೆ ಪದಾರ್ಪಣೆ ಪಂದ್ಯವಾಡುತ್ತಿರುವ ಜಾಕಿರ್ ಹಸನ್​ (100) ಶತಕ ಬಾರಿಸಿದರು. ಅಲ್ಲಿಗೆ ಆಟ ಮುಗಿಸಿದ ಅವರು ಆರ್ ಅಶ್ವಿನ್​ಗೆ ವಿಕೆಟ್​ ಒಪ್ಪಿಸಿದರು. ಮುಷ್ಪಿಕರ್ ರಹೀಮ್​ (23) ಗಳಿಸಿದರೆ, ನೂರುಲ್​ ಹಸನ್​ 3 ರನ್​ಗೆ ಸೀಮಿತಗೊಂಡರು.

ದಿನದ ಕೊನೇ ಅವಧಿಯಲ್ಲಿ ಆಲ್​ರೌಂಡರ್​ ಶಕಿಬ್​ ಅಲ್​ ಹಸನ್​ (40*) ಹಾಗೂ ಮೆಹೆದಿ ಹಸನ್​ ಮಿರಾಜ್​ (9) ಭಾರತ ತಂಡ ಇನ್ನಷ್ಟು ಯಶಸ್ಸು ಗಳಿಸದಂತೆ ನೋಡಿಕೊಂಡರು. ಭಾನುವಾರ ಪಂದ್ಯದ ಕೊನೇ ದಿನವಾಗಿದ್ದು, ಭಾರತ ತಂಡದ ಗೆಲುವಿಗೆ ನಾಲ್ಕು ವಿಕೆಟ್​ಗಳ ಅವಶ್ಯಕತೆ ಇದೆ.

ಸ್ಕೋರ್​ ವಿವರ

ಭಾರತ : ಮೊದಲ ಇನಿಂಗ್ಸ್​ 404; ಎರಡನೇ ಇನಿಂಗ್ಸ್​ 258ಕ್ಕೆ2 ಡಿಕ್ಲೇರ್ಡ್​.

ಬಾಂಗ್ಲಾದೇಶ : ಮೊದಲ ಇನಿಂಗ್ಸ್​ 150; ಎರಡನೇ ಇನಿಂಗ್ಸ್​ 102 ಓವರ್​ಗಳಲ್ಲಿ 6 ವಿಕೆಟ್​ಗೆ 272 (ನಜ್ಮುಲ್​ ಹೊಸೈನ್​ 67, ಜಾಕಿರ್ ಹಸನ್​ 100, ಶಕಿಬ್​ ಅಲ್​ ಹಸನ್​ 40; ಅಕ್ಷರ್​ ಪಟೇಲ್​ 50 ರನ್​ಗಳಿಗೆ 3).

ಇದನ್ನೂ ಓದಿ | INDvsBAN | ಕೊಹ್ಲಿ ಮರ್ಯಾದೆ ಕಾಪಾಡಿದ ಪಂತ್​; ಕೈ ಮುಗಿದು ಅಭಿನಂದಿಸಿದ ನಾಯಕ

Exit mobile version