ಮುಂಬಯಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಬುಧವಾರ ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಬಹುನಿರೀಕ್ಷಿತ ಏಕದಿನ ವಿಶ್ವಕಪ್ ಟೂರ್ನಿಯ(ICC World Cup) ಪಂದ್ಯಗಳ ಟಿಕೆಟ್‌ಗಳನ್ನು ಖರೀದಿಸುವ ಪ್ಲಾಟ್‌ಫಾರ್ಮನ್ನು ಪ್ರಕಟಿಸಿದೆ. ಮನರಂಜನಾ ತಾಣವಾದ ಬುಕ್ ಮೈ ಶೋದ(BookMyShow) ವಿಶ್ವಕಪ್ನ ಅಧಿಕೃತ ಟಿಕೆಟ್ ಬುಕಿಂಗ್ ಮಾಡುವ ಆ್ಯಪ್ ಎಂದು ತಿಳಿಸಿದೆ. ಸೆಪ್ಟೆಂಬರ್ 29 ರಿಂದ ಪಂದ್ಯಾವಳಿಯ ಟಿಕೆಟ್ ಬುಕಿಂಗ್ ಆರಂಭಗೊಳ್ಳಲಿದೆ. ಸೆಪ್ಟೆಂಬರ್ 15ರಂದು ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳ ಟಿಕೆಟ್ (Tickets For ODI World Cup 2023) ಲಭ್ಯವಾಗಲಿದೆ. ಉಳಿದಂತೆ ಎಲ್ಲ ಪಂದ್ಯಗಳ ಟಿಕೆಟ್ ಯಾವ ದಿನಾಂಕದಂದು ಲಭ್ಯವಾಗಲಿದೆ
ಒಟ್ಟು 10 ಅಭ್ಯಾಸ ಪಂದ್ಯಗಳು ಮತ್ತು ಪ್ರಧಾನ ಸುತ್ತಿನ ಪಂದ್ಯಗಳು ಸೇರಿದಂತೆ ಒಟ್ಟು 58 ಪಂದ್ಯಗಳು ನಡೆಯಲಿದೆ. ದೇಶದ 12 ಪ್ರಮುಖ ಸ್ಟೇಡಿಯಂಗಳಲ್ಲಿ ಪಂದ್ಯಗಳು ಆಯೋಜಿಸಲಾಗಿದೆ. ಅಭ್ಯಾಸ ಪಂದ್ಯಗಳ ಟಿಕೆಟ್ ಕೂಡ ಲಭ್ಯವಾಗಲಿದೆ. ಆರಂಭಿಕ ಹಂತವು ಐಸಿಸಿಯ ವಾಣಿಜ್ಯ ಪಾಲುದಾರ ಮಾಸ್ಟರ್ ಕಾರ್ಡ್‌ಗಾಗಿ ಪ್ರತ್ಯೇಕವಾಗಿ ಗೊತ್ತುಪಡಿಸಿದ 24-ಗಂಟೆಗಳ ಸ್ಲಾಟ್ಗಳನ್ನು ಮಾಡಲಾಗಿದೆ. ಬಳಿಕ ಕ್ರಿಕೆಟ್ ಅಭಿಮಾನಿಗಳಿಗೆ ಟಿಕೆಟ್ ಬುಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಟಿಕೆಟ್ನ ಎಲ್ಲ ದರಗಳು ಬುಕ್ ಮೈ ಶೋದಲ್ಲಿ ಲಭ್ಯವಿದೆ.
24ಕ್ಕೆ ಮೊದಲ ಹಂತ
ಆಗಸ್ಟ್ 24ರಿಂದ ಟಿಕೆಟ್ ಬುಕ್ಕಿಂಗ್ ಕಾರ್ಯ ಆರಂಭವಾಗಲಿದೆ. ಆದರೆ ಇಲ್ಲಿ ಭಾರತವನ್ನು ಹೊರತುಪಡಿಸಿ ಉಳಿದ ತಂಡಗಳ ನಡುವಿನ ಅಭ್ಯಾಸ ಮತ್ತು ಪ್ರಧಾನ ಪಂದ್ಯಗಳ ಟಿಕೆಟ್‌ಗಳನ್ನು ಮಾತ್ರ ಬುಕಿಂಗ್ ಮಾಡಬಹುದಾಗಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ಪಾಕಿಸ್ತಾನ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ಅಫಘಾನಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯಗಳ ಟಿಕೆಟ್ ಲಭ್ಯವಾಗಲಿದೆ.
ಭಾರತ-ಪಾಕ್ ಪಂದ್ಯದ ಟಿಕೆಟ್
ದ್ವಿತೀಯ ಹಂತದಲ್ಲಿ ಭಾರತ ತಂಡದ ಅಭ್ಯಾಸ ಮತ್ತು ಲೀಗ್ ಪಂದ್ಯಗಳ ಟಿಕೆಟ್ ಮಾರಾಟವಾಗಲಿದೆ. ಅಭ್ಯಾಸ ಪಂದ್ಯಗಳ ಟಿಕೆಟ್‌ಗಳು ಆಗಸ್ಟ್ 30 ರಂದು ಪ್ರಾರಂಭವಾದರೆ, ಲೀಗ್ ಹಂತದ ಪಂದ್ಯಗಳು ಆಗಸ್ಟ್ 31 ರಿಂದ ಲಭ್ಯವಿರುತ್ತವೆ. ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿರುವ ಅಕ್ಟೋಬರ್ 14 ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ(ickets For world cup india vs pak) ಪಂದ್ಯದ ಟಿಕೆಟ್‌ಗಳನ್ನು ಸೆಪ್ಟೆಂಬರ್ 3 ರಂದು ಬುಕ್ ಮಾಡಬಹುದು.
ತಡೆರಹಿತ ಅನುಭವ
ಟಿಕೆಟ್ ಬುಕಿಂಗ್ ಪ್ಲಾಟ್ಫಾರ್ಮ್ನ ಘೋಷಣೆ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿದ ಬಿಸಿಸಿಐ ಸಿಇಒ ಹೇಮಾಂಗ್ ಅಮೀನ್, “ಈ ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿ ಅತ್ಯಂತ ನಿರೀಕ್ಷಿತ ಮತ್ತು ಮಹತ್ವದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ಗೆ ಬುಕ್‌ಮೈಶೋವನ್ನು ಟಿಕೆಟಿಂಗ್ ಪ್ಲಾಟ್‌ಫಾರ್ಮ್ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಅಚಲವಾದ ವಿಶ್ವಾಸದೊಂದಿಗೆ, ತಡೆರಹಿತ ಟಿಕೆಟಿಂಗ್ ಅನುಭವವನ್ನು ನಿರೀಕ್ಷಿಸುತ್ತೇವೆ, ರೋಮಾಂಚಕ ಆನ್-ಫೀಲ್ಡ್ ಅಭಿಮಾನಿಗಳಿಗೆ ಯಾವುದೇ ತಡೆಯಿಲ್ಲದೆ ಸುಲಭ ಪ್ರವೇಶವನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ. ಪ್ರತಿಯೊಬ್ಬ ಕ್ರಿಕೆಟ್ ಉತ್ಸಾಹಿಗಳಿಗೆ ಟಿಕೆಟ್ ದೊರೆಯುವಂತಾಗಲಿ” ಎಂದು ಹೇಳಿದರು.
ಟೂರ್ನಿ ಆರಂಭ
ಸಂಪೂರ್ಣವಾಗಿ ಭಾರತ ಆತಿಥ್ಯದಲ್ಲಿ ಇದೇ ಮೊದಲ ಬಾರಿಗೆ ನಡೆಯುವ ಈ ಮಹತ್ವದ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಿಂದ ನವೆಂಬರ್ 19ರ ವರೆಗೆ ನಡೆಯಲಿದೆ. ಟೂರ್ನಿಯ ಉದ್ಘಾಟನ ಪಂದ್ಯ ಮತ್ತು ಫೈನಲ್ ಪಂದ್ಯಗಳೆರಡು ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ.
ಇದನ್ನೂ ಓದಿ ICC World Cup: ಮತ್ತೆ ವಿಶ್ವಕಪ್ ವೇಳಾಪಟ್ಟಿ ಬದಲಾವಣೆ ಅಸಾಧ್ಯ; ರಾಜೀವ್ ಶುಕ್ಲಾ ಸ್ಪಷ್ಟನೆ
ಭಾರತ ಪಂದ್ಯಗಳ ಟಿಕೆಟ್ ಮಾರಾಟದ ಮಾಹಿತಿ
1. ಆಗಸ್ಟ್ 30: ತಿರುವನಂತಪುರ ಮತ್ತು ಗುವಾಹಟಿ ನಡೆಯಲಿರುವ ಭಾರತದ ಅಭ್ಯಾಸ ಪಂದ್ಯಗಳ ಟಿಕೆಟ್ ಮಾರಾಟ ಈ ದಿನಾಂಕದಂದು ಲಭ್ಯವಾಗಲಿದೆ. ಈ ಎರಡೂ ಮೈದಾನಗಳಲ್ಲಿ ಲೀಗ್ ಪಂದ್ಯಗಳು ನಡೆಯುವುದಿಲ್ಲ.
2. ಆಗಸ್ಟ್ 31: ಆಸ್ಟ್ರೇಲಿಯಾ ವಿರುದ್ಧ ಚೆನ್ನೈಯಲ್ಲಿ ನಡೆಯುವ ಪಂದ್ಯ, ದೆಹಲಿಯಲ್ಲಿ ಅಫಘಾನಿಸ್ತಾನ ವಿರುದ್ಧ ಮತ್ತು ಪುಣೆಯಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಪಂದ್ಯಗಳ ಟಿಕೆಟ್ ಮಾರಾಟವಾಗಲಿದೆ.
3. ಸೆಪ್ಟೆಂಬರ್ 1: ಧರ್ಮಶಾಲಾದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ, ಲಕ್ನೋದಲ್ಲಿ ಇಂಗ್ಲೆಂಡ್ ವಿರುದ್ಧ ಮುಂಬಯಿಯಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಪಂದ್ಯಗಳ ಟಿಕೆಟ್ ಮಾರಾಟವಾಗಲಿದೆ.
4. ಸೆಪ್ಟೆಂಬರ್ 2: ನೆದರ್ಲೆಂಡ್ಸ್ ವಿರುದ್ಧ ಬೆಂಗಳೂರಲ್ಲಿ ನಡೆಯುವ, ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏರ್ಪಡಲಿರುವ ಪಂದ್ಯಗಳ ಟಿಕೆಟ್ ಮಾರಾಟ ದೊರೆಯಲಿದೆ.
5. ಸೆಪ್ಟೆಂಬರ್ 3: ಹೈವೋಲ್ಟೇಜ್ ಪಂದ್ಯವಾದ ಭಾರತ ಮತ್ತು ಪಾಕಿಸ್ತಾನ ವಿರುದ್ಧದ ಅಹಮದಾಬಾದ್‌ನಲ್ಲಿ ನಡೆಯುವ ಪಂದ್ಯದ ಟಿಕೆಟ್ ಮಾರಾಟವಾಗಲಿದೆ.