ಮುಂಬಯಿ : ಪ್ರವಾಸಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧದ ತವರಿನ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಬುಧವಾರ ಪ್ರಕಟಿಸಿದೆ. ಸೆಪ್ಟೆಂಬರ್ ೨೦ರಿಂದ ಸರಣಿ ಆರಂಭಗೊಳ್ಳಲಿದ್ದು, ಅಕ್ಟೋಬರ್ ೧೧ರವರೆಗೆ ನಡೆಯಲಿದೆ. ವೇಳಾಪಟ್ಟಿಯ ಜತೆಗೆ ಪಂದ್ಯ ನಡೆಯುವ ತಾಣಗಳನ್ನೂ ಬಿಸಿಸಿಐ ಪ್ರಕಟಿಸಿದೆ.
೨೦೨೨-೨೩ರ ಕ್ರಿಕೆಟ್ ಋತುವಿನ ಅಂತಾರಾಷ್ಟ್ರೀಯ ಪಂದ್ಯಗಳ ತವರಿನ ಸರಣಿ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ೨೦ ಸರಣಿಯೊಂದಿಗೆ ಆರಂಭವಾಗಲಿದೆ. ಬಳಿಕ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಮೂರು ಪಂದ್ಯಗಳ ಟಿ೨೦ ಹಾಗೂ ಅಷ್ಟೇ ಸಂಖ್ಯೆಯ ಏಕದಿನ ಪಂದ್ಯಗಳ ಸರಣಿಯೂ ನಡೆಯಲಿದೆ.
ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ೨೦ ಸರಣಿಯ ಮೊದಲ ಪಂದ್ಯ ನಡೆಯಲಿದೆ. ಈ ಪಂದ್ಯ ಸೆಪ್ಟೆಂಬರ್ ೨೦ರಂದು ಆಯೋಜನೆಗೊಂಡಿದ್ದು, ೨೩ ಹಾಗೂ ೨೫ರಂದು ನಾಗ್ಪುರ ಹಾಗೂ ಹೈದರಾಬಾದ್‌ನಲ್ಲಿ ಉಳಿದೆರಡ ಪಂದ್ಯಗಳು ನಡೆಯಲಿವೆ.
ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಟಿ೨೦ ಸರಣಿ ಸೆಪ್ಟೆಂಬರ್ ೨೮ರಂದು ಆರಂಭಗೊಳ್ಳಲಿದ್ದು, ಕೇರಳದ ತಿರುವನಂತಪುರಮ್‌ನಲ್ಲಿ ಆ ಹಣಾಹಣಿ ನಡೆಯಲಿದೆ. ಎರಡನೇ ಪಂದ್ಯ ಅಕ್ಟೋಬರ್ ೨ರಂದು ನಡೆಯಲಿದ್ದು, ಗುವಾಹಟಿ ಆತಿಥ್ಯ ವಹಿಸಲಿದೆ. ಮೂರನೇ ಪಂದ್ಯ ಅಕ್ಟೋಬರ್ ೪ರಂದು ಇಂದೋರ್‌ನಲ್ಲಿ ಆಯೋಜನೆಗೊಂಡಿದೆ.
ಏಕದಿನ ಸರಣಿಯ ಮೊದಲ ಪಂದ್ಯ ಅಕ್ಟೋಬರ್ ೬ರಂದು ಆಯೋಜನೆಗೊಂಡಿದ್ದು, ಲಖನೌನಲ್ಲಿ ಮೊದಲ ಹಣಾಹಣಿ ನಿಗದಿಯಾಗಿದೆ. ರಾಂಚಿ ಹಾಗೂ ನವ ದೆಹಲಿ ಅಕ್ಟೋಬರ್ ೯ ಹಾಗೂ ೧೧ರಂದು ನಡೆಯುವ ಉಳಿದೆರಡು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.
ಇದನ್ನೂ ಓದಿ | Ind vs WI T20 | ರೋಹಿತ್ ಫಿಟ್ನೆಸ್ ಬಗ್ಗೆ ಮತ್ತೆ ಚರ್ಚೆ, ಗಾಯಗೊಂಡರೇ ಹಿಟ್‌ಮ್ಯಾನ್