Site icon Vistara News

BCCI: ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಟೆಸ್ಟ್​ ಆಟಗಾರರಿಗೆ ವಿಶೇಷ ವೇತನ ಘೋಷಣೆ ಮಾಡಿದ ಬಿಸಿಸಿಐ

India vs England, 5th Test

ಧರ್ಮಶಾಲಾ: ಇಂಗ್ಲೆಂಡ್​ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯವನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಬೆನ್ನಲ್ಲೇ ಬಿಸಿಸಿಐ(BCCI) ಜಯ್​ ಶಾ(BCCI secretary Jay Shah) ಅವರು ಟೀಮ್ ಇಂಡಿಯಾ ಆಟಗಾರರಿಗೆ ಸಿಹಿ ಸುದ್ದಿಯೊಂದನ್ನು ಪ್ರಕಟಿಸಿದ್ದಾರೆ. ವಾರ್ಷಿಕ ಒಡಂಬಡಿಕೆಯ ವೇತನದ ಜತೆಗೆ ಹೆಚ್ಚುವರಿ ಮೊತ್ತ ನೀಡುವ ಘೋಷಣೆ ಮಾಡಿದ್ದಾರೆ. ಪಂದ್ಯ ಮುಗಿಯುತ್ತಿದ್ದಂತೆ ಜಯ್​ ಶಾ ಅವರು ಟ್ವೀಟ್​ ಮಾಡುವ ಮೂಲಕ ಇದನ್ನು ಪ್ರಕಟಿಸಿದರು.

ಪ್ರಸ್ತುತ ಭಾರತದಲ್ಲಿ ಟೆಸ್ಟ್‌ ಪಂದ್ಯವೊಂದಕ್ಕೆ ಆಟಗಾರರಿಗೆ ಲಭಿಸುವ ವೇತನ 15 ಲಕ್ಷ ರೂ. ಐಪಿಎಲ್‌ ಬಳಿಕ ಒಂದು ಋತುವಿನ ಎಲ್ಲ ಟೆಸ್ಟ್‌ ಸರಣಿಗಳನ್ನು ಆಡುವ ಆಟಗಾರರಿಗೆ ಬೋನಸ್‌ ರೂಪದ ನೂತನ ಮಾದರಿಯಲ್ಲಿ ಉದಾಹರಣೆಗೆ ಒಂಬತ್ತು-ಪಂದ್ಯಗಳ ಋತುವಿನಲ್ಲಿ ಕನಿಷ್ಠ 5ರಿಂದ 6 ಟೆಸ್ಟ್‌ಗಳನ್ನು ಆಡುವ ಆಟಗಾರರು ಪ್ರತಿ ಪಂದ್ಯಕ್ಕೆ 15 ಲಕ್ಷದ ಬದಲಾಗಿ ಇನ್ನು ಮುಂದೆ ಪ್ರತಿ ಪಂದ್ಯಕ್ಕೆ 30 ಲಕ್ಷ ಪಡೆಯಲಿದ್ದಾರೆ. ಹಾಗೆಯೇ ವರ್ಷವೊಂದರಲ್ಲಿ ಕನಿಷ್ಠ 75 ಪ್ರತಿಶತ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಬ್ಬ ಆಟಗಾರನ ವೇತನವು ಪ್ರತಿ ಪಂದ್ಯಕ್ಕೆ 22.5 ಲಕ್ಷದಿಂದ 45 ಲಕ್ಷಕ್ಕೆ ದ್ವಿಗುಣಗೊಂಡಿದೆ. ವರ್ಷದ ಎಲ್ಲ ಟೆಸ್ಟ್‌ ಸರಣಿಗಳಲ್ಲಿ ಪಾಲ್ಗೊಳ್ಳುವ ಆಟಗಾರರಿಗಷ್ಟೇ ಇದು ಅನ್ವಯವಾಗುತ್ತದೆ.

ಆಟಗಾರರು ಟೆಸ್ಟ್‌ ಕ್ರಿಕೆಟ್‌ನತ್ತ ಹೆಚ್ಚಿನ ಆಸಕ್ತಿ ವಹಿಸಬೇಕು, ಹೆಚ್ಚೆಚ್ಚು ಟೆಸ್ಟ್‌ ಪಂದ್ಯಗಳನ್ನು ಆಡಬೇಕು, ಸಾಂಪ್ರದಾಯಿಕ ಕ್ರಿಕೆಟನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕು ಎನ್ನುವುದು ಇದರ ಉದ್ದೇಶ ಎಂದು ಜಯ್​ ಶಾ ಅವರು ಹೇಳಿದರು. ಜಯ್​ ಶಾ ಅವರು ಬಿಸಿಸಿಐ ಕಾರ್ಯದರ್ಶಿಯಾದ ಬಳಿಕ ಅನೇಕ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇದರಲ್ಲಿ ಮಹಿಳಾ ಕ್ರಿಕೆಟ್​ ಲೀಗ್​ ಮತ್ತು ಮಹಿಳಾ ಕ್ರಿಕೆಟಿಗರಿಗೂ ಪುರುಷರಂತೆ ಸಮಾನವಾದ ವೇತನ ಪದ್ಧತಿ ಪ್ರಾಮುಖ್ಯವಾದದ್ದು.

ಐತಿಹಾಸಿಕ ದಾಖಲೆ ಬರೆದ ಭಾರತ

ಅಂತಿಮ ಟೆಸ್ಟ್(India vs England 5th Test)​ ಪಂದ್ಯದಲ್ಲಿ ಆತಿಥೇಯ ಭಾರತ ಇನಿಂಗ್ಸ್​ ಮತ್ತು 64 ರನ್​ಗಳ ಅಂತರದ ಗೆಲುವು ಸಾಧಿಸುವ ಮೂಲಕ ಸರಣಿಯನ್ನು 4-1 ರೊಂದಿಗೆ ಮುಕ್ತಾಯಗೊಳಿಸಿದೆ. ಗುರುವಾರ ಆರಂಭಗೊಂಡ ಈ ಟೆಸ್ಟ್​ ಪಂದ್ಯ ಕೇವಲ ಮೂರು ದಿನಕ್ಕೆ ಅಂತ್ಯಕಂಡಿತು.

ಭಾರತ ಈ ಗೆಲುವಿನ ಮೂಲಕ 112 ವರ್ಷದಲ್ಲೇ ಮೊದಲ ಪಂದ್ಯದ ಸೋಲಿನ ಬಳಿಕ 5 ಪಂದ್ಯದ ಸರಣಿಯಲ್ಲಿ 4-1 ರಿಂದ ಗೆದ್ದ ಏಕೈಕ ತಂಡ ಎಂಬ ಇತಿಹಾಸ ನಿರ್ಮಿಸಿತು. 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮೊದಲ ಪಂದ್ಯ ಸೋತು ಬಳಿಕ ಸರಣಿಯನ್ನು 4-1ರಿಂದ ಗೆದ್ದಿದ್ದು ಈ ವರೆಗೆ ಕೇವಲ 2 ತಂಡಗಳು ಮಾತ್ರ. 1897-98 ಮತ್ತು 1901-02ರಲ್ಲಿ ಇಂಗ್ಲೆಂಡ್‌ ವಿರುದ್ಧ ಆಸ್ಟ್ರೇಲಿಯಾ, 1912ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‌ ಈ ಸಾಧನೆ ಮಾಡಿತ್ತು. ಇದೀಗ ಈ ಸಾಧನೆ ಕೂಡ ಈ ಸಾಧನೆ ಮಾಡಿದೆ.

Exit mobile version