Site icon Vistara News

BCCI Annual Contract: ಅಯ್ಯರ್, ಇಶಾನ್​ಗೆ ಗುತ್ತಿಗೆ ಪಟ್ಟಿ ಸೇರಲು ಇನ್ನೂ ಇದೆ ಅವಕಾಶ; ಈ ಷರತ್ತು ಅನ್ವಯ!

ಮುಂಬಯಿ: ಹಲವು ಬಾರಿ ದೇಶಿಯ ಕ್ರಿಕೆಟ್​ನಲ್ಲಿ ಭಾಗಿಯಾಗುವಂತೆ ಬಿಸಿಸಿಐ(BCCI) ನೀಡಿದ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿದ ಕಾರಣ ಕೇಂದ್ರ ಗುತ್ತಿಗೆ(BCCI Annual Contract) ಪಟ್ಟಿಯಿಂದ ಹೊರಬಿದ್ದ ಇಶಾನ್‌ ಕಿಶನ್​(Ishan Kishan) ಹಾಗೂ ಶ್ರೇಯಸ್‌ ಅಯ್ಯರ್​(Shreyas) ಮರಳಿ ಬಿಸಿಸಿಐ ವಾರ್ಷಿಕ ಗುತ್ತಿಗೆ ಪಡೆಯುವ ಅವಕಾಶವಿದೆ. ಆದರೆ, ಇದಕ್ಕೆ ಒಂದು ಷರತ್ತು ಅನ್ವಯವಾಗಲಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಬಿಸಿಸಿಐ ಕೇಂದ್ರೀಯ ಒಪ್ಪಂದದಿಂದ ಆಟಗಾರರನ್ನು ಕೈಬಿಟ್ಟರೂ ಕೂಡ ಆ ಆಟಗಾರರು ಭಾರತದ ಪರ ಆಡಲು ಲಭ್ಯವಿರುತ್ತಾರೆ. ಆಟಗಾರರ ಪ್ರದರ್ಶನ ಮತ್ತು ಫಿಟ್ನೆಸ್ ಮೇಲೆ ಅವರ ಆಯ್ಕೆ ನಿರ್ಧಾರವಾಗುತ್ತದೆ. ಹೀಗಾಗಿ ಇಶಾನ್​ ಮತ್ತು ಅಯ್ಯರ್​ ಭಾರತ ಪರ ಆಡಲು ಯಾವುದೇ ಸಮಸ್ಯೆ ಇಲ್ಲ ಎನ್ನುವುದು ಈಗಾಗಲೇ ತಿಳಿದುಬಂದಿತ್ತು. ಇದೀಗ ಉಭಯ ಆಟಗಾರರಿಗೆ ಮತ್ತೆ ಕೇಂದ್ರ ಗುತ್ತಿಗೆ ಪಟ್ಟಿಗೆ ಸೇರುವ ಅವಕಾಶವಿದೆ. ಇದಕ್ಕಾಗಿ ಇವರು ಗುತ್ತಿಗೆ ಪಡೆಯಲು ಅಗತ್ಯವಿರುವಷ್ಟು ಪಂದ್ಯಗಳನ್ನು ಆಡಬೇಕಿದೆ. ಈಗಾಗಲೇ ಶ್ರೇಯಸ್​ ಅಯ್ಯರ್​ ಅವರು ರಣಜಿ ಟ್ರೋಫಿಗಾಗಿ ಮುಂಬೈ ಪರ ಆಡಲು ಆರಂಭಿಸಿದ್ದಾರೆ. ಇಶಾನ್​ ಮಾತ್ರ ಶೋಕಿ ಮಾಡುತ್ತಾ ಕೇವಲ ಐಪಿಎಲ್ ಕಡೆ ಮಾತ್ರ ಗಮನಹರಿಸಿದ್ದಾರೆ.​

ವೇತನ ಶ್ರೇಣಿ ಹೇಗೆ?


ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಪ್ರನಿಧಿಸುವ ಆಟಗಾರರಿಗೆ ಬಿಸಿಸಿಐ ಪ್ರತಿ ವರ್ಷ ಅಂದರೆ 12 ತಿಂಗಳಿಗೆ ಅನ್ವಯವಾಗುವಂತೆ ವೇತನ ಒಪ್ಪಂದವನ್ನು ನೀಡುತ್ತದೆ. ಈ ಒಪ್ಪಂದದ ಪ್ರಕಾರ ಆಟಗಾರರು ಈ ವರ್ಷದಲ್ಲಿ ಭಾರತ ಪರ ಆಡಲಿ ಅಥವಾ ಇಲ್ಲದಿರಲಿ ಅವರಿಗೆ ನಿಗದಿಪಡಿಸಿದ ಮೊತ್ತವನ್ನು ಬಿಸಿಸಿಐ ನೀಡುತ್ತದೆ. ಅದಂರಂತೆ ಬಿಸಿಸಿಐ ನಾಲ್ಕು ಗ್ರೇಡ್​ಗಳಾಗಿ ಆಟಗಾರರನ್ನು ವಿಂಗಡಿಸುತ್ತದೆ. A+ ಗ್ರೇಡ್​ ಪಡೆದ ಆಟಗಾರರು ವರ್ಷಕ್ಕೆ 7 ಕೋಟಿ ರೂ. ಮೊತ್ತ ಪಡೆದರೆ, A ಗ್ರೇಡ್​ ಆಟಗಾರರು 5 ಕೋಟಿ ರೂ, B ಗ್ರೇಡ್​ ಆಟಗಾರರು 3 ಕೋಟಿ ಮತ್ತು C ದರ್ಜೆಯ ಆಟಗಾರರು ವಾರ್ಷಿಕ 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

ಇದನ್ನೂ ಓದಿ WPL Points Table: ಯುಪಿ​ಗೆ ಸತತ 2ನೇ ಗೆಲುವು; ಅಂಕಪಟ್ಟಿಯಲ್ಲಿ ಕುಸಿದ ಮುಂಬೈ

2022-23 ಋತುವಿನಲ್ಲಿ ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಸ್ಥಾನ ಪಡೆದಿದ್ದ ಅನುಭವಿ ಆಟಗಾರರಾದ ಚೇತೇಶ್ವರ್ ಪೂಜಾರ, ಉಮೇಶ್ ಯಾದವ್, ಶಿಖರ್ ಧವನ್, ದೀಪಕ್ ಹೂಡಾ, ಯಜುವೇಂದ್ರ ಚಹಲ್ ಮತ್ತು ಅಜಿಂಕ್ಯ ರಹಾನೆ ಈ ಬಾರಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಇವರನ್ನು ಪ್ರಸಕ್ತ ಸಾಲಿನ ಆಟಗಾರರ ಒಪ್ಪಂದ ಪಟ್ಟಿಯಿಂದ ಬಿಸಿಸಿಐ ಕೈಬಿಟ್ಟಿದೆ. ಆಯ್ಕೆ ಸಮಿತಿಯು ವೇಗದ ಬೌಲಿಂಗ್ ಒಪ್ಪಂದಗಳಿಗಾಗಿ ಚೊಚ್ಚಲ ಟೆಸ್ಟ್​ ಆಡಿದ ಆಕಾಶ್ ದೀಪ್, ವಿಜಯ್ ಕುಮಾರ್ ವೈಶಾಕ್, ಉಮ್ರಾನ್ ಮಲಿಕ್, ಯಶ್ ದಯಾಳ್ ಮತ್ತು ವಿದ್ವತ್ ಕಾವೇರಪ್ಪ ಅವರ ಹೆಸರನ್ನು ಶಿಫಾರಸು ಮಾಡಿದೆ.

ಬಿಸಿಸಿಐ ಕೇಂದ್ರ ಒಪ್ಪಂದಗಳ ಪಟ್ಟಿ

ಗ್ರೇಡ್ A+ (4 ಕ್ರಿಕೆಟಿಗರು): ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್​ಪ್ರೀತ್​ ಬುಮ್ರಾ ಮತ್ತು ರವೀಂದ್ರ ಜಡೇಜಾ.

ಗ್ರೇಡ್ ಎ (6 ಕ್ರಿಕೆಟಿಗರು): ಆರ್ ಅಶ್ವಿನ್, ಮೊಹಮ್ಮದ್​ ಶಮಿ, ಮೊಹಮ್ಮದ್ ಸಿರಾಜ್, ಕೆ.ಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.

ಗ್ರೇಡ್ ಬಿ (5 ಕ್ರಿಕೆಟಿಗರು) ಸೂರ್ಯಕುಮಾರ್ ಯಾದವ್, ರಿಷಭ್​ ಪಂತ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.

ಗ್ರೇಡ್ ಸಿ (15 ಕ್ರಿಕೆಟಿಗರು) ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆ.ಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟಿದಾರ್.

Exit mobile version