ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಅನೇಕ ಒಳ ಸಂಗತಿಗಳನ್ನು ಖಾಸಗಿ ಟಿವಿಯ ರಹಸ್ಯ ಕಾರ್ಯಾಚರಣೆಯಲ್ಲಿ ಬಾಯಿಬಿಟ್ಟಿದ್ದ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಭಾರತೀಯ ಕ್ರಿಕೆಟ್ ಮಂಡಳಿ (BCCI) ಕಾರ್ಯದರ್ಶಿ ಜಯ್ ಶಾ (Jay Shah) ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ(Chetan Sharma resign).
ಖಾಸಗಿ ಸುದ್ದಿ ವಾಹನಿಯೊಂದು ನಡೆಸಿದ್ದ ರಹಸ್ಯ ಕಾರ್ಯಾಚರಣೆಯ ವೇಳೆ, ಭಾರತೀಯ ಕ್ರಿಕೆಟ್‌ನ ವಿಶೇಷ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದರು. ಚೇತನ್ ಶರ್ಮಾ ಅವರು ಬಾಯಿಬಿಟ್ಟ ಸಂಗತಿಗಳಿಂದಾಗಿ ಬಿಸಿಸಿಐಗೆ ಭಾರೀ ಮುಜಗರವುಂಟಾಗಿತ್ತು.
ರಹಸ್ಯ ಕಾರ್ಯಾಚರಣೆ ವೇಳೆ, ಭಾರತೀಯ ಕ್ರಿಕೆಟ್ ತಂಡದ ಬಹಳಷ್ಟು ಆಟಗಾರರು ಶೇ.80ರಿಂದ 85ರಷ್ಟು ಫಿಟ್ ಇದ್ದರೂ, ಇಂಜೆಕ್ಷನ್ ತೆಗೆದುಕೊಂಡು ಟೆಸ್ಟ್ ಪಾಸು ಮಾಡುತ್ತಾರೆಂದು ವಿವಾದಾತ್ಮಕ ಮಾಹಿತಿಯನ್ನು ಹೊರ ಹಾಕಿದ್ದರು. ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ನಡುವಿನ ಇಗೋ ಪ್ರಾಬ್ಲೆಮ್, ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ರೋಹಿತ್ ಶರ್ಮಾ ಸೇರಿದಂತೆ ಅನೇಕರ ಬಗ್ಗೆ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.
ಇದನ್ನೂ ಓದಿ: Chetan Sharma: ಟಿ20ಯಲ್ಲಿ ರೋಹಿತ್, ಕೊಹ್ಲಿ ಆಟ ಮುಗಿದಿದೆ; ಚೇತನ್ ಶರ್ಮಾ
ಚೇತನ್ ಶರ್ಮಾ ಬಾಯಿಬಿಟ್ಟ ಸಂಗತಿಗಳು ಯಾವವು?
- ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಅರ್ಧ ಫಿಟ್ ಆಗಿದ್ದರೂ ಶೇಕಡ 100ರಷ್ಟು ಫಿಟ್ ಆಗಲು ನಿಷೇಧಿತ ಚುಚ್ಚುಮದ್ದು ಹಾಕಿಸಿಕೊಳ್ಳುತ್ತಾರೆ.
- ಟಿ20 ಕ್ರಿಕೆಟ್ನಲ್ಲಿ ರೋಹಿತ್ ಮತ್ತು ವಿರಾಟ್ ಕೊಹ್ಲಿ ಅವರ ಸೇವೆ ಮುಗಿದಿದ್ದು. ಹಾರ್ದಿಕ್ ಪಾಂಡ್ಯ ಅವರೇ ನಾಯಕನಾಗಿ ಮುಂದುವರಿಯಲಿದ್ದಾರೆ
- ಭಾರತ ತಂಡದಲ್ಲಿ ಎರಡು ಬಣಗಳಿವೆ. ಒಂದನ್ನು ರೋಹಿತ್ ಶರ್ಮಾ ಮುನ್ನಡೆಸಿದರೆ, ಇನ್ನೊಂದನ್ನು ವಿರಾಟ್ ಕೊಹ್ಲಿ ಮುನ್ನಡೆಸುತ್ತಿದ್ದಾರೆ