ಮುಂಬಯಿ: ಭಾರತ ತಂಡ ಕಳೆದ 12 ವರ್ಷಗಳಿಂದ ಐಸಿಸಿ ಟ್ರೊಫಿಯನ್ನೇ ಗೆದ್ದಿಲ್ಲ. ಸೆಮಿ ಫೈನಲ್ ಹಂತದಲ್ಲಿಯೇ ಭಾರತ ತಂಡದ ಹೋರಾಟಗಳು ಮುಕ್ತಾಯಗೊಳ್ಳುತ್ತಿವೆ. ಈ ಬಾರಿ ಭಾರತದ ಆತಿಥ್ಯದಲ್ಲಿಯೇ ಏಕ ದಿನ ವಿಶ್ವ ಕಪ್ ಆಯೋಜನೆಗೊಂಡಿದೆ. ಅದೇ ರೀತಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ಗೆ ಭಾರತ ಪ್ರವೇಶ ಪಡೆದಿದೆ. ಹೀಗಾಗಿ ಈ ಬಾರಿ ಟ್ರೋಫಿ ಗೆಲ್ಲುವುದಕ್ಕೆ ಎರಡು ಅವಕಾಶಗಳು ಸೃಷ್ಟಿಯಾಗಿವೆ. ಆದರೆ, ಟೀಮ್ ಇಂಡಿಯಾದ ಆಟಗಾರರ ಗಾಯದ ಸಮಸ್ಯೆ ದೊಡ್ಡ ಮಟ್ಟದ ಆತಂಕಕ್ಕೆ ಕಾರಣವಾಗಿದೆ. ಜಸ್ಪ್ರಿತ್ ಬುಮ್ರಾ ಹಾಗೂ ಶ್ರೇಯಸ್ ಅಯ್ಯರ್ ಅವರಂಥ ಪ್ರಮುಖ ಆಟಗಾರರೇ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಖಾತ್ರಿಯಾಗಿಲ್ಲ. ಇದರ ಬಗ್ಗೆ ದೊಡ್ಡ ಚರ್ಚೆಗಳು ನಡೆಯುತ್ತಿವೆ. ಏತನ್ಮಧ್ಯೆ ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತಿ ಅವರು ಐಪಿಎಲ್ ಸೇರಿದಂತೆ ಹಲವಾರು ಕೆಲವು ಹಿರಿಯ ಆಟಗಾರರು, ಮಿತಿ ಮೀರಿದ ಕ್ರಿಕೆಟ್ ಆಟಗಾರರ ಗಾಯದ ಸಮಸ್ಯೆಗೆ ಕಾರಣ ಎಂದು ಹೇಳಿಕೆ ಕೊಟ್ಟಿದ್ದರು. ಅದಕ್ಕೆ ಬಿಸಿಸಿಐ ಖಜಾಂಜಿ ಅರುಣ್ ಧುಮಾಲ್ ತಿರುಗೇಟು ಕೊಟ್ಟಿದ್ದಾರೆ.
ಸ್ಪೋರ್ಟ್ಸ್ ಯಾರಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರವಿ ಶಾಸ್ತ್ರಿ, ವರ್ಕ್ಲೋಡ್ ಮ್ಯಾನೇಜ್ಮೆಂಟ್ ಕಡೆ ಬಿಸಿಸಿಐ ಹೆಚ್ಚು ಒತ್ತು ಕೊಡಬೇಕು. ಐಪಿಎಲ್ ಫ್ರಾಂಚೈಸಿಗಳ ಜತೆ ಮಾತನಾಡಿ ರಾಷ್ಟ್ರೀಯ ತಂಡ ಸೇವೆಯಲ್ಲಿರುವ ಆಟಗಾರರನ್ನು ಹೆಚ್ಚು ಪಂದ್ಯಗಳಿಗೆ ಬಳಸದಂತೆ ಮನವರಿಕೆ ಮಾಡಬೇಕು ಎಂದು ಹೇಳಿದ್ದರು. ಪ್ರಮುಖವಾಗಿ ಎಲ್ಲ ಆಟಗಾರರು ಭಾರತ ತಂಡ ಪರವಾಗಿ ಆಡಬೇಕಾಗಿದೆ. ಹೆಚ್ಚು ಪಂದ್ಯಗಳಲ್ಲಿ ಆಡಿದಂತೆ ಹೆಚ್ಚೆಚ್ಚು ಗಾಯಗಳಾಗುತ್ತವೆ. ಹೀಗಾಗಿ ರಾಷ್ಟ್ರೀಯ ತಂಡಕ್ಕೆ ಆಟಗಾರರು ಇರುವಂತೆ ನೋಡಿಕೊಳ್ಳುವುದಕ್ಕೆ ಬಿಸಿಸಿಐ ಫ್ರಾಂಚೈಸಿಗಳ ಜತೆ ಚರ್ಚೆ ಮಾಡಬೇಕು ಎಂದು ಶಾಸ್ತ್ರಿ ಹೇಳಿದ್ದರು.
ಈ ಮಾತಿಗೆ ಪ್ರತಿಕ್ರಿಯೆ ಕೊಟ್ಟಿರುವ ಅರುಣ್ ಧುಮಾಲ್, ಭಾರತ ತಂಡದ ಆಟಗಾರರಾದ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ಐಪಿಎಲ್ ಆಡುವ ವೇಳೆ ಗಾಯದ ಸಮಸ್ಯೆಗೆ ಒಳಗಾಗಿಲ್ಲ ಎಂದು ಹೇಳಿದರು.
ನಮ್ಮ ದೇಶದಲ್ಲಿ ಒಂದು ದೊಡ್ಡ ಸಮಸ್ಯೆ ಏನೆಂದೆರ ಕಂಪನಿ ಅಥವಾ ವೈಯಕ್ತಿಕವಾಗಿ ಯಾರದರೂ ಒಳ್ಳೆಯ ಸಂಪಾದನೆ ಮಾಡುತ್ತಿದ್ದಾರೆ ಎಂದರೆ ಅವರ ಬಗ್ಗೆ ಶಂಕೆ ವ್ಯಕ್ತಪಡಿಸುವುದು. ಅಂತೆಯೇ ಬಿಸಿಸಿಐ ಐಪಿಎಲ್ ಮೂಲಕ ಗಳಿಸುತ್ತಿರುವುದನ್ನೂ ಸಂಶಯದಿಂದ ನೋಡಲಾಗುತ್ತಿದೆ. ವಿರಾಟ್ ಕೊಹ್ಲಿ ಆರಂಭದಿಂದಲೇ ಐಪಿಎಲ್ ಆಡುತ್ತಿದ್ದಾರೆ. ಆದರೆ ಅವರೆಂದೂ ಗಾಯದ ಸಮಸ್ಯೆಗೆ ಒಳಗಾಗಿಲ್ಲ ಎಂದು ಹೇಳಿದರು.
ಇದನ್ನೂ ಓದಿ : PV Sindhu | ಗಾಯದ ಸಮಸ್ಯೆಯಿಂದ ಮುಕ್ತಿ ಪಡೆದ ಪಿ. ವಿ ಸಿಂಧೂ, ಮಲೇಷ್ಯಾ ಓಪನ್ಗೆ ಸಜ್ಜು
ಶ್ರೇಯಸ್ ಅಯ್ಯರ್ ಗಾಯಗೊಂಡಿರುವುದು ಐಪಿಎಲ್ನಿಂದಾಗಿ ಅಲ್ಲ. ಅವರು ಐಪಿಎಲ್ನಿಂದ ಹಣ ಮಾಡುತ್ತಿದ್ದಾರೆ ಎಂಬ ಕಾರಣ ಮುಂದಿಟ್ಟು ಅವರ ಮೇಲೆ ಆರೋಪಗಳ ಸುರಿಮಳೆ ಸುರಿಸಲಾಗುತ್ತಿದೆ. ಗಾಯದ ಸಮಸ್ಯೆ ಎಂಬುದು ಕ್ರೀಡಾ ಕ್ಷೇತ್ರದಲ್ಲಿ ಸಾಮಾನ್ಯ ಸಂಗತಿ. ನಮ್ಮ ಬ್ಯಾಡ್ಮಿಂಟನ್ ಆಟಗಾರರು ಕೂಡ ಗಾಯಗೊಳ್ಳುತ್ತಾರೆ. ಅವರು ಐಪಿಎಲ್ ಆಡುತ್ತಾರೆಯೇ? ವಿದೇಶಿ ಆಟಗಾರರು ಬಂದು ಆಡಿ ಹೋಗುತ್ತಾರೆ. ಅವರಿಗೆ ಏನಾದರೂ ಸಮಸ್ಯೆ ಆಗುತ್ತದೆಯೇ ಎಂದು ಧುಮಾಲ್ ಪ್ರಶ್ನಿಸಿದರು.
ಐಪಿಎಲ್ ಆರಂಭಕ್ಕೆ ಮೊದಲು ನಾಯಕ ರೋಹಿತ್ ಶರ್ಮಾ ಕೂಡ ಹೆಚ್ಚು ಕ್ರಿಕೆಟ್ನಿಂದ ಗಾಯದ ಸಮಸ್ಯೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದೇ ವೇಳೆ ಅವರು ಆಟಗಾರರನ್ನು ಆಡಿಸುವುದು ಅಥವಾ ಬಿಡುವುದು ಫ್ರಾಂಚೈಸಿ ಮಾಲೀಕರಿಗೆ ಬಿಟ್ಟ ಸಂಗತಿ ಎಂದು ಹೇಳಿದ್ದರು.